ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣರ ‘ಕ್ರೀಡಾ ಗುರು’ ಬಿ.ಎಂ.ಪಾಟೀಲ

ಶಿಷ್ಯ ಪಡೆಯಿಂದ ಸನ್ಮಾನ ಸ್ವೀಕಾರ; ಗುರುವಿಗೆ ಪಾದಪೂಜೆ ಸಲ್ಲಿಸಿದ ನಿವೃತ್ತ ಉಪನ್ಯಾಸಕ
Last Updated 12 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ವಿಜಯಪುರ:ಸ್ವತಃ ಕ್ರೀಡಾಪಟು. ಬಾಲ್ಯದಿಂದಲೇ ಕ್ರೀಡಾಸಕ್ತಿ. ಅಥ್ಲೆಟಿಕ್ಸ್‌ನ ವಿವಿಧ ಸ್ಪರ್ಧೆಗಳಲ್ಲಿ ಭಾಗಿ. ಭಾರ ಎತ್ತುವಿಕೆಯಲ್ಲಿ ಗಟ್ಟಿಗ. ಕಬಡ್ಡಿಯಲ್ಲಿ ಅತ್ಯುತ್ತಮ ದಾಳಿಗಾರ. ಒಮ್ಮೆ ಎದುರಾಳಿಗಳ ಅಂಕಣಕ್ಕೆ ಕಾಲಿಟ್ಟರೆ ತಂಡಕ್ಕೆ ಪಾಯಿಂಟ್‌ ಕಟ್ಟಿಟ್ಟ ಬುತ್ತಿ...

ಎಸ್‌ಎಸ್‌ಎಲ್‌ಸಿಯಿಂದ ಬಿಪಿ.ಇಡಿ ಕಲಿಯುವ ತನಕದ ಅವಧಿ ಕಬಡ್ಡಿಗೆ ಮೀಸಲು. ಸೇವೆಗೆ ಸೇರುವ ತನಕವೂ ಹಲ ರಾಜ್ಯ–ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಚಾಂಪಿಯನ್‌ಷಿಪ್‌ ಪಡೆದ ಅಪ್ಪಟ ಗ್ರಾಮೀಣ ಪ್ರತಿಭೆ.

ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ ಪಟ್ಟಣದ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕ್ರೀಡಾ ಉಪನ್ಯಾಸಕರಾಗಿ ಒಂಬತ್ತು ತಿಂಗಳ ಹಿಂದಷ್ಟೇ ನಿವೃತ್ತರಾದ ಬಿ.ಎಂ.ಪಾಟೀಲ ದೇವರ ಹಿಪ್ಪರಗಿ ಅವರ ವಿದ್ಯಾರ್ಥಿ ಜೀವನದ ಕ್ರೀಡಾ ಸಾಧನೆಗಳಿವು.

ಯೌವ್ವನದಲ್ಲಿ 124 ಕೆ.ಜಿ. ತೂಕದ ಜೋಳದ ಚೀಲವನ್ನು ನಿರಾಯಾಸವಾಗಿ ಎತ್ತುವುದರಲ್ಲಿ ನಿಸ್ಸೀಮರಾಗಿದ್ದ ಬಿ.ಎಂ.ಪಾಟೀಲ, ಬಿಪಿ.ಇಡಿ ವ್ಯಾಸಂಗದ ಸಂದರ್ಭ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲೂ ತಮ್ಮದೇ ಛಾಪು ಮೂಡಿಸಿದ್ದರು.

ಬೆಳಗಾವಿಯಲ್ಲಿ ಬಿಪಿ.ಇಡಿ ತರಬೇತಿ ಮುಗಿಸಿಕೊಂಡ ಬಳಿಕ, ಮನಗೂಳಿಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕ್ರೀಡಾ ಉಪನ್ಯಾಸಕರಾಗಿ 1985ರಲ್ಲಿ ಸೇವೆ ಆರಂಭಿಸಿದರು. 2018ರ ಮೇ ಅಂತ್ಯದವರೆಗೂ ಬರೋಬ್ಬರಿ 33 ವರ್ಷ ಕ್ರೀಡಾ ಉಪನ್ಯಾಸಕನಾಗಿ ಸೇವೆಗೈದರು.

ತಮ್ಮ ಈ ಸುದೀರ್ಘ ಅವಧಿಯ ಸೇವೆಯಲ್ಲಿ ಕ್ರೀಡೆಯಿಂದ ದೂರ ಉಳಿದಿದ್ದ ಎಲ್ಲ ಮಕ್ಕಳಿಗೂ ವಿವಿಧ ಆಟಗಳನ್ನು ಪರಿಚಯಿಸಿದರು. ಗಂಧ–ಗಾಳಿ ಗೊತ್ತಿಲ್ಲದ ವಿದ್ಯಾರ್ಥಿನಿಯರೂ ಸಹ ರಾಷ್ಟ್ರಮಟ್ಟದಲ್ಲಿ ಮಿಂಚಿದರು. ಈ ವಿಜಯದ ಹಿಂದೆ ಬಿ.ಎಂ.ಪಾಟೀಲ ಪರಿಶ್ರಮವಿದೆ.

ಶಿಷ್ಯ ಪಡೆ:

ಅಥ್ಲೆಟಿಕ್ಸ್‌, ದೂರದ ಓಟ, ಗುಡ್ಡಗಾಡು ಓಟ, ಹ್ಯಾಮರ್ ಎಸೆತ, ಕಬಡ್ಡಿ, 1500 ಮೀಟರ್ ಓಟ, 5000 ಮೀಟರ್‌ ಓಟ ಸೇರಿದಂತೆ ಇನ್ನಿತರೆ ಸ್ಪರ್ಧೆಗಳಲ್ಲಿ 200ಕ್ಕೂ ಹೆಚ್ಚು ಬಾಲಕ–ಬಾಲಕಿಯರು ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ವಿಜಯಿಗರಾಗಿ ಸಾಧನೆಗೈದಿದ್ದಾರೆ.

ಬಸವರಾಜ ಓ ಇಟ್ಟಂಗಿಹಾಳ, ಬಸವರಾಜ ಕಾಖಂಡಕಿ, ಮಹಾಂತೇಶ ಹಚ್ಯಾಳ, ಮುತ್ತು ಗಾಣಿಗೇರ, ಪೃಥ್ವಿರಾಜ ಹಜೇರಿ, ಮೋಹನ ಚವ್ಹಾಣ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮೀಣ ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಕ್ರೀಡಾ ಕೋಟಾದಡಿಯೇ ವಿವಿಧ ಇಲಾಖೆಗಳಲ್ಲಿ ನೌಕರಿ ಗಿಟ್ಟಿಸಿದ್ದಾರೆ. ಇದರ ಶ್ರೇಯ ಬಿ.ಎಂ.ಪಾಟೀಲ ದೇವರಹಿಪ್ಪರಗಿಗೆ ಸಲ್ಲಬೇಕು.

2018–19ನೇ ಸಾಲಿನಲ್ಲಿ ಟೆನಿಕ್ವಾಯ್ಟ್‌ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಮನಗೂಳಿ ಕಾಲೇಜಿನ ವಿದ್ಯಾರ್ಥಿನಿಯರು ಪ್ರಥಮ, ಬಾಲಕರು ದ್ವಿತೀಯ ಸ್ಥಾನ ಗಳಿಸಿದ್ದು ಹೆಮ್ಮೆಯ ವಿಷಯ. ತಮ್ಮ ಗುರುವಿನ ಸೇವಾ ನಿವೃತ್ತಿಯ ವರ್ಷವನ್ನು ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಚಾಂಪಿಯನ್‌ಷಿಪ್‌ ಗೆಲ್ಲುವ ಗೌರವದ ಮೂಲಕ ಬೀಳ್ಕೊಡುಗೆಯಾಗಿ ನೀಡಿದ್ದು ವಿಶೇಷ.

ಮನಗೂಳಿ ಪಟ್ಟಣ ಪಂಚಾಯ್ತಿಯ ಚುಕ್ಕಾಣಿ ಹಿಡಿದಿದ್ದ ಮಲ್ಲು ಉಮನಾಬಾದಿ, ಭೀಮಗೊಂಡ ಹತ್ತರಕಿ, ಸದಾನಂದ ವಾಲೀಕಾರ ಸಹ ಬಿ.ಎಂ.ಪಾಟೀಲರ ಶಿಷ್ಯಂದಿರು. ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಕ್ರೀಡಾಪಟುಗಳಾಗಿ ಪಾಟೀಲರ ಒಡನಾಟ ಹೊಂದಿದ್ದವರು.

ವಿಜಯಪುರ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರಾಗಿ ಸೇವೆಗೈದ ಬಿ.ಎಂ.ಪಾಟೀಲ, 2014ರಿಂದ ರಾಜ್ಯ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಕ್ರೀಡಾ ಸೇವೆಗೆ 1999ರಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಥಮ ಆದರ್ಶ ಉಪನ್ಯಾಸಕ ಪ್ರಶಸ್ತಿ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT