ಹಾಂಗ್‌ಝೌ: ಯುವ ಕುಸ್ತಿಪಟು ಅಂತಿಮ ಪಂಗಲ್ ಅವರು ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತೆ ಮಂಗೋಲಿಯದ ಬೊಲೊರ್ತುಯ ಬಾತ್ ಒಚಿರ್ ಅವರನ್ನು ಮಣಿಸಿ ಕಂಚಿನ ಪದಕ ಜಯಿಸಿದರು. ಆದರೆ ಏಷ್ಯನ್ ಕ್ರೀಡಾಕೂಟದ ಕುಸ್ತಿಯಲ್ಲಿ ಗುರುವಾರ ಭಾರತದ ಇತರ ಪೈಲ್ವಾನರು ಮಿಂಚಲು ವಿಫಲರಾದರು.
ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕದ ‘ಪ್ಲೇ ಆಫ್’ ಹೋರಾಟವನ್ನು ಅಂತಿಮ್ 3–1 ರಿಂದ ಗೆದ್ದರು.
19 ವರ್ಷದ ಅಂತಿಮ್, ಕ್ವಾರ್ಟರ್‌ಫೈನಲ್‌ನಲ್ಲಿ ಎರಡು ಬಾರಿಯ ವಿಶ್ವಚಾಂಪಿಯನ್ ಜಪಾನ್‌ನ ಅಕಾರಿ ಫುಜಿನಮಿ ಎದುರು ಪರಾಭವಗೊಂಡಿದ್ದರು. ಅವರು ಮೊದಲ ಸುತ್ತಿನಲ್ಲಿ 11–0 ಯಿಂದ ಉಜ್ಬೆಕಿಸ್ತಾನದ ಜಾಸ್ಮಿನಾ ಇಮಾಯೆವಾ ವಿರುದ್ಧ ಸುಲಭ ಜಯ ಸಾಧಿಸಿದ್ದರು.
ಬೊಲೊತುರ್ಯ ವಿರುದ್ಧ ಆರಂಭದಲ್ಲೇ ಬಿಗಪಟ್ಟುಗಳನ್ನು ಹಾಕುವ ಮೂಲಕ 3–0 ರಿಂದ ಮುನ್ನಡೆ ಸಾಧಿಸಿದರು. ಕೊನೆಯಲ್ಲಿ ಮಂಗೋಲಿಯದ ಕುಸ್ತಿಪಟು ಮರುಹೋರಾಟ ನಡೆಸಿದರಾದರೂ, ಅಂತಿಮ್ ಅವರ ರಕ್ಷಣೆಯನ್ನು ಬೇಧಿಸಲು ಆಗಲಿಲ್ಲ.
ವಿನೇಶಾ ಫೋಗಟ್ ಅವರು ಗಾಯದಿಂದ ಹಿಂದೆ ಸರಿದ ಕಾರಣ ಅಂತಿಮ್ ಅವರಿಗೆ ಭಾರತ ಕುಸ್ತಿ ತಂಡದಲ್ಲಿ ಅವಕಾಶ ಲಭಿಸಿತ್ತು. ವಿನೇಶಾ ಅವರಿಗೆ ಏಷ್ಯನ್ ಕ್ರೀಡಾಕೂಟಕ್ಕೆ ನೇರ ಪ್ರವೇಶ ನೀಡಿದ್ದನ್ನು ಅಂತಿಮ್ ಅವರು ಪ್ರಶ್ನಿಸಿದ್ದರು.
ಮಹಿಳೆಯರ 50 ಕೆ.ಜಿ. ವಿಭಾಗದ ಕಂಚಿನ ಪದಕ ‘ಪ್ಲೇ ಆಫ್’ನಲ್ಲಿ ಪೂಜಾ ಗೆಹಲೋತ್ 2–9 ರಿಂದ ಅಕ್ತೆಂಗೆ ಕುನಿಮ್‌ಜಯೆವಾ ಕೈಯಲ್ಲಿ ಪರಾಭವಗೊಂಡರು. 57 ಕೆ.ಜಿ. ವಿಭಾಗದಲ್ಲಿ ಮಾನಸಿ ಅಹ್ಲಾವತ್ ಅವರು ಉಜ್ಬೆಕಿಸ್ತಾನದ ಲಯ್ಲೊಕೊನ್ ಸೊಬಿರೊವಾ ಎದುರು ಸೋತರು.
ಗ್ರೀಕೊ ರೋಮನ್ ಸ್ಪರ್ಧೆಯ ಪುರುಷರ 97 ಕೆ.ಜಿ. ವಿಭಾಗದಲ್ಲಿ ನರೀಂದರ್ ಚೀಮಾ ಅವರು ಕ್ವಾರ್ಟರ್ ಫೈನಲ್‌ನಲ್ಲಿ 1–3 ರಿಂದ ದಕ್ಷಿಣ ಕೊರಿಯಾದ ಲೀ ಸೆಯೋಲ್‌ಗೆ ಮಣಿದರು. 130 ಕೆ.ಜಿ. ವಿಭಾಗದಲ್ಲಿ ನವೀನ್ ಅವರು 0–3 ರಿಂದ ಚೀನಾದ ಮೆಂಗ್ ಲಿಂಗ್‌ಝೆ ಎದುರು ಸೋತರು.
ಏಷ್ಯನ್ ಗೇಮ್ಸ್‌ಗೆ ನೇರ ಪ್ರವೇಶ ಪಡೆದಿರುವ ಬಜರಂಗ್ ಪೂನಿಯಾ (65 ಕೆ.ಜಿ) ಮತ್ತು ಪ್ರತಿಭಾನ್ವಿತ ಕುಸ್ತಿಪಟು ಅಮನ್ ಸೆಹ್ರಾವತ್ (56 ಕೆ.ಜಿ.) ಅವರು ಪದಕದೆಡೆಗಿನ ಅಭಿಯಾನವನ್ನು ಶುಕ್ರವಾರ ಆರಂಭಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.