ಥಿಂಪು: ಹಾಲಿ ಚಾಂಪಿಯನ್ ಭಾರತ ತಂಡವು, 17 ವರ್ಷದೊಳಗಿನವರ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 1–0 ಗೋಲಿನಿಂದ ಸೋಲಿಸಿ ಶುಭಾರಂಭ ಮಾಡಿತು.
ಚಾಂಗ್ಲಿಮಿತಾಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದ ಬಹುಭಾಗ ಬಾಂಗ್ಲಾದೇಶ ತಂಡದ ರಕ್ಷಣಾಕೋಟೆ ಭೇದಿಸಲು ಪರದಾಡಿದ ಭಾರತದ ಮುನ್ಪಡೆ ಆಟಗಾರರು ಪಂದ್ಯದ ಅಂತಿಮ ಹಂತದಲ್ಲಿ ನಿರ್ಣಾಯಕ ಗೋಲು ಗಳಿಸಿದರು. 90+1ನೇ ನಿಮಿಷ ರಕ್ಷಣೆ ಆಟಗಾರ ಸುಮಿತ್ ಶರ್ಮಾ ಹೆಡ್ ಮಾಡಿದ ಚೆಂಡು ಬಾಂಗ್ಲಾದೇಶದ ಗೋಲುಬಲೆಗೆ ಹೋಯಿತು.
ಮೂರು ತಂಡಗಳ ಗುಂಪಿನಲ್ಲಿ ಭಾರತ, ಈ ಗೆಲುವಿನಿಂದ ಮೂರು ಪಾಯಿಂಟ್ ಪಡೆಯಿತು. ಆದರೆ ಈ ಗೆಲುವು ಸಂತೃಪ್ತಿಯ ರೀತಿಯಲ್ಲೇನೂ ಇರಲಿಲ್ಲ. ಬಾಂಗ್ಲಾದೇಶದ ಬಿಗಿ ರಕ್ಷಣೆ ಭಾರತದ ಮುನ್ಪಡೆ ಆಟಗಾರರು ಪರದಾಡುವಂತೆ ಮಾಡಿತು.