ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ವರ್ಷಗಳಿಂದ ಹೊಸ ಜಾವೆಲಿನ್ ಖರೀದಿಸಲು ಸಾಧ್ಯವಾಗಿಲ್ಲ: ಪಾಕ್ ಅಥ್ಲೀಟ್ ಅಳಲು

Published 7 ಮಾರ್ಚ್ 2024, 12:57 IST
Last Updated 7 ಮಾರ್ಚ್ 2024, 12:57 IST
ಅಕ್ಷರ ಗಾತ್ರ

ಕರಾಚಿ:‌ ಈ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಪದಕದ ನಿರೀಕ್ಷೆ ಹುಟ್ಟಿಸಿರುವ ಪಾಕಿಸ್ತಾನದ ಅಥ್ಲೀಟ್‌ ಅರ್ಷದ್‌ ನದೀಮ್ ಅವರು ಹಲವು ವರ್ಷಗಳಿಂದ ತಮಗೆ ಹೊಸ ಜಾವೆಲಿನ್‌ ಖರೀದಿಸಲು ಸಾಧ್ಯವಾಗಿಲ್ಲ ಎಂಬ ಗುರುವಾರ ಬೇಸರ ತೋಡಿಕೊಂಡಿದ್ದಾರೆ.

ತಮ್ಮ ಬಳಿ ಒಂದೇ ಜಾವೆಲಿನ್‌ ಇದ್ದು ಅದನ್ನೇ ಕಳೆದ ಏಳೆಂಟು ವರ್ಷಗಳಿಂದ ಬಳಸುತ್ತಿರುವುದಾಗಿ ನದೀಮ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಪಾಕ್‌ನ ಈ ಪ್ರಸಿದ್ಧ ಕ್ರೀಡಾಪಟು ಮೊಣಗಂಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

‘ಆ ಜಾವೆಲಿನ್ ಈಗ ಹಾಳಾಗುವ ಹಂತಕ್ಕೆ ಬಂದಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮೊದಲೇ, ಈ ಬಗ್ಗೆ ಏನಾದರೂ ಮಾಡುವಂತೆ ಪಾಕ್‌ ಫೆಡರೇಷನ್ ಮತ್ತು ನನ್ನ ಕೋಚ್‌ಗೆ ಮನವಿ ಮಾಡಿದ್ದೇನೆ’ ಎಂದು ಅವರು ಅಲವತ್ತುಕೊಂಡಿದ್ದಾರೆ.

2015ರಲ್ಲಿ ಮೊದಲ ಬಾರಿ ಅಂತರರಾಷ್ಟ್ರೀಯ ಕೂಟದಲ್ಲಿ ಭಾಗವಹಿಸಲು ಆರಂಭಿಸಿದ್ದಾಗ ಈ ಜಾವೆಲಿನ್ ಪಡೆದಿದ್ದೆ’ ಎಂದು ಅವರು ನೆನಪಿಸಿಕೊಂಡರು. ಹಾಲಿ ಕಾಮನ್ವೆಲ್ತ್ ಚಾಂಪಿಯನ್ ಆಗಿರುವ ನದೀಮ್ ಕಳೆದ ವರ್ಷ ಮೊಣಕಾಲು ನೋವಿನಿಂದಾಗಿ ಹಾಂಗ್‌ಝೌ ಏಷ್ಯನ್ ಕ್ರೀಡೆಗಳಲ್ಲಿ ಭಾಗವಹಿಸಿರಲಿಲ್ಲ.

‘ಒಲಿಂಪಿಕ್ ಪದಕ ಗೆಲ್ಲುವ ಗುರಿಹೊಂದಿರುವ ಅಂತರರಾಷ್ಟ್ರೀಯ ಅಥ್ಲೀಟ್‌ಗೆ ಸೂಕ್ತ ಕ್ರೀಡಾ ಸಲಕರಣೆ ಮತ್ತು ಸೌಲಭ್ಯಗಳು ಸಿಗುವಂತೆ ಇರಬೇಕು’ ಎಂದು ಅವರು ಹೇಳಿದರು.

ಕಾರು ತಯಾರಿಕಾ ಕಂಪನಿ ಟೊಯೊಟಾ ಜೊತೆ ಪ್ರಾಯೋಜಕತ್ವಕ್ಕೆ ಇಳಿದಿರುವುದರಿಂದ ತಮಗೆ ಅವರು ಸಹಾಯ ಮಾಡಬಹುದು ಎಂಬ ವಿಶ್ವಾಸದಲ್ಲಿದ್ದಾರೆ ನದೀಮ್.

ಒಲಿಂಪಿಕ್ಸ್‌ಗೆ ಎರಡು ತಿಂಗಳು ಮೊದಲು ಮುನ್ನ ದಕ್ಷಿಣ ಆಫ್ರಿಕಾಕ್ಕೆ ತೆರಳಿ ತರಬೇತಿ ಪಡೆಯುತ್ತೇನೆ. ಒಲಿಂಪಿಕ್ಸ್‌ಗೆ ಮುನ್ನ ಒಂದೆರಡು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಆಸೆಯಿದೆ ಎಂದರು.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2022ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಅವರು ಭರ್ಚಿಯನ್ನು 90.18 ಮೀ. ದೂರ ಎಸೆದಿದ್ದು ಅವರ ಈವರೆಗಿನ ಶ್ರೇಷ್ಠ ಸಾಧನೆ. ಆ ಮೂಲಕ ಚಿನ್ನ ಗೆದ್ದ ಅವರು ಪಾಕಿಸ್ತಾನಕ್ಕೆ ಈ ಕೂಟದಲ್ಲಿ 60 ವರ್ಷಗಳ ಚಿನ್ನದ ಬರ ನೀಗಿಸಿದ್ದರು.

ಪಾಕಿಸ್ತಾನದಲ್ಲಿ ಕ್ರಿಕೆಟಗರನ್ನು ಬಿಟ್ಟರೆ, ತಮ್ಮ ಅಂತರರಾಷ್ಟ್ರೀಯ ಸಾಧನೆ ಮೂಲಕ ನದೀಮ್‌ ಏಕೈಕ ಚಿರಪರಿಚಿತ ಕ್ರೀಡಾಪಟು ಆಗಿದ್ದಾರೆ.

ಈ ಮಧ್ಯೆ, ಕೆಲವು ವಿವಾದಗಳಿಂದಾಗಿ ಪಾಕಿಸ್ತಾನದ ಅಮೆಚೂರ್ ಅಥ್ಲೆಟಿಕ್‌ ಫೆಡರೇಷನ್‌ ಅಧ್ಯಕ್ಷ ಅಕ್ರಮ್ ಸಾಹಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎರಡು ದಶಕಗಳ ಕಾಲ ಫೆಡರೇಷನ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅವರು ವೈಯಕ್ತಿಕ ಕಾರಣಗಳಿಂದ ಹುದ್ದೆ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT