ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡಿಚೇರಿ ಪ್ರಿಡೇಟರ್ಸ್‌ ಜಯಭೇರಿ

ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್ ಕಬಡ್ಡಿ ಲೀಗ್: ಪುಣೆ ಪ್ರೈಡ್‌ ತಂಡಕ್ಕೆ ಮೊದಲ ಸೋಲು
Last Updated 24 ಮೇ 2019, 18:24 IST
ಅಕ್ಷರ ಗಾತ್ರ

ಮೈಸೂರು: ಆಕರ್ಷಕ ರೈಡಿಂಗ್‌ ಮತ್ತು ಟ್ಯಾಕಲ್‌ ಮೂಲಕ ಮಿಂಚಿದ ಪಾಂಡಿಚೇರಿ ಪ್ರಿಡೇಟರ್ಸ್‌ ತಂಡದವರು ಇಂಡೊ ಇಂಟರ್‌ ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ನ (ಐಐಪಿಕೆಎಲ್‌) ಮೈಸೂರು ಲೆಗ್‌ನ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದರು.

ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಪ್ರಿಡೇಟರ್ಸ್‌ 41–33 ಪಾಯಿಂಟ್‌ಗಳಿಂದ ಪುಣೆ ಪ್ರೈಡ್‌ ತಂಡವನ್ನು ಮಣಿಸಿತು. ಪುಣೆ ತಂಡಕ್ಕೆ ಲೀಗ್‌ನಲ್ಲಿ ಎದುರಾದ ಮೋದಲ ಸೋಲು ಇದು. ಈ ತಂಡ ಪುಣೆಯಲ್ಲಿ ನಡೆದಿದ್ದ ಮೊದಲ ಲೆಗ್‌ನ ಎಲ್ಲ ಐದು ಪಂದ್ಯಗಳಲ್ಲಿ ಗೆಲುವು ಪಡೆದಿತ್ತು. 9 ರೈಡಿಂಗ್‌ನಲ್ಲಿ 12 ಪಾಯಿಂಟ್‌ ಕಲೆಹಾಕಿದ ಆರ್. ಸುರೇಶ್ ಕುಮಾರ್‌ ಅವರು ಪ್ರಿಡೇಟರ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಉತ್ತಮ ಆರಂಭ: ಸುರೇಶ್‌ ಕುಮಾರ್‌ ಮೊದಲ ರೈಡ್‌ನಲ್ಲಿ ಪ್ರಿಡೇ ಟರ್ಸ್‌ ತಂಡಕ್ಕೆ ಮೂರು ಪಾಯಿಂಟ್‌ ತಂದಿತ್ತರು.

ಮೊದಲ ಐದು ನಿಮಿಷಗಳು ಕೊನೆಗೊಂಡಾಗ ತಂಡ 7–1ರಲ್ಲಿ ಮೇಲುಗೈ ಸಾಧಿಸಿತು. ಅಮರ್‌ಜೀತ್‌ಸಿಂಗ್‌ ಮತ್ತು ಶೇಖ್‌ ಅಬ್ದುಲ್ಲಾ ಅವರ ಉತ್ತಮ ರೈಡಿಂಗ್‌ ನೆರವಿನಿಂದ ಮರುಹೋರಾಟ ನಡೆಸಿದ ಪುಣೆ ತಂಡ 7–7 ರಲ್ಲಿ ಸಮಬಲ ಸಾಧಿಸಿತು. ಆದರೆ ಮತ್ತೆ ಲಯ ಕಂಡುಕೊಂಡ ಪ್ರಿಡೇಟರ್ಸ್‌ 13ನೇ ನಿಮಿಷದಲ್ಲಿ ಎದುರಾಳಿ ತಂಡವನ್ನು ಆಲೌಟ್‌ ಮಾಡಿ ಮುನ್ನಡೆಯನ್ನು 17–9 ಕ್ಕೆ ಹೆಚ್ಚಿಸಿಕೊಂಡಿತು. ವಿರಾಮದ ವೇಳೆಗೆ ವಿಜಯಿ ತಂಡ 22–15 ರಲ್ಲಿ ಮುನ್ನಡೆ ಗಳಿಸಿತ್ತು.

ತುರುಸಿನ ಪೈಪೋಟಿ: ಎರಡನೇ ಅವಧಿಯಲ್ಲೂ ತುರುಸಿನ ಪೈಪೋಟಿ ಕಂಡುಬಂತು.

ಮರುಹೋರಾಟ ನಡೆಸಿದ ಪುಣೆ ತಂಡ ಎರಡನೇ ಅವಧಿಯ ಮೂರನೇ ನಿಮಿಷದಲ್ಲಿ ಎದುರಾಳಿ ತಂಡವನ್ನು ಆಲೌಟ್‌ ಮಾಡಿ ಹಿನ್ನಡೆಯನ್ನು 22–24ಕ್ಕೆ ತಗ್ಗಿಸಿತು. ಎಂಟನೇ ನಿಮಿಷದಲ್ಲಿ 27–27 ರಲ್ಲಿ ಸಮಬಲ ಸಾಧಿಸಿತು.

ಈ ಹಂತದಲ್ಲಿ ಪ್ರಿಡೇಟರ್ಸ್‌ ತಂಡದ ಸೋನು ಹಾಗೂ ಸುರೇಶ್‌ ಉತ್ತಮ ರೈಡಿಂಗ್‌ ಮೂಲಕ ತಂಡಕ್ಕೆ 29–27 ರಲ್ಲಿ ಮುನ್ನಡೆ ತಂದುಕೊಟ್ಟರು. ಕೊನೆಯ ಐದು ನಿಮಿಷಗಳು ಇದ್ದಾಗ ಎದುರಾಳಿ ತಂಡವನ್ನು ಆಲೌಟ್‌ ಮಾಡಿದ ಪಾಂಡಿಚೇರಿ ಮುನ್ನಡೆಯನ್ನು 37–28ಕ್ಕೆ ಹೆಚ್ಚಿಸಿಕೊಂಡಿತು. ಆ ಬಳಿಕ ಎಚ್ಚರಿಕೆಯ ಆಟವಾಡಿ ಗೆಲುವು ಒಲಿಸಿಕೊಂಡಿತು. ಸೋಲು ಅನುಭವಿಸಿದರೂ ಪುಣೆ ತಂಡ ‘ಎ’ ಗುಂಪಿನಲ್ಲಿ 10 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆರು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿರುವ ಪ್ರಿಡೇಟರ್ಸ್‌ 6 ಪಾಯಿಂಟ್‌ ಹೊಂದಿದೆ.

ಇಂದಿನ ಪಂದ್ಯಗಳು

ರಾತ್ರಿ 8ಕ್ಕೆ: ಚೆನ್ನೈ ಚಾಲೆಂಜರ್ಸ್– ಮುಂಬೈ ಚೆ ರಾಜೆ;
ರಾತ್ರಿ 9ಕ್ಕೆ: ಹರಿಯಾಣ ಹೀರೋಸ್– ದಿಲೆರ್‌ ದಿಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT