ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌: ಜಪಾನ್‌ಗೆ ಸುಲಭ ಗೆಲುವು

Published 23 ಜುಲೈ 2023, 5:07 IST
Last Updated 23 ಜುಲೈ 2023, 5:07 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್‌ (ನ್ಯೂಜಿಲೆಂಡ್‌),: ಹಿನಾಟಾ ಮಿಯಾಝಾವಾ ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಜಪಾನ್‌ ವನಿತೆಯರು ಶನಿವಾರ ನಡೆದ ವಿಶ್ವಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ ಜಾಂಬಿಯಾ ತಂಡದ ಮೇಲೆ 5–0 ಗೋಲುಗಳ ಸುಲಭ ಗೆಲುವು ಪಡೆದರು. ಇದು ಎರಡೂ ತಂಡಗಳಿಗೆ ಮೊದಲ ಪಂದ್ಯವಾಗಿತ್ತು.

 ಹಿನಾಟಾ ಅವರು ಈ ‘ಸಿ’ ಗುಂಪಿನ ಪಂದ್ಯದ ಪೂರ್ವಾರ್ಧ ಮತ್ತು ಉತ್ತರಾರ್ಧದಲ್ಲಿ ತಲಾ ಒಂದು ಗೋಲು ಗಳಿಸಿದರು. ಎರಡು ಬಾರಿ ‘ಆಫ್‌ಸೈಡ್‌’ ಆಗಿ ಗೋಲು ಕಳೆದುಕೊಂಡ ತನಾಕಾ, 55ನೇ ನಿಮಿಷ ಜುನ್‌ ಎಂಡೊ ಅವರ ಪಾಸ್‌ನಲ್ಲಿ ಗೋಲು ಗಳಿಸಿದರು. 71ನೇ ನಿಮಿಷ ಎಂಡೊ ಮತ್ತು ಪಂದ್ಯ ಮುಗಿಯುವ ಕೆಲಕ್ಷಣಗಳ ಮೊದಲು ರಿಕೊ ಯುಕಿ ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದರು.

ಮಹಿಳಾ ವಿಶ್ವಕಪ್‌ನಲ್ಲಿ ಮೊದಲ ಬಾರಿ ಆಡುತ್ತಿರುವ ‘ಕಾಪರ್‌ ಕ್ವೀನ್ಸ್‌’ (ಜಾಂಬಿಯಾ ಮಹಿಳಾ ತಂಡಕ್ಕಿರುವ ಹೆಸರು) ತಂಡದ ಸ್ಟಾರ್‌ ಆಟಗಾರ್ತಿ ಬಾರ್ಬರಾ ಬಂದಾ ಅವರು ಬಹುತೇಕ ಏಕಾಂಗಿಯಾದರು. ಜಪಾನ್‌ನ ಮೂವರು ಆಟಗಾರ್ತಿಯರು ಅವರಿಗೆ ‘ಸರ್ಪಗಾವಲು’ ಹಾಕಿದ್ದರಿಂದ ಗೋಲಿನತ್ತ ಮುನ್ನುಗ್ಗಲು ಹೆಚ್ಚಿನ ಸ್ವಾತಂತ್ರ್ಯ ಸಿಗಲಿಲ್ಲ. ಉತ್ತರಾರ್ಧದ ಕೊನೆಯ ಭಾಗ ಮತ್ತು ಇಂಜುರಿ ಅವಧಿಯಲ್ಲಿ ಜಾಂಬಿಯಾ ಆಟ ಸಾಧಾರಣದಿಂದ ಕಳಪೆಯಾಗುತ್ತ ಹೋಯಿತು.

ಮುಂದಿನ ಪಂದ್ಯ: ಜಪಾನ್‌ ತಂಡ, ಡ್ಯುನೆಡಿನ್‌ಗೆ ಪ್ರಯಾಣಿಸಲಿದ್ದು, ಮುಂದಿನ ಪಂದ್ಯವನ್ನು ಅಲ್ಲಿ ಬುಧವಾರ ಕೋಸ್ಟರಿಕಾ ವಿರುದ್ಧ ಆಡಲಿದೆ. ಜಾಂಬಿಯಾ, ಅದೇ ದಿನ ಆಕ್ಲೆಂಡ್‌ನಲ್ಲಿ ಆತ್ಮವಿಶ್ವಾಸದಿಂದ ಇರುವ ‘ಲಾ ರೋಜಾ’ (ಸ್ಪೇನ್‌) ತಂಡವನ್ನು ಎದುರಿಸಲಿದೆ.

ಅಮೆರಿಕ ತಂಡದ ಶುಭಾರಂಭ

ಆಕ್ಲೆಂಡ್‌: ಸತತ ಮೂರನೇ ಬಾರಿ ಚಾಂಪಿಯನ್‌ ಆಗುವ ಯತ್ನದಲ್ಲಿರುವ ಅಮೆರಿಕ ತಂಡ, ಮಹಿಳಾ ವಿಶ್ವಕಪ್ ‘ಇ’ ಗುಂಪಿನ ಪಂದ್ಯದಲ್ಲಿ ಶನಿವಾರ 3–0 ಗೋಲುಗಳಿಂದ ವಿಯೆಟ್ನಾಂ ತಂಡದ ಮೇಲೆ ಜಯಗಳಿಸಿತು.

41,000 ಪ್ರೇಕ್ಷಕರೆದುರು ಈಡನ್‌ ಪಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಗಮನ ಸೆಳೆದವರು ಅಮೆರಿಕದ ಸೋಫಿಯಾ ಸ್ಮಿತ್‌ ಅವರ ಸೊಗಸಾದ ಆಟ. ಎರಡು ಬಾರಿ ಗೋಲು ಗಳಿಸಿದ ಸೋಫಿಯಾ, ನಂತರ ನಾಯಕಿ ಲಿಂಡ್ಸೆ ಹೊರನ್ ಅವರಿಗೆ ಗೋಲು ಗಳಿಸಲು ಸಿದ್ಧತೆ ಮಾಡಿಕೊಟ್ಟಿದ್ದರು.

‌ವ್ಲಾಟ್ಕೊ ಅಂಡೊನೊವ್‌ಸ್ಕಿ ಅವರಿಂದ ತರಬೇತಾದ ತಂಡದ ಒಂದೇ ದೌರ್ಬಲ್ಯ ಎಂದರೆ ಆಟಗಾರ್ತಿಯರು ಗೋಲಿನ ಮುಂದೆ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸದೇ ಇದ್ದದ್ದು. 27 ಬಾರಿ ಗೋಲಿನ ಯತ್ನ ನಡೆಸಿತು. ಅಲೆಕ್ಸ್‌ ಮಾರ್ಗನ್‌ ‘ಪೆನಾಲ್ಟಿ’ ಅವಕಾಶದಲ್ಲಿ ಎಡವಿದರು. ಇನ್ನೊಂದೆಡೆ ವಿಯೆಟ್ನಾಂಗೆ ಉತ್ತಮ ಅವಕಾಶ ದೊರಕಲಿಲ್ಲ.

ಅಮೆರಿಕ ಗುರುವಾರ ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ನೆದರ್ಲೆಂಡ್ಸ್‌ ಎದುರು ಆಡಲಿದೆ. 2019ರ ಫೈನಲ್‌ನಲ್ಲಿ ಈ ಎರಡು ತಂಡಗಳು ಎದುರಾಗಿದ್ದಾಗ ಅಮೆರಿಕ 2–0 ಯಿಂದ ಜಯಗಳಿಸಿ ಚಾಂಪಿಯನ್‌ ಆಗಿತ್ತು.

ಇಂಗ್ಲೆಂಡ್‌ಗೆ ಜಯ: ಯುರೋಪಿಯನ್‌ ಚಾಂಪಿಯನ್‌ ಇಂಗ್ಲೆಂಡ್ ತಂಡ ಗೆಲುವಿನೊಡನೆ ಅಭಿಯಾನ ಆರಂಭಿಸಿತು. ಶನಿವಾರ ‘ಡಿ’ ಗುಂಪಿನ ಪಂದ್ಯದಲ್ಲಿ ಹೈಟಿ ಮೇಲೆ 1–0 ಗೋಲಿನ ಜಯ ಪಡೆಯಿತು. ನಿರ್ಣಾಯಕ ಗೋಲನ್ನು ಪಂದ್ಯದ 29ನೇ ನಿಮಿಷ ಜಾರ್ಜಿಯಾ ಸ್ಟಾನ್‌ವೆ ಗಳಿಸಿದರು.

ಬೆಂಕಿ: ಹೋಟೆಲ್‌ನಿಂದ ನ್ಯೂಜಿಲೆಂಡ್‌ ತಂಡ ತೆರವು

ನ್ಯೂಜಿಲೆಂಡ್‌ ವಿಶ್ವಕಪ್‌ ತಂಡ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದರಿಂದ ಆಟಗಾರ್ತಿಯರು ಮತ್ತು ನೆರವು ಸಿಬ್ಬಂದಿಯನ್ನು ಅಲ್ಲಿಂದ ತಾತ್ಕಾಲಿಕವಾಗಿ ತೆರವುಗೊಳಿಸಲಾಯಿತು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಂಡ ತಿಳಿಸಿದೆ.

ಬೆಂಕಿ ಕಾಣಿಸಿಕೊಳ್ಳಲು ಕಾರಣ ತಕ್ಷಣಕ್ಕೆ ಗೊತ್ತಾಗಿಲ್ಲ. ಆದರೆ ಹೋಟೆಲ್‌ನ ಹಲವೆಡೆ ಜ್ವಾಲೆ ಕಾಣಿಸಿಕೊಂಡಿತು. ಬೆಂಕಿಯನ್ನು ಸಂಪೂರ್ಣ ಶಮನಗೊಳಿಸಲಾಗಿದೆ ಎಂದು ಅಗ್ನಿಶಾಮಕ ಮತ್ತು ತುರ್ತುಸ್ಥಿತಿ ವಕ್ತಾರರು ತಿಳಿಸಿದ್ದಾರೆ.

ಹೊಗೆಯಿಂದ ಉಸಿರಾಟದ ತೊಂದರೆಗೊಳಗಾದ ಕೆಲವರಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ ಯಾರಿಗೂ ಗಂಭೀರ ಸಮಸ್ಯೆಯಾಗಿಲ್ಲ ಎಂದರು.

ಆಸ್ಟ್ರೇಲಿಯಾ ಜೊತೆ ಈ ವಿಶ್ವಕಪ್‌ನ ಜಂಟಿ ಆತಿಥ್ಯ ವಹಿಸಿರುವ ನ್ಯೂಜಿಲೆಂಡ್‌, ತನ್ನ ಮೊದಲ ಪಂದ್ಯವನ್ನು ಗುರುವಾರ ನಾರ್ವೆ ವಿರುದ್ಧ ಆಡಿದ್ದು 1–0 ಜಯ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT