ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಗಂಭೀರ ಅಶಿಸ್ತು ಪ್ರದರ್ಶಿಸಿದ ಭಾರತದ ಕುಸ್ತಿಪಟು ಅಂತಿಮ್ ಪಂಘಲ್ ಅವರಿಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) 3 ವರ್ಷಗಳ ಕಾಲ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಅವರ ಅಕ್ರೆಡಿಟೇಶನ್ ಕಾರ್ಡ್ ಬಳಸಿ ತಮ್ಮ ಸಹೋದರಿಗೆ ಅಥ್ಲೆಟ್ಸ್ ವಿಲೇಜ್‌ಗೆ ಪ್ರವೇಶ ಕೊಡಿಸಲು ಯತ್ನಿಸುವ ಮೂಲಕ ಭಾರತದ ಒಲಿಂಪಿಕ್ ತಂಡಕ್ಕೆ ತೀವ್ರ ಮುಜುಗರ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಐಒಎ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.
ಬುಧವಾರ ನಡೆದ ಮಹಿಳೆಯರ ಕುಸ್ತಿ 53 ಕೆ.ಜಿ ವಿಭಾಗದ ಆರಂಭಿಕ ಬೌಟ್‌ನಲ್ಲೇ ಸೋತು ಅವರು ಕ್ರೀಡಾಕೂಟದಿಂದ ನಿರ್ಗಮಿಸಿದ್ದರು.
‘ಪಂಘಾಲ್ ಅವರು ಭಾರತಕ್ಕೆ ಆಗಮಿಸಿದ ಬಳಿಕ ನಿಷೇಧದ ಕುರಿತಂತೆ ಅಧಿಕೃತ ಆದೇಶ ಹೊರಬೀಳಲಿದೆ’ ಎಂದು ಮೂಲಗಳು ತಿಳಿಸಿವೆ.
ಪಂಘಾಲ್ ಅಶಿಸ್ತು ಕುರಿತಂತೆ ಫ್ರೆಂಚ್ ಅಧಿಕಾರಿಗಳು ಭಾರತದ ಒಲಿಂಪಿಕ್ಸ್ ಸಂಸ್ಥೆ ಗಮನಕ್ಕೆ ತಂದಿದ್ದು, ಪಂಘಾಲ್ ಮತ್ತು ಅವರ ಸಹಾಯಕ ಸಿಬ್ಬಂದಿಗೆ ನಿಷೇಧ ಹೇರಲು ಐಒಎ ಮುಂದಾಗಿದೆ.
ಬುಧವಾರ 53 ಕೆ.ಜಿ ವಿಭಾಗದ ಆರಂಭಿಕ ಬೌಟ್‌ನಲ್ಲೇ ಸೋತ ಬಳಿಕ ಅಂತಿಮ್ ಪಂಘಲ್ ಅಥ್ಲೆಟ್ಸ್ ವಿಲೇಜ್‌ಗೆ ತೆರಳದೆ ಕೋಚ್‌ಗಳಿದ್ದ ಹೋಟೆಲ್‌ಗೆ ಬಂದಿದ್ದರು. ಸಹೋದರಿಗೆ ತಮ್ಮ ಕಾರ್ಡ್ ನೀಡಿ ಅಥ್ಲೆಟ್ ವಿಲೇಜ್‌ನಿಂದ ತಮ್ಮ ವಸ್ತುಗಳನ್ನು ತರುವಂತೆ ಹೇಳಿ ಕಳುಹಿಸಿದ್ದರು. ಅವರ ಸಹೋದರಿಯನ್ನು ಪ್ರವೇಶದ ಸಂದರ್ಭದಲ್ಲೇ ಹಿಡಿದ ಭದ್ರತಾ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ಹೇಳಿಕೆ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.