ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಬಾಕ್ಸಿಂಗ್‌ ಅಂತಿಮ ಅರ್ಹತಾ ಟೂರ್ನಿ: ತಂಡಕ್ಕೆ ಮರಳಿದ ಅಮಿತ್ ಪಂಘಲ್

Published 13 ಏಪ್ರಿಲ್ 2024, 15:25 IST
Last Updated 13 ಏಪ್ರಿಲ್ 2024, 15:25 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಬೆಳ್ಳಿ ವಿಜೇತ ಅಮಿತ್ ಪಂಘಲ್ ಅವರು ಅಂತಿಮ ಒಲಿಂಪಿಕ್‌ ಅರ್ಹತಾ ಟೂರ್ನಿಯಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಮರಳಿದ್ದಾರೆ. ತಂಡದಲ್ಲಿ ಹಲವು ಬದಲಾವಣೆಗಳಾಗಿವೆ.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಆಯ್ಕೆಯಾಗಲು ಅವಕಾಶ ನೀಡುವ ಈ ಅಂತಿಮ ಅರ್ಹತಾ ಟೂರ್ನಿ ಮೇ 25 ರಿಂದ ಜೂನ್‌ 2ರವರೆಗೆ ಬ್ಯಾಂಕಾಕ್‌ನಲ್ಲಿ ನಡೆಯಲಿದೆ. ಅಮಿತ್‌ 51 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಕಳೆದ ತಿಂಗಳು ಇಟಲಿಯಲ್ಲಿ ನಡೆದ ಈ ಹಿಂದಿನ ಅರ್ಹತಾ ಟೂರ್ನಿಯಲ್ಲಿ ಭಾರತ ಬಾಕ್ಸರ್‌ಗಳ ಸಾಧನೆ ಶೋಚನೀಯವಾಗಿತ್ತು. ಯಾರಿಗೂ ಒಲಿಂಪಿಕ್ಸ್‌ ಕೋಟಾ ಪಡೆಯಲು ಸಾಧ್ಯವಾಗಿರಲಿಲ್ಲ. ಅಲ್ಲಿ ಭಾಗವಹಿಸಿದ್ದ ಐವರು ಬಾಕ್ಸರ್‌ಗಳು ಎರಡನೇ ಅರ್ಹತಾ ಟೂರ್ನಿಗೆ ಸ್ಥಾನ ಕಳೆದುಕೊಂಡಿದ್ದಾರೆ.

ಅಲ್ಲಿನ ಕಳಪೆ ನಿರ್ವಹಣೆಯಿಂದಾಗಿ ಭಾರತ ತಂಡದ ಹೈಪರ್ಫಾಮೆನ್ಸ್‌ ನಿರ್ದೇಶಕ ಬರ್ನಾರ್ಡ್‌ ಡ್ಯೂನ್ ಅವರು ಸ್ಥಾನ ಕಳೆದುಕೊಳ್ಳಬೇಕಾಯಿತು.

ರಾಷ್ಟ್ರೀಯ ತಂಡದಿಂದ ಸ್ಥಾನ ಕಳೆದುಕೊಂಡ ಐವರು– 2023ರ ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತರಾದ ದೀಪಕ್‌ ಭೋರಿಯಾ (51 ಕೆ.ಜಿ), ಮೊಹಮ್ಮದ್ ಹುಸ್ಸಾಮುದ್ದೀನ್‌ (57 ಕೆ.ಜಿ), ಆರು ಬಾರಿಯ ಏಷ್ಯನ್ ಚಾಂಪಿಯನ್‌ಷಿಪ್‌ ಪದಕ ವಿಜೇತ ಶಿವ ಥಾಪಾ (63.5 ಕೆ.ಜಿ), ಹಾಲಿ ರಾಷ್ಟ್ರೀಯ ಚಾಂಪಿಯನ್‌ ಲಕ್ಷ್ಯ ಚಾಹರ್ (80 ಕೆ.ಜಿ) ಮತ್ತು 2022ರ ಕಾಮನ್ವೆಲ್ತ್ ಗೇಮ್ಸ್‌ ಕಂಚಿನ ಪದಕ ವಿಜೇತ ಜೈಸ್ಮಿನ್ ಲಂಬೋರಿಯಾ.

ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಜೊತೆ, 2022ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ, ಈ ವರ್ಷ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಿಯಲ್ಲಿ ಗೆದ್ದಿದ್ದ ಅಮಿತ್‌ ಅವರಿಗೆ ಮುಂದಿನ ಒಲಿಂಪಿಕ್ಸ್‌ಗೆ ಆಯ್ಕೆಯಾಗಲು ಮೊದಲ ಮತ್ತು ಅಂತಿಮ ಅವಕಾಶ ಇದಾಗಿದೆ. ಅವರು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಆ ಒಲಿಂಪಿಕ್ಸ್‌ನಲ್ಲಿ ಭಾರತದ 9 ಮಂದಿ ಭಾಗವಹಿಸಿದ್ದರು.

ಅವರು ಭೋರಿಯಾ ಅವರಿಗೆ ಅಸೆಸ್ಮೆಂಟ್‌ನಲ್ಲಿ ಪದೇ ಪದೇ ಸೋತ ಕಾರಣ ಅವರನ್ನು ಈ ಮೊದಲಿನ  ಒಲಿಂಪಿಕ್‌ ಅರ್ಹತಾ ಟೂರ್ನಿಗೆ ಪರಿಗಣಿಸಿರಲಿಲ್ಲ. ಸಚಿನ್‌ ಸಿವಾಚ್‌ (57 ಕೆ.ಜಿ) ಅವರೂ (ಹುಸಾಮುದ್ದೀನ್ ಬದಲು) ತಂಡಕ್ಕೆ ಮರಳಿದ್ದಾರೆ.

ಇಟಲಿಯಲ್ಲಿ ಮೊದಲ ಸುತ್ತು ದಾಟಿದ್ದ ನಿಶಾನ್ ದೇವ್ ಅವರೂ ಅವಕಾಶ ಪಡೆದಿದ್ದಾರೆ.

ತಂಡ ಹೀಗಿದೆ:  ಅಮಿತ್ ಪಂಘಲ್ (51 ಕೆ.ಜಿ), ಸಚಿನ್ ಸಿವಾಚ್ ಜೂ. (57 ಕೆ.ಜಿ), ಅಭಿನಾಶ್ ಜಮ್ವಾಲ್‌ (63.5 ಕೆ.ಜಿ), ನಿಶಾಂತ್ ದೇವ್ (71 ಕೆ.ಜಿ), ಅಭಿಮನ್ಯು ಲೌರಾ (80 ಕೆ.ಜಿ), ಸಂಜೀತ್‌ (92 ಕೆ.ಜಿ), ನರೇಂದರ್ ಬೆರ್ವಾಲ್‌(+92 ಕೆ.ಜಿ)

ಮಹಿಳೆಯರು: ಅನ್ಕುಷಿತಾ ಬೋರೊ (60 ಕೆ.ಜಿ), ಅರುಂಧತಿ ಚೌಧರಿ (66 ಕೆ.ಜಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT