ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾ ಲಿಗಾ ಫುಟ್‌ಬಾಲ್‌: ಗೆಲುವಿನ ಸಿಹಿ ಸವಿದ ರಿಯಲ್‌ ಮ್ಯಾಡ್ರಿಡ್‌

ಮಿಂಚಿದ ರಾಮೊಸ್‌, ಕ್ರೂಸ್‌, ಮಾರ್ಷೆಲೊ
Last Updated 15 ಜೂನ್ 2020, 8:04 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌: ಕೋವಿಡ್‌–19 ಬಿಕ್ಕಟ್ಟಿನಿಂದಾಗಿ ಸುಮಾರು ಎರಡೂವರೆ ತಿಂಗಳ ಕಾಲ ‘ಗೃಹಬಂಧಿ’ಗಳಾಗಿದ್ದ ರಿಯಲ್‌ ಮ್ಯಾಡ್ರಿಡ್‌ ತಂಡದ ಆಟಗಾರರು, ಮತ್ತೆ ಮೈದಾನಕ್ಕಿಳಿದು ಮಿಂಚಿದರು.

ಎಸ್ಟಾಡಿಯೊ ಅಲ್ಫ್ರೆಡೊ ಡಿ ಸ್ಟೆಫಾನೊ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಲಾ ಲಿಗಾ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ರಿಯಲ್‌ ಮ್ಯಾಡ್ರಿಡ್‌ 3–1 ಗೋಲುಗಳಿಂದ ಈಬರ್‌ ತಂಡವನ್ನು ಮಣಿಸಿತು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 59ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಪಾಡಿಕೊಂಡಿತು.

ಖಾಲಿ ಅಂಗಳದಲ್ಲಿ ನಡೆದ ಹೋರಾಟದಲ್ಲಿ ಮ್ಯಾಡ್ರಿಡ್‌ ತಂಡ ಆರಂಭದಲ್ಲೇ ಖಾತೆ ತೆರೆಯಿತು. ನಾಲ್ಕನೇ ನಿಮಿಷದಲ್ಲಿ ಟೋನಿ ಕ್ರೂಸ್‌ ಕಾಲ್ಚಳಕ ತೋರಿದರು. ನಂತರ ಈಬರ್‌ ತಂಡ ಅಲ್ಪ‍ಪ್ರತಿರೋಧ ಒಡ್ಡಿತು. 30ನೇ ನಿಮಿಷದಲ್ಲಿ ಮ್ಯಾಡ್ರಿಡ್‌ ತಂಡ ಮತ್ತೆ ಮೇಲುಗೈ ಸಾಧಿಸಿತು. ಏಡನ್‌ ಹಜಾರ್ಡ್‌ ತಮ್ಮತ್ತ ಒದ್ದು ಕಳುಹಿಸಿದ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ಸರ್ಜಿಯೊ ರಾಮೊಸ್‌, ಅದನ್ನು ಚಾಕಚಕ್ಯತೆಯಿಂದ ಗುರಿ ಸೇರಿಸಿ ತಂಡದ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.

37ನೇ ನಿಮಿಷದಲ್ಲಿ ಮಾರ್ಷೆಲೊ ವಿಯೆರಾ ಅವರು ಚೆಂಡನ್ನು ಗುರಿ ಮುಟ್ಟಿಸಿ ತಂಡದ ಗೆಲುವನ್ನು ಖಾತರಿಪಡಿಸಿದರು. ಬ್ರೆಜಿಲ್‌ನ ಮಾರ್ಷೆಲೊ ಅವರು ಗೋಲು ಗಳಿಸಿದ ಬಳಿಕ ಮೈದಾನದಲ್ಲಿ ಮಂಡಿಯೂರಿ ಸಂಭ್ರಮಿಸಿದರು. ಆ ಮೂಲಕ ಜಾರ್ಜ್‌ ಫ್ಲಾಯ್ಡ್‌ ಸಾವನ್ನು ಖಂಡಿಸಿ ವಿಶ್ವದಾದ್ಯಂತ ನಡೆಯುತ್ತಿರುವ ‘ಬ್ಲಾಕ್‌ ಲೈವ್ಸ್‌ ಮ್ಯಾಟರ್‌’ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

ಮೇ 25ರಂದು ಮಿನ್ನೆಪೊಲಿಸ್‌ನಲ್ಲಿ ಶ್ವೇತವರ್ಣದ ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್‌ ಎಂಬುವರು ಫ್ಲಾಯ್ಡ್‌ಗೆ ಕೈಕೋಳ ತೊಡಿಸಿ ಕುತ್ತಿಗೆಯ ಮೇಲೆ ಎಂಟು ನಿಮಿಷಗಳ ಕಾಲ ಮಂಡಿಯೂರಿ ನೆಲಕ್ಕೆ ಅದುಮಿ ಹಿಡಿದಿದ್ದರು. ಹೀಗಾಗಿ ಫ್ಲಾಯ್ಡ್‌ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಇದು ಅಮೆರಿಕದಾದ್ಯಂತ ಭಾರಿ ಜನಾಕ್ರೋಶಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT