ಮಹಿಳಾ ಕ್ರಿಕೆಟ್‌ ಕಲಿ ಮಕ್ಕಾ

ಸೋಮವಾರ, ಜೂನ್ 17, 2019
28 °C

ಮಹಿಳಾ ಕ್ರಿಕೆಟ್‌ ಕಲಿ ಮಕ್ಕಾ

Published:
Updated:
Prajavani

ವಿಜಯಪುರ: ದೇಶ–ವಿದೇಶದಲ್ಲೂ ವಿಜಯಪುರದ ಕೀರ್ತಿ ಬೆಳಗಿದ ಮಹಿಳಾ ಕ್ರಿಕೆಟ್ ತಾರೆ ರಾಜೇಶ್ವರಿ ಗಾಯಕ್ವಾಡ್‌ ಯುವತಿಯರಿಗೆ ಆದರ್ಶ. ಈಕೆಯ ಹಾದಿಯಲ್ಲೇ ಸಾಧನೆಗೈಯಬೇಕು ಎಂಬ ಸಂಕಲ್ಪ ತೊಟ್ಟವರು ಹಲವರು.

ಈ ಸಾಧನೆಗೈಯಲಿಕ್ಕಾಗಿಯೇ ಕೆಲವರು ನಿರಂತರ ತರಬೇತಿಯಲ್ಲಿ ತಲ್ಲೀನರಾಗಿದ್ದಾರೆ. ಇವರಲ್ಲಿ ನಾಲತವಾಡ ಮೂಲದ ವಿಜಯಪುರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಎ. ಓದುತ್ತಿರುವ ಮಕ್ಕಾ ದಾವಲಸಾಬ್ ಅರ್ಜಾನಿ ಸಹ ಒಬ್ಬರು.

ಬಾಲ್ಯದಿಂದಲೂ ಕ್ರೀಡಾಸಕ್ತಿ ಬೆಳೆಸಿಕೊಂಡಿರುವ ಮಕ್ಕಾ, ಪ್ರಾಥಮಿಕ ಶಾಲೆಯಿಂದ ಪಿ.ಯು.ಸಿ.ಯವರೆಗೆ ಓಟದ (ಅಥ್ಲೆಟಿಕ್) ಸ್ಪರ್ಧೆಯಲ್ಲಿ ಹಲವು ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಉಡುಪಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧೆಡೆ ನಡೆದ ಸ್ಪರ್ಧೆಯಲ್ಲಿ ಭಾಗಿಯಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಐದನೇ ತರಗತಿಯಿಂದಲೇ ಓಟದ ಸ್ಪರ್ಧೆಗೆ ಅಗತ್ಯ ತಾಲೀಮು ನಡೆಸುತ್ತಿದ್ದಳು ಈಕೆ. 100 ಮೀ. ಓಟದಲ್ಲಿ ಸಾಧನೆ ಮಾಡಬೇಕೆಂಬ ಛಲ. ಸೂಕ್ತ ತರಬೇತಿ ಪಡೆಯಬೇಕೆಂಬ ಇಚ್ಚೆ ಹೊಂದಿದ್ದಳು. ಬಾಗಲಕೋಟೆಯಲ್ಲಿ ಒಂದು ತಿಂಗಳು ತರಬೇತಿ ಪಡೆಯುವ ಅವಕಾಶ ಬಂದಿದ್ದರೂ; ತರಬೇತಿ ಪಡೆಯಲು ಸಾಧ್ಯವಾಗಲಿಲ್ಲ ಎಂಬ ಕೊರಗು ಕಾಡಿತ್ತು ಈಕೆಯನ್ನು. ಸೂಕ್ತ ತರಬೇತಿ ಪಡೆದಿದ್ದರೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿತ್ತು ಎನ್ನುತ್ತಾರೆ ಮಕ್ಕಾ.

ಓಟದೊಂದಿಗೆ ಬೇರೆ ಆಟಗಳಲ್ಲೂ ತರಬೇತಿ ಪಡೆಯಬೇಕೆಂದುಕೊಂಡಿದ್ದ ಮಕ್ಕಾ ಅವರಿಗೆ 10ನೇ ತರಗತಿಯಲ್ಲಿದ್ದಾಗ, ಶಾಲಾ ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಯೊಬ್ಬರ ಪ್ರೋತ್ಸಾಹದ ಮಾತುಗಳು ಕ್ರಿಕೆಟ್‌ನತ್ತ ಆಸಕ್ತಿ ಹುಟ್ಟಿಸಿತು.

ಎಸ್ಸೆಸ್ಸೆಲ್ಸಿ ಪಾಸಾದ ಬಳಿಕ ತರಬೇತುದಾರ ಬಸವರಾಜ ಇಜೇರಿ ಮಾರ್ಗದರ್ಶನದಲ್ಲಿ ಕ್ರಿಕೆಟ್ ಆಟದ ತರಬೇತಿ ಆರಂಭಿಸಿದರು. ನಿತ್ಯ ಬೆಳಿಗ್ಗೆ ಹಾಗೂ ಸಂಜೆ ತರಬೇತಿ ಪಡೆದುಕೊಳ್ಳುತ್ತಿರುವುದರಿಂದ ಆಟದಲ್ಲಿ ಮತ್ತಷ್ಟು ಆಸಕ್ತಿ ಹೆಚ್ಚಿತು.

ಕಾಲೇಜಿನಲ್ಲಿ ಪ್ರಾಚಾರ್ಯ ಡಾ.ಎಸ್.ಆರ್.ಕಲ್ಲೂರಮಠ, ಹಿರಿಯ ಶ್ರೇಣಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಜಶೇಖರ ಬೆನಕನಹಳ್ಳಿ ಸೇರಿದಂತೆ ಉಪನ್ಯಾಸಕರ ಪ್ರೋತ್ಸಾಹದಿಂದ, ಕ್ರಿಕೆಟ್ ಆಟಕ್ಕೆ ಅಗತ್ಯ ತರಬೇತಿ ಪಡೆದುಕೊಳ್ಳುತ್ತಿರುವ ಮಕ್ಕಾ, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ ಮಟ್ಟದ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಕಲಬುರ್ಗಿ, ಶಿರಡಿಗಳಲ್ಲಿ ನಡೆದ ಕಾಲೇಜು ಮಟ್ಟದ ಟೂರ್ನಿಮೆಂಟ್‌ಗಳಲ್ಲಿ ಭಾಗವಹಿಸಿರುವ ಮಕ್ಕಾ ಅವರು ತಮ್ಮ ಆಟದ ವೈಖರಿ ಪ್ರದರ್ಶಿಸಿದ್ದಾರೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಬೇಕು. ದೇಶ ಪ್ರತಿನಿಧಿಸಬೇಕು ಎಂಬ ಹೆಬ್ಬಯಕೆಯಿಂದ ನಿರಂತರ ತರಬೇತಿಯಲ್ಲಿ ತೊಡಗಿಕೊಂಡಿರುವ ಇವರಿಗೆ, ಅವಕಾಶಗಳು ಒದಗಿ ಬರಬೇಕಿದೆಯಷ್ಟೇ.

ಆಲ್‌ರೌಂಡರ್ ಆಟಗಾರ್ತಿಯಾಗಿರುವ ಮಕ್ಕಾ, ಬೌಲಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ದೂರದರ್ಶನದಲ್ಲಿ ನೇರ ಪ್ರಸಾರಗೊಳ್ಳುವ ವಿಶ್ವಕಪ್, ಐಪಿಎಲ್ ಸೇರಿದಂತೆ ವಿವಿಧ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವ ಜತೆಯಲ್ಲೇ ಜಗತ್ತಿನ ವಿವಿಧ ದೇಶದ ಶ್ರೇಷ್ಠ ಆಟಗಾರರ ಶೈಲಿಯನ್ನು ಅಳವಡಿಸಿಕೊಳ್ಳುವ ಯತ್ನ ನಡೆಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !