ಹಲ್ಲುಗಳಿಂದಲೇ ಮಣಭಾರ ಎತ್ತುವ ಗ್ರಾಮೀಣ ಹಮ್ಮೀರ..!

ಮಂಗಳವಾರ, ಮೇ 21, 2019
23 °C
170 ಕೆ.ಜಿ. ತೂಕದ ಕಬ್ಬಿಣದ ಹಾರೆಗಳನ್ನು ಹಲ್ಲಿನಿಂದಲೇ ಎತ್ತಿರುವುದು ರಮೇಶ ಪಾಟೀಲ ಗರಿಷ್ಠ ಸಾಧನೆ

ಹಲ್ಲುಗಳಿಂದಲೇ ಮಣಭಾರ ಎತ್ತುವ ಗ್ರಾಮೀಣ ಹಮ್ಮೀರ..!

Published:
Updated:
Prajavani

ದೇವರಹಿಪ್ಪರಗಿ: ‘ಹಾಲಿದ್ದಾಗ ಹಬ್ಬ ಮಾಡು, ಹಲ್ಲಿದ್ದಾಗ ಕಡಲೆ ತಿನ್ನು’ ಎಂಬ ಗಾದೆ ಮಾತನ್ನು, ‘ಹಲ್ಲಿದ್ದಾಗಲೇ ಸಾಧನೆ ಮಾಡು’ ಎನ್ನುವಂತೆ, 70ರಿಂದ 116 ಕೆ.ಜಿ. ಭಾರವನ್ನು ಕೇವಲ ತನ್ನ ಹಲ್ಲುಗಳಿಂದಲೇ ಎತ್ತುವುದರ ಮೂಲಕ, ಮುಳಸಾವಳಗಿ ಗ್ರಾಮದ ರಮೇಶ ದಾನಪ್ಪ ಪಾಟೀಲ ಗ್ರಾಮೀಣ ಕ್ರೀಡೆಯಲ್ಲಿ ಹಮ್ಮೀರನಾಗಿ ಹೊರಹೊಮ್ಮಿದ್ದಾನೆ.

ತಾಲ್ಲೂಕಿನ ಮುಳಸಾವಳಗಿಯ ಸಾಮಾನ್ಯ ಕೃಷಿ ಕುಟುಂಬದ ಸದಸ್ಯನಾಗಿ ಎಲ್ಲರಂತಿದ್ದ ಯುವಕ ರಮೇಶ, ಗ್ರಾಮದ ಹಜರತ್ ಮತಾಬ್ ಷಹೀದ್ ದರ್ಗಾ ಜಾತ್ರೆ ಅಂಗವಾಗಿ ನಡೆದ ಭಾರ ಎತ್ತುವ ಸ್ಪರ್ಧೆಯಿಂದ ಪ್ರೇರಣೆ ಪಡೆದು, ಗ್ರಾಮದ ಹಿರಿಯರಾದ ಬಸನಗೌಡ ಬಿರಾದಾರ, ಸಾಯಬಣ್ಣ ವಾಲಿಕಾರ ಮಾರ್ಗದರ್ಶನದಲ್ಲಿ ತನ್ನ 18ನೇ ವಯಸ್ಸಿನಿಂದಲೇ ಹಲ್ಲುಗಳಿಂದ ಭಾರ ಎತ್ತುವ ತಾಲೀಮು ಆರಂಭಿಸಿದರು.

ವಿವಿಧೆಡೆ ನಡೆಯುವ ಉತ್ಸವಗಳಲ್ಲಿ ಆಯೋಜಿಸುವ ಸ್ಪರ್ಧೆಯಲ್ಲಿ ಭಾಗಿಯಾಗುವುದು ಇವರ ಹವ್ಯಾಸವಾಗಿದೆ. ಇದೂವರೆಗೂ ರಾಜ್ಯದ ಎಲ್ಲ ಐತಿಹಾಸಿಕ ಸ್ಥಳಗಳಲ್ಲಿ ನಡೆದಿರುವ ಅನೇಕ ಉತ್ಸವಗಳಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆಯುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

‘1993ರಿಂದಲೇ ನಾನು ಭಾರ ಎತ್ತಲು ಆರಂಭಿಸಿದೆ. ಕೇವಲ ಹಲ್ಲುಗಳನ್ನು ಉಪಯೋಗಿಸಿ, ಕಬ್ಬಿಣದ ಹಾರೆಗಳನ್ನು ಎತ್ತಿ ಹಿಂದೆ ಒಗೆಯುತ್ತೇನೆ. ಈವರೆಗೆ ನಡೆದ ಯಾವ ಸ್ಪರ್ಧೆಯಲ್ಲಿಯೂ ಅಪಾಯ, ಹಿನ್ನಡೆ ಆಗಿಲ್ಲ.

ನಾನು 2013ರಿಂದ -2018ರವರೆಗೆ ಮೈಸೂರು ದಸರಾ ಉತ್ಸವದಲ್ಲಿ ಪ್ರಥಮ, 2012, 2015ರ ವಿಜಯಪುರದ ನವರಸಪುರ ಉತ್ಸವದಲ್ಲಿ ಪ್ರಥಮ, 2015ರಿಂದ 20-18ರವರೆಗೆ ಮೂಡುಬಿದಿರೆಯ ಆಳ್ವಾಸ್‌ ನುಡಿಸಿರಿ ಕಾರ್ಯಕ್ರಮದಲ್ಲಿ ಪ್ರಥಮ, 2014, 2016ರ ಕಾಗಿನೆಲೆ ಉತ್ಸವದಲ್ಲಿ ಪ್ರಥಮ, 2009ರ ಕಿತ್ತೂರು, ಹಂಪಿ, ಆನೆಗೊಂದಿ, ಬನವಾಸಿಯ ಕದಂಬ ಉತ್ಸವಗಳಲ್ಲಿ ಪ್ರಥಮ, 2011ರ ಅಯ್ಯನಗುಡಿ ಉತ್ಸವದಲ್ಲಿ ಪ್ರಥಮ.

2016-17ರಲ್ಲಿ ಮುರುಗೇಶ ನಿರಾಣಿ ಜನ್ಮ ದಿನದ ಅಂಗವಾಗಿ ನಡೆದ ಗ್ರಾಮೀಣ ಕ್ರೀಡಾಕೂಟದಲ್ಲಿ ಪ್ರಥಮ, ಮೈಸೂರಿನ ಸುತ್ತೂರು ದೇಶಿಕೇಂದ್ರದ ದೇಶಿಯ ಆಟಗಳ ವಿಭಾಗದಲ್ಲಿ ಪ್ರಥಮ, 2013ರ ಬೀದರ್ ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದಿದ್ದೇನೆ.

2008ರಲ್ಲಿ ಆಂಧ್ರಪ್ರದೇಶದ ಕಡಪಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ವೈ.ಎಸ್.ರಾಜಶೇಖರರೆಡ್ಡಿ ನನ್ನ ಸಾಧನೆ ಮೆಚ್ಚಿ ₹ 1 ಲಕ್ಷ ಮೊತ್ತದ ಬಹುಮಾನದ ಚೆಕ್ ನೀಡಿದ್ದರು’ ಎಂದು ರಮೇಶ ಪಾಟೀಲ ತಮ್ಮ ಸಾಧನೆಯ ಹಾದಿಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

ಕೃಷಿಯನ್ನೇ ಕಾಯಕವನ್ನಾಗಿಸಿಕೊಂಡಿರುವ ರಮೇಶ ಪಾಟೀಲಗೆ, ಇಂದಿಗೂ ಜಿಲ್ಲೆ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಜಾತ್ರೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಭಾರ ಎತ್ತುವ ಪ್ರದರ್ಶನಕ್ಕಾಗಿ ಸಾಕಷ್ಟು ಆಹ್ವಾನ ಬರುತ್ತಿವೆ. ಹೋದೆಡೆಯಲ್ಲಾ ಸನ್ಮಾನ, ಗೌರವಧನ ಹರಿದು ಬರುತ್ತಿದೆ.

‘ರಾಷ್ಟ್ರ ಮಟ್ಟದಲ್ಲಿ, ಅದರಲ್ಲೂ ನವದೆಹಲಿಯಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡುವ ಗುರಿಯಿದೆ. ಆದರೆ ಭಾರ ಎತ್ತುವ ಸಲಕರಣೆಗಳನ್ನು ಹೇಗೆ ಸಾಗಿಸಬೇಕು ಎಂಬ ಕಾರಣದಿಂದ ಆ ಪ್ರದರ್ಶನದ ಕನಸು ನನೆಗುದಿಗೆ ಬಿದ್ದಂತಾಗಿದೆ. ಒಂದು ವೇಳೆ ಅವಕಾಶ ದೊರೆತಲ್ಲಿ ನನ್ನ ಸಾಮರ್ಥ್ಯ ಪ್ರಸ್ತುತ ಪಡಿಸಲು ಹಿಂಜರಿಯಲಾರೆ’ ಎಂಬ ಆತ್ಮವಿಶ್ವಾಸ ರಮೇಶ ಪಾಟೀಲರದ್ದು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !