ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಚೆಸ್‌ನಲ್ಲಿ ಭವ್ಯ ಭರವಸೆ ಮೂಡಿಸಿರುವ ಪ್ರತಿಭಾನ್ವಿತರ ದಂಡು
ಆಳ–ಅಗಲ: ಚೆಸ್‌ನಲ್ಲಿ ಭವ್ಯ ಭರವಸೆ ಮೂಡಿಸಿರುವ ಪ್ರತಿಭಾನ್ವಿತರ ದಂಡು
ತಮಿಳುನಾಡಿನ ಆರ್‌.ಪ್ರಜ್ಞಾನಂದ, ಡಿ. ಗುಕೇಶ್, ತೆಲಂಗಾಣದ ಅರ್ಜುನ್‌ ಎರಿಗೇಶಿ, ಕೇರಳದ ನಿಹಾಲ್‌ ಸರೀನ್, ಮಹಾರಾಷ್ಟ್ರದ ರೌನಕ್‌ ಸಾಧ್ವಾನಿ
Published 24 ಆಗಸ್ಟ್ 2023, 20:44 IST
Last Updated 24 ಆಗಸ್ಟ್ 2023, 20:44 IST
ಅಕ್ಷರ ಗಾತ್ರ

ಕಳೆದ ದಶಕದ ಮಧ್ಯದಿಂದ ಭಾರತದ ಉದಯೋನ್ಮುಖ ಆಟಗಾರರು ವಿಶ್ವ ಚೆಸ್‌ ಲೋಕದಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸುತ್ತ ಬಂದಿದ್ದಾರೆ. ತಮಿಳುನಾಡಿನ ಆರ್‌.ಪ್ರಜ್ಞಾನಂದ, ಡಿ. ಗುಕೇಶ್, ತೆಲಂಗಾಣದ ಅರ್ಜುನ್‌ ಎರಿಗೇಶಿ, ಕೇರಳದ ನಿಹಾಲ್‌ ಸರೀನ್, ಮಹಾರಾಷ್ಟ್ರದ ರೌನಕ್‌ ಸಾಧ್ವಾನಿ ಮೊದಲಾದ ಹದಿಹರೆಯದ ಆಟಗಾರರನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.

1988ರಲ್ಲಿ ಭಾರತದ ಮೊದಲ ಗ್ರ್ಯಾಂಡ್‌ಮಾಸ್ಟರ್‌ ಆದ ವಿಶ್ವನಾಥನ್ ಆನಂದ್‌ ದೇಶದಲ್ಲಿ ಚೆಸ್‌ ಕ್ರಾಂತಿಗೆ ನಾಂದಿ ಹಾಡಿದರು. ಈಗಲೂ ಹಲವಾರು ಆಟಗಾರರಿಗೆ ಅವರೇ ಆದರ್ಶಪ್ರಾಯ. 52 ವರ್ಷ ದಾಟಿದರೂ ಆನಂದ್‌ ಈಗಲೂ ಸಕ್ರಿಯ ಆಟಗಾರ. ನಂತರದ ದಿನಗಳಲ್ಲಿ ಕೃಷ್ಣನ್‌ ಶಶಿಕಿರಣ್‌, ಪಿ.ಹರಿಕೃಷ್ಣ, ಕೋನೇರು ಹಂಪಿ, ದ್ರೋಣವಲ್ಲಿ ಹಾರಿಕಾ ವಿಶ್ವಮಟ್ಟದಲ್ಲಿ ಛಾಪು ಮೂಡಿಸಿದರು. ದೇಶದಲ್ಲಿ ಗ್ರ್ಯಾಂಡ್‌ಮಾಸ್ಟರ್‌ಗಳ ಸಂಖ್ಯೆ ಪ್ರಸ್ತುತ 83 ಆಗಿದೆ.

ಆದರೆ ಕಳೆದ ದಶಕದ ಮಧ್ಯದಲ್ಲಿ ಕೆಲವೇ ವರ್ಷಗಳ ಅಂತರದಲ್ಲಿ ಪ್ರತಿಭಾವಂತರು ಸಾಲಾಗಿ ಪ್ರವರ್ಧಮಾನಕ್ಕೆ ಬಂದಿದ್ದು, ಭಾರತದ ಚೆಸ್‌ ಕ್ಷೇತ್ರಕ್ಕೆ ಭವ್ಯ ಭರವಸೆಯನ್ನು ಮೂಡಿಸಿದೆ. 12–13 ವರ್ಷ ಇರುವಾಗಲೇ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಗಿಟ್ಟಿಸಿದ ಪ್ರಜ್ಞಾನಂದ, ಗುಕೇಶ್ ಅವರು ದಿಗ್ಗಜ ಆಟಗಾರರನ್ನು ಅಚ್ಚರಿಗೊಳಿಸುತ್ತ ಸುದ್ದಿ ಮಾಡಿದವರು. ವಿಶ್ವದ ಪ್ರತಿಷ್ಠಿತ ಟೂರ್ನಿಗಳಲ್ಲಿ ಗಮನಾರ್ಹ ಸಾಧನೆ ಮಾಡಿದರು.

ಗುಕೇಶ್ ಇತ್ತೀಚೆಗಷ್ಟೇ ವಿಶ್ವನಾಥನ್ ಆನಂದ್‌ ಅವರ ದೀರ್ಘ ಆಧಿಪತ್ಯಕ್ಕೆ ಕೊನೆಹಾಡಿ ಭಾರತದ (ಲೈವ್‌ ರೇಟಿಂಗ್) ಅಗ್ರಮಾನ್ಯ ಆಟಗಾರ ಎನಿಸಿದರು. ಈ ತಿಂಗಳ ಕೊನೆಗೆ ಫಿಡೆ ರೇಟಿಂಗ್ ಪಟ್ಟಿ ಪ್ರಕಟವಾಗಲಿದ್ದು ಪರಿಷ್ಕೃತ ರ‍್ಯಾಂಕಿಂಗ್‌ ಪ್ರಕಟವಾಗಲಿದೆ.

ಪ್ರಜ್ಞಾನಂದ ಅವರು ಬಾಕುವಿನ ವಿಶ್ವಕಪ್‌ ಫೈನಲ್‌ನಲ್ಲಿ ಕಾರ್ಲ್‌ಸನ್‌ ಎದುರು ಟೈಬ್ರೇಕ್‌ನಲ್ಲಿ ಸೋತರೂ, ಫೈನಲ್‌ ದಾರಿಯಲ್ಲಿ ಹಿಕಾರು ನಕಾಮುರಾ, ಫ್ಯಾಬಿಯಾನೊ ಕರುವಾನ ಅಂಥ ಘಟಾನುಘಟಿ ಆಟಗಾರರನ್ನು ಸೋಲಿಸಿದ್ದು ಗೊತ್ತೇ ಇದೆ.

ತೃಶೂರಿನ ನಿಹಾಲ್ ಸರೀನ್ ಅವರು 2600 ರೇಟಿಂಗ್ ದಾಟಿದ ವಿಶ್ವದ ನಾಲ್ಕನೇ ಅತಿ ಕಿರಿಯ ಆಟಗಾರ ಎನಿಸಿದರು. 2019ರಲ್ಲಿ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ ಭಾರತದ ಅತಿ ಕಿರಿಯ ಆಟಗಾರ ಎನಿಸಿದರು. ಪ್ರಸ್ತುತ 19 ವರ್ಷದ ಆಟಗಾರ ವಿಶ್ವಕ್ರಮಾಂಕದಲ್ಲಿ 51ನೇ ಸ್ಥಾನದಲ್ಲಿದ್ದಾರೆ. ಈ ವಿಶ್ವಕಪ್‌ನಲ್ಲಿ ಅವರು ವಿಶ್ವ ಚಾಂಪಿಯನ್‌ಷಿಪ್‌ ರನ್ನರ್‌ ಅಪ್‌ ನಿಪೊಮ್‌ನಿಯಾಷಿ ಎದುರು ಸೋತಿದ್ದರು.

ಪ್ರಜ್ಞಾನಂದ (ರೇಟಿಂಗ್‌: 2707) ಅವರು 29ನೇ ಸ್ಥಾನದಲ್ಲಿದ್ದರೆ, ತೆಲಂಗಾಣದ ಅರ್ಜುನ್‌ ಎರಿಗೇಶಿ (2704) ಅವರು 32ನೇ ಸ್ಥಾನದಲ್ಲಿದ್ದಾರೆ.

ನಾಗ್ಪುರದವರಾದ 18 ವರ್ಷದ ರೌನಕ್ ಸಾಧ್ವಾನಿ (2624) ಅವರು ಫಿಡೆ ರೇಟಿಂಗ್‌ ಪಟ್ಟಿಯಲ್ಲಿ 136ನೇ ಕ್ರಮಾಂಕದಲ್ಲಿದ್ದಾರೆ.

28 ವರ್ಷದ ವಿದಿತ್‌ ಗುಜರಾತಿ 2723 ರೇಟಿಂಗ್‌ ಪಾಯಿಂಟ್ಸ್‌ ಹೊಂದಿದ್ದು ಭಾರತದ ಆಟಗಾರರ ಪೈಕಿ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಗಮನಾರ್ಹ ಎಂದರೆ ಪುರುಷರ ವಿಭಾಗದಲ್ಲಿ ಪ್ರತಿಭಾನ್ವಿತ ಆಟಗಾರರ ದಂಡು ಕಂಡುಬಂದರೆ, ಮಹಿಳೆಯರ ವಿಭಾಗದಲ್ಲಿ ಅದೇ ಮಾತು ಹೇಳುವಂತಿಲ್ಲ. ದ್ರೋಣವಲ್ಲಿ ಹಾರಿಕಾ ಕೆಲದಿನಗಳ ಹಿಂದೆ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಅಪವಾದ ಎಂಬಂತೆ ಕಳೆದ ಡಿಸೆಂಬರ್‌ನಲ್ಲಿ ಕಜಕಸ್ತಾನದ ಅಲ್ಮಾಟಿಯಲ್ಲಿ ನಡೆದ ವಿಶ್ವ ರ್‍ಯಾಪಿಡ್‌ ಚಾಂಪಿಯನ್‌ಷಿಪ್‌ನಲ್ಲಿ ತಮಿಳುನಾಡಿನ, 15 ವರ್ಷದ ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ ಬಿ.ಸವಿತಾಶ್ರೀ ಕಂಚಿನ ಪದಕ ಗೆದ್ದು ಸುದ್ದಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT