ಶನಿವಾರ, ಆಗಸ್ಟ್ 20, 2022
21 °C

ಐಎಸ್‌ಎಲ್‌ನಲ್ಲಿ ಲಲೆಂಗ್‌ಮಾವಿಯಾ ಮೋಡಿ

ಬಸವರಾಜ ದಳವಾಯಿ Updated:

ಅಕ್ಷರ ಗಾತ್ರ : | |

Prajavani

ಲಲೆಂಗ್‌ಮಾವಿಯಾ ರಾಲ್ಟೆ... ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿಯಲ್ಲಿ ನಿಖರ ಪಾಸ್‌ಗಳು, ಚುರುಕಿನ ಆಟದ ಮೂಲಕ ಗಮನಸೆಳೆಯುತ್ತಿರುವ ಉದಯೋನ್ಮುಖ ಪ್ರತಿಭೆ. ನಾರ್ತ್‌ಈಸ್ಟ್ ಎಫ್‌ಸಿ ತಂಡದ ಪರ ಕಣಕ್ಕಿಳಿದಿರುವ ಈ ಆಟಗಾರ ಟೂರ್ನಿಯ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನ ನಾಯಕ (20 ವರ್ಷ) ಎಂಬ ಹಿರಿಮೆ ಹೊಂದಿದವರು. ಅವರ ಸಾರಥ್ಯದಲ್ಲಿ ತಂಡ ಅಜೇಯವಾಗಿ ಮುನ್ನುಗ್ಗುತ್ತಿದೆ.

ಆರು ವರ್ಷದವರಿದ್ದಾಗಲೇ ಫುಟ್‌ಬಾಲ್‌ ಮೇಲೆ ಆಸಕ್ತಿ ಬೆಳೆಸಿಕೊಂಡ ಹುಡುಗ, ಶೀಘ್ರದಲ್ಲೇ ಪ್ರಗತಿ ಸಾಧಿಸಿದ್ದು ಗಮನಾರ್ಹ. ಈಶಾನ್ಯ ಭಾಗದ ಮಿಜೋರಾಂನ ಲಲೆಂಗ್‌ಮಾವಿಯಾ, 2017ರಲ್ಲಿ ನಡೆದ 17 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. ಆಕ್ರಮಣ ವಿಭಾಗದಲ್ಲಿ ಮೋಡಿ ಮಾಡಬಲ್ಲರು ಈ ಚತುರ ಮಿಡ್‌ಫೀಲ್ಡರ್‌.

ಲಲೆಂಗ್‌ಮಾವಿಯಾ 2017–18ರ ಸಾಲಿನಲ್ಲಿ ಐ–ಲೀಗ್ ಟೂರ್ನಿಗೆ ಇಂಡಿಯನ್ ಆ್ಯರೋಸ್‌ ತಂಡದ ಪರ ಪದಾರ್ಪಣೆ ಮಾಡಿದರು. 2018–19ರ ಆವೃತ್ತಿಯಲ್ಲಿ 11 ಪಂದ್ಯಗಳಲ್ಲಿ ಆಡಿದ್ದರು. ಅದೇ ಸಾಮರ್ಥ್ಯದ ಆಧಾರದ ಮೇಲೆ 2019–20ರ ಸಾಲಿನ ಐಎಸ್‌ಎಲ್ ಟೂರ್ನಿಯಲ್ಲಿ ನಾರ್ತ್‌ಈಸ್ಟ್ ಯುನೈಟೆಡ್‌ ಎಫ್‌ಸಿ ತಂಡದ ಪೋಷಾಕು ತೊಡಲು ಅವರಿಗೆ ಸಾಧ್ಯವಾಯಿತು. ಆ ಟೂರ್ನಿಯಲ್ಲಿ ಪಾಸ್‌ಗಳನ್ನು ನೀಡುವಲ್ಲಿ ಅವರು ತೋರಿದ ಚುರುಕುತನ ಗಮನಸೆಳೆಯಿತು. ಆ ಆವೃತ್ತಿಯಲ್ಲಿ ನಾರ್ತ್‌ಈಸ್ಟ್ ತಂಡ ಒಂಬತ್ತನೇ ಸ್ಥಾನ ಗಳಿಸಿದರೂ ಲಲೆಂಗ್‌ಮಾವಿಯಾ ಭರವಸೆಯ ಆಟಗಾರನಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಈ ಬಾರಿಯ ಐಎಸ್‌ಎಲ್ ಟೂರ್ನಿಯಲ್ಲಿ ಪ್ರಬಲ ಗೋವಾ ಎಫ್‌ಸಿ ತಂಡದ ಎದುರು ನಾರ್ತ್‌ಈಸ್ಟ್ ಯುನೈಟೆಡ್‌ ಎಫ್‌ಸಿ 1–1ರಿಂದ ಡ್ರಾ ಸಾಧಿಸಿತು. ಈ ಪಂದ್ಯದ ಮೂಲಕ ಲಲೆಂಗ್‌ಮಾವಿಯಾ ತಂಡದ ಸಾರಥ್ಯ ವಹಿಸಿಕೊಂಡರು.

‘ಅಪುಯಾ‘ ಎಂದು ಕರೆಯಿಸಿಕೊಳ್ಳುವ ಲಲೆಂಗ್‌ಮಾವಿಯಾ ನಾಯಕತ್ವದಲ್ಲಿ ನಾರ್ತ್‌ಈಸ್ಟ್ ಎಫ್‌ಸಿ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು, ಅಜೇಯ ಓಟದೊಂದಿಗೆ ಸಾಗುತ್ತಿದೆ. ಮಿಜೊರಾಂ ಆಟಗಾರನ ನಾಯಕತ್ವದ ಗುಣಗಳು ಗೋಚರಿಸುತ್ತಿವೆ. ಸದ್ಯ ಟೂರ್ನಿಯಲ್ಲಿ ಆರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು, ನಾಲ್ಕರಲ್ಲಿ ಡ್ರಾ ಸಾಧಿಸಿರುವ ಆ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದರಲ್ಲಿ ಲಲೆಂಗ್‌ಮಾವಿಯಾ ಅವರ ಕೊಡುಗೆ ಗಣನೀಯ ಎಂಬುದು ಸತ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು