ಬೆಂಗಳೂರು: ಅಶ್ವಿನಿ ಪೊನ್ನಪ್ಪ, ಲಕ್ಷ್ಯ ಸೇನ್ ಒಳಗೊಂಡಂತೆ 20 ಮಂದಿ ಪ್ರಮುಖ ಬ್ಯಾಡ್ಮಿಂಟನ್ ಪಟುಗಳು ನಗರದ ಪ್ರಕಾಶ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ (ಪಿಪಿಬಿಎ)ಯಲ್ಲಿ ತರಬೇತಿಯಲ್ಲಿ ತೊಡಗಿದ್ದಾರೆ. ತನ್ಮೂಲಕ ಕೋವಿಡ್–19 ಪಿಡುಗು ಕಾಣಿಸಿಕೊಂಡ ನಂತರ ಬ್ಯಾಡ್ಮಿಂಟನ್ ಚಟುವಟಿಕೆಗೆ ಚಾಲನೆ ದೊರೆತಂತಾಗಿದೆ.
ಲಾಕ್‌ಡೌನ್ ಕಾರಣ ಆಟಗಾರರು, ಆಟಗಾರ್ತಿಯರು ಮನೆಗೆ ಸೀಮಿತಗೊಂಡಿದ್ದರು. ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಕಳೆದ ತಿಂಗಳ ಕೊನೆಯಲ್ಲಿ ಮಾನದಂಡಗಳನ್ನು ರೂಪಿಸಿದ ಬಳಿಕ ಕ್ರೀಡಾಪಟುಗಳು ತರಬೇತಿಗೆ ಮರಳುತ್ತಿದ್ದಾರೆ.
‘ಕೆಲವು ಪ್ರಮುಖ ರಾಷ್ಟ್ರೀಯ ಆಟಗಾರರು ಎರಡು ವಾರಗಳಿಂದ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿ 16 ಅಂಕಣಗಳಿದ್ದು, ಪ್ರಸ್ತುತ 20 ಮಂದಿ ರಾಷ್ಟ್ರೀಯ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾರೆ. ಅವರಿಗೆ ಪ್ರತ್ಯೇಕ ಸಮಯ ಮತ್ತು ಸೆಷನ್‌ಗಳನ್ನು ನಿಗದಿಮಾಡಲಾಗಿದೆ’ ಎಂದು ಅಕಾಡೆಮಿಯ ಮುಖ್ಯ ತರಬೇತುದಾರ ಮತ್ತು ನಿರ್ದೇಶಕರಾದ ಯು.ವಿಮಲ್ ಕುಮಾರ್ ತಿಳಿಸಿದ್ದಾರೆ.
ಒಟ್ಟು 65 ಟ್ರೈನಿಗಳಲ್ಲಿ ಬಹುತೇಕ ಮಂದಿ ನಗರದಲ್ಲಿ ಇಲ್ಲ. ಆದರೆ ಅವರು ಮರಳಿ, ತರಬೇತಿ ಆರಂಭಿಸಲು ತವಕದಿಂದ ಇದ್ದಾರೆ. ಆದರೆ ಈ ಹಂತದಲ್ಲಿ ಯಾರಿಗೂ ತರಬೇತಿ ಕಡ್ಡಾಯ ಮಾಡಿಲ್ಲ ಎಂದು ಅವರು ಹೇಳಿದರು.
‘ಆರು ಅಥವಾ ಹತ್ತು ಮಂದಿಯ ಬ್ಯಾಚ್‌ಗಳಾಗಿ ಬರಬೇಕೆಂದು ನಾವು ಇ–ಮೇಲ್ ಮಾಡಿದ್ದೇವೆ. ಮಹಾರಾಷ್ಟ್ರದಿಂದ ಬರುವವರು ಪ್ರತ್ಯೇಕವಾಸದಲ್ಲಿರಬೇಕಾಗುತ್ತದೆ. ಈಗಲೇ ಬರಬೇಕೆಂದು ಯಾರನ್ನೂ ಆಗ್ರಹಿಸುತ್ತಿಲ್ಲ’ ಎಂದು ಅವರು ತಿಳಿಸಿದರು.
ಡಬಲ್ಸ್ ಆಟಗಾರ್ತಿ, ಮೂರು ಬಾರಿಯ ಕಾಮನ್ವೆಲ್ತ್ ಕ್ರೀಡೆಗಳ ಪದಕ ವಿಜೇತೆ ಅಶ್ವಿನಿ, ಪ್ರಮುಖ ಆಟಗಾರ ಅಜಯ್ ಜಯರಾಮ್, ಕಳೆದ ವರ್ಷ ಅಮೋಘ ಸಾಧನೆ ತೋರಿ ಐದು ಪ್ರಶಸ್ತಿ ಗೆದ್ದ ಲಕ್ಷ್ಯ ಅವರು ಪ್ರಸ್ತುತ ತರಬೇತಿ ಪಡೆಯುವವರಲ್ಲಿ ಒಳಗೊಂಡಿದ್ದಾರೆ. ರಾಷ್ಟ್ರೀಯ ಆಟಗಾರರಾದ ಮಿಥುನ್ ಮಂಜುನಾಥ್, ಬಿ.ಎಂ.ರಾಹುಲ್ ಭಾರದ್ವಾಜ್, ಮೈಸ್ನಮ್ ಮೀರಬ ಕೂಡ ಇಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ.
‘ದೀರ್ಘ ಕಾಲ ಆಟದಿಂದ ದೂರವಿದ್ದ ಕಾರಣ ದೇಶದ ಅಗ್ರ ಆಟಗಾರರ ಆಟದ ಗುಣಮಟ್ಟದ ಮೇಲೆ ಪರಿಣಾಮವಾಗುತ್ತದೆ. ಅವರ ಆಟದ ಮೊನಚು ಶೇ 30 ರಿಂದ 40ರಷ್ಟು ಕಡಿಮೆಯಾಗಿರುತ್ತದೆ. ಮಾಮೂಲಿ ಲಯಕ್ಕೆ ಮರಳಲು ಅವರಿಗೆ ಸುಮಾರು ಆರು ವಾರಗಳು ಬೇಕಾಗುತ್ತವೆ’ ಎಂದು ವಿಮಲ್ ಹೇಳಿದರು.
ಆಟಕ್ಕೆ ಒಗ್ಗಿಕೊಳ್ಳುವುದರ ಜೊತೆಗೆ ದೃಷ್ಟಿಯ ಚಲನೆ ಚುರುಕು ಪಡೆಯುವ ಕಡೆ ಗಮನಹರಿಸುತ್ತಿದ್ದೇವೆ ಎಂದು ಮಾಜಿ ಅಂತರರಾಷ್ಟ್ರೀಯ ಆಟಗಾರ ವಿಮಲ್ ಕುಮಾರ್ ತಿಳಿಸಿದರು.
‘ಸದ್ಯಕ್ಕೆ ಯಾವುದೇ ಟೂರ್ನಿಗಳಿಲ್ಲ. ಆದರೆ ಸೆಪ್ಟೆಂಬರ್‌ನಲ್ಲಿ ಟೂರ್ನಿಗಳಲ್ಲಿ ಆಡಬೇಕಾಗುತ್ತದೆ ಎಂದು ಭಾವಿಸಿ ಅಭ್ಯಾಸ ನಡೆಸಬೇಕಾಗುತ್ತದೆ’ ಎಂದರು.
‘ಹೈದರಾಬಾದ್ ಓಪನ್ ಆಗಸ್ಟ್‌ನಲ್ಲಿ ನಡೆಯುವುದು ಕಷ್ಟ. ಆದರೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಟೂರ್ನಿಗಳ ಪರಿಷ್ಕೃತ ವೇಳಾಪಟ್ಟಿಯಲ್ಲಿ ಈ ಟೂರ್ನಿಯ ಬಗ್ಗೆ ಉಲ್ಲೇಖಿಸಿ ಪ್ರಕಟಿಸಿರುವುದು ಸಂತಸ ಮೂಡಿಸಿದೆ. ಇಂಥ ಕ್ರಮ ಆಟಗಾರರಲ್ಲಿ ವಿಶ್ವಾಸ ಮೂಡಿಸುತ್ತದೆ’ ಎಂದರು.
ಪಡುಕೋಣೆ– ದ್ರಾವಿಡ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿರುವ ಈ ಅಕಾಡೆಮಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವೇಶದ್ವಾರದಲ್ಲೇ ಆಟಗಾರರ ತಾಪಮಾನ ಪರಿಶೀಲಿಸಲಾಗುತ್ತದೆ. ಆದರೆ ಈಜುಕೊಳ ಮತ್ತು ಜಿಮ್‌ಗಳ ಬಳಕೆಗೆ ಸದ್ಯಕ್ಕೆ ಅವಕಾಶವಿಲ್ಲ ಎಂದರು.
‘ಆದರೆ ಆಟಗಾರರ ಮೇಲೆ ಸದಾ ಕಣ್ಣಿಡಲು ಬಯಸುವುದಿಲ್ಲ. ಅವರಿಗೆ ತಮ್ಮ ಸುರಕ್ಷತೆಯ ಹೊಣೆಯನ್ನು ತಾವೇ ಆಗಿ ವಹಿಸಿಕೊಳ್ಳುವಂತೆ ಆಗಾಗ ಹೇಳುತ್ತಿರುತ್ತೇವೆ’ ಎಂದು ವಿಮಲ್ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.