ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಫ್‌ ಕಪ್‌ ಫುಟ್‌ಬಾಲ್‌: ಫೈನಲ್‌ನಲ್ಲಿ ಮುಗ್ಗರಿಸಿದ ಭಾರತ

ಇಬ್ರಾಹಿಂ ಮಹುಧಿ ಹುಸೇನ್‌, ಅಲಿ ಫಾಸಿರ್ ಮಿಂಚು; ಮಾಲ್ಡೀವ್ಸ್‌ಗೆ ಪ್ರಶಸ್ತಿ
Last Updated 15 ಸೆಪ್ಟೆಂಬರ್ 2018, 18:20 IST
ಅಕ್ಷರ ಗಾತ್ರ

ಢಾಕಾ: ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಲು ವಿಫಲವಾದ ಭಾರತ ತಂಡದವರು ದಕ್ಷಿಣ ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್‌ (ಸ್ಯಾಫ್‌) ಕಪ್‌ ಟೂರ್ನಿಯ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.

ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಮಾಲ್ಡೀವ್ಸ್‌ 2–1 ಗೋಲುಗಳಿಂದ ಭಾರತವನ್ನು ಮಣಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಎರಡನೇ ಬಾರಿ ಟ್ರೋಫಿ ಜಯಿಸಿದ ಸಾಧನೆ ಮಾಡಿತು. 2008ರಲ್ಲಿ ಈ ತಂಡ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. ಹ್ಯಾಟ್ರಿಕ್ ಸಾಧನೆ ಮಾಡುವ ಭಾರತದ ಕನಸು ಕಮರಿತು.

ಏಳು ಬಾರಿ ಪ್ರಶಸ್ತಿ ಗೆದ್ದಿರುವ, ಹಾಲಿ ಚಾಂಪಿಯನ್‌ ಭಾರತ ತಂಡ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿತು. ಭಾರತದ ಆಟಗಾರರು ಚೆಂಡು ಹೆಚ್ಚು ಸಮಯ ತಮ್ಮ ಬಳಿ ಇರುವಂತೆ ನೋಡಿಕೊಂಡಿದ್ದರು. ಜೊತೆಗೆ ನಿರಂತರವಾಗಿ ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸುವ ಪ್ರಯತ್ನ ನಡೆಸಿದರು. ಆಟಗಾರರ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ.

19ನೇ ನಿಮಿಷದಲ್ಲಿ ಇಬ್ರಾಹಿಂ ಮಹುಧಿ ಹುಸೇನ್‌ ಗೋಲು ಗಳಿಸಿ ಮಾಲ್ಡಿವ್ಸ್‌ಗೆ ಮುನ್ನಡೆ ಗಳಿಸಿಕೊಟ್ಟರು. ತಿರುಗೇಟು ನೀಡಲು ಭಾರತ ನಡೆಸಿದ ಪ್ರಯತ್ನಗಳೆಲ್ಲವೂ ವಿಫಲಗೊಂಡವು. 0–1 ಗೋಲಿನ ಹಿನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಭಾರತಕ್ಕೆ ದ್ವಿತೀಯಾರ್ಧದಲ್ಲೂ ಪರಿಣಾಮಕಾರಿ ಆಟ ಆಡಲು ಆಗಲಿಲ್ಲ. 66ನೇ ನಿಮಿಷದಲ್ಲಿ ಗೋಲ್‌ಕೀಪರ್‌ಗೆ ಚಳ್ಳೆ ಹಣ್ಣು ತಿನ್ನಿಸಿದ ಅಲಿ ಫಾಸಿರ್‌ ಸುಲಭ ಗೋಲು ಗಳಿಸಿ ಮಾಲ್ಡಿವ್ಸ್ ಪಾಳಯದಲ್ಲಿ ಸಂಭ್ರಮ ಗರಿಗೆದರುವಂತೆ ಮಾಡಿದರು. 90+2ನೇ ನಿಮಿಷದಲ್ಲಿ ಸುಮೀತ್‌ ಪಾಸಿ ಅವರು ಸಮಾಧಾನಕರ ಗೋಲು ಗಳಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT