ಸೋಮವಾರ, ಡಿಸೆಂಬರ್ 6, 2021
27 °C

ಒಡಿಶಾ ಎಫ್‌ಸಿ ಸೇರಿದ ಸ್ಟೀವನ್ ಟೇಲರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ: ಇಂಗ್ಲಿಷ್ ಪ್ರೀಮಿಯರ್ ಲೀಗ್‌ ಫುಟ್‌ಬಾಲ್ ಟೂರ್ನಿಗಳಲ್ಲಿ ಆಡಿ ಹೆಸರು ಗಳಿಸಿರುವ ಸ್ಟೀವನ್ ಟೇಲರ್ ಅವರು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯಲ್ಲಿ ಆಡುವ ಒಡಿಶಾ ಎಫ್‌ಸಿ ತಂಡವನ್ನು ಸೇರಿದ್ದಾರೆ.

ರಕ್ಷಣಾ ವಿಭಾಗದ ಆಟಗಾರ ಆಗಿರುವ ಸ್ಟೀವನ್ ಒಂದು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದವನ್ನು ಎರಡು ವರ್ಷಗಳ ವರೆಗೆ ಮುಂದುವರಿಸುವುದಕ್ಕೂ ಅವಕಾಶವಿದೆ.

ಇಂಗ್ಲೆಂಡ್‌ನ ನ್ಯೂ ಕ್ಯಾಸಲ್ ಯುನೈಟೆಡ್ ತಂಡವನ್ನು ಸೇರುವ ಮೂಲಕ 2003–04ರಲ್ಲಿ ಸೀನಿಯರ್ ವಿಭಾಗಕ್ಕೆ ಪದಾರ್ಪಣೆ ಮಾಡಿದ ಸ್ಟೀವನ್‌ಗೆ ಈಗ 34 ವರ್ಷ. ಪ್ರೀಮಿಯರ್ ಲೀಗ್‌ನಲ್ಲಿ ಒಂದು ದಶಕದ ಕಾಲ ಆಡಿರುವ ಅವರು 2016ರಲ್ಲಿ ಅಮೆರಿಕದ ವೃತ್ತಿಪರ ಕ್ಲಬ್‌ ಪೋರ್ಟ್‌ಲ್ಯಾಂಡ್ ಟಿಂಬರ್ಸ್‌ಗೆ ಸೇರಿದರು. 

ಇಂಗ್ಲೆಂಡ್‌ ’ಬಿ‘ ಮತ್ತು ವೈಕಾಂಬೆ ವಾಂಡರರ್ಸ್‌ ಎಫ್‌ಸಿ, ಇಪ್‌ಸ್ವಿಚ್ ಟೌನ್ ಎಫ್‌ಸಿ, ಪೀಟರ್‌ಬರೊ ಯುನೈಟೆಡ್ ಎಫ್‌ಸಿ ಮತ್ತಿತರ ತಂಡಗಳ ಪರವಾಗಿಯೂ ಅವರು ಕಣಕ್ಕೆ ಇಳಿದಿದ್ದಾರೆ. ಇಂಗ್ಲೆಂಡ್‌ನ 16, 17, 20 ಮತ್ತು 21 ವರ್ಷದೊಳಗಿನವರ ತಂಡಗಳಲ್ಲೂ ಸ್ಥಾನ ಗಳಿಸಿದ್ದರು.

ಒಡಿಶಾ ಎಫ್‌ಸಿ ಜೊತೆ ಒಪ‍್ಪಂದ ಮಾಡಿಕೊಳ್ಳುವ ಮೊದಲು ಅವರು ಆಸ್ಟ್ರೇಲಿಯಾ ಎ–ಲೀಗ್‌ನಲ್ಲಿ ಆಡುವ ನ್ಯೂಜಿಲೆಂಡ್‌ನ ವೆಲಿಂಗ್ಟನ್ ಫೀನಿಕ್ಸ್ ಎಫ್‌ಸಿ ತಂಡದಲ್ಲಿದ್ದರು. ಅವರ ಅಮೋಘ ಆಟದ ಬಲದಿಂದ ವೆಲಿಂಗ್ಟನ್ ಫೀನಿಕ್ಸ್ ಕಳೆದ ಬಾರಿಯ ಲೀಗ್‌ನಲ್ಲಿ ಮೂರನೇ ಸ್ಥಾನ ಗಳಿಸಿತ್ತು. ಎರಡು ಆವೃತ್ತಿಗಳಲ್ಲಿ ಒಟ್ಟು 49 ಪಂದ್ಯಗಳನ್ನು ಆಡಿರುವ ಅವರು ರಕ್ಷಣಾ ವಿಭಾಗದ ಸುಭದ್ರ ಆಟಗಾರ ಎನಿಸಿಕೊಂಡಿದ್ದಾರೆ.

'ಸಾಧನೆಗಳೇ ಸ್ಟೀವನ್ ಅವರ ಪರಿಚಯ ಮಾಡುತ್ತವೆ. ಆದ್ದರಿಂದ ಅವರ ಬಗ್ಗೆ ಏನನ್ನೂ ಹೇಳಬೇಕಾದದ್ದಿಲ್ಲ. ಅವರ ಉಪಸ್ಥಿತಿಯು ನಮ್ಮ ತಂಡದ ಯುವ ಆಟಗಾರರಲ್ಲಿ ಹುರುಪು ತುಂಬಲಿವೆ. ಅತ್ಯಪೂರ್ವ ಡಿಫೆಂಡರ್ ಆಗಿರುವ ಸ್ಟೀವನ್‌ ನಮ್ಮ ತಂಡವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಭರವಸೆ ಇದೆ’ ಎಂದು ಒಡಿಶಾ ಎಫ್‌ಸಿ ಮುಖ್ಯ ಕೋಚ್ ಸ್ಟುವರ್ಟ್‌ ಬಾಕ್ಸ್ಟರ್ ಅಭಿಪ್ರಾಯಪಟ್ಚರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು