ನವದೆಹಲಿ: ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ದೀಪಕ್ ಭೋರಿಯಾ (51 ಕೆ.ಜಿ) ಮತ್ತು ನಿಶಾಂತ್ ದೇವ್ (71 ಕೆ.ಜಿ) ಅವರು ಚೀನಾದ ಗುವಾಂಗ್ ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಭಾರತ ಪುರುಷರ ಬಾಕ್ಸಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
2022 ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ಗೆದ್ದ ಪರ್ವೀನ್ ಹೂಡಾ (57 ಕೆ.ಜಿ), ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತೆ ಜೈಸ್ಮಿನ್ ಲಂಬೊರಿಯಾ (60 ಕೆ.ಜಿ), ಅರುಂಧತಿ ಚೌಧರಿ ಮತ್ತು ಪ್ರೀತಿ ಪವಾರ್ ಅವರು ಅನುಭವಿಗಳಾದ ನಿಖತ್ ಝರೀನ್ (51 ಕೆ.ಜಿ) ಮತ್ತು ಲವ್ಲಿನಾ ಬೊರ್ಗೊಹೈನ್ (75 ಕೆ.ಜಿ) ಜೊತೆ ಮಹಿಳಾ ತಂಡದಲ್ಲಿ ಸ್ಥಾನ ಪಡದಿದ್ದಾರೆ. ಏಷ್ಯನ್ ಕ್ರೀಡಾಕೂಟ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ.
ಮಾರ್ಚ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್ ಫೈನಲ್ ತಲುಪಿದ ಕಾರಣ, ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಮತ್ತು ಟೋಕಿಯೊ ಒಲಿಂಪಿಕ್ಸ್ ಕಂಚು ಗೆದ್ದ ಲವ್ಲಿನಾ ಅವರು ನೇರವಾಗಿ ಅರ್ಹತೆ ಪಡೆದಿದ್ದಾರೆ.
ಏಷ್ಯನ್ ಕ್ರೀಡಾಕೂಟವು, 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಮೊದಲ ಅರ್ಹತಾ ಕೂಟವಾಗಿರುವ ಕಾರಣ ಏಷ್ಯಾದ ಬಾಕ್ಸರ್‌ಗಳಿಗೆ ಇದು ಮಹತ್ವಪೂರ್ಣವಾಗಿದೆ.
ಏಷ್ಯನ್ ಗೇಮ್ಸ್ ಲೈಟ್ ಫ್ಲೈವೇಟ್ ವಿಭಾಗದ ಹಾಲಿ ಚಾಂಪಿಯನ್ ಹಾಗೂ 2019ರ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ಗೆದ್ದಿರುವ ಅಮಿತ್ ಪಂಘಲ್ ಅವರು ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.
ಭಾರತ ಬಾಕ್ಸಿಂಗ್ ಫೆಡರೇಷನ್ ಹೊಸ ಆಯ್ಕೆ ನೀತಿಯ ಪ್ರಕಾರ ಬಾಕ್ಸರ್ ಒಬ್ಬರ ಸಾಮರ್ಥ್ಯವನ್ನು 2 ರಿಂದ 3 ವಾರಗಳ ಅವಧಿಯಲ್ಲಿ ವಿವಿಧ ಮಾನದಂಡಗಳಡಿ ಅಳೆಯಲಾಗುತ್ತದೆ. ಇದರಡಿ ದೀಪಕ್ ಅವರು ಮೇ ತಿಂಗಳಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್ ಆಯ್ಕೆಯಲ್ಲೂ, ಅಮಿತ್ ಪಂಘಲ್ ಅವರಿಗಿಂತ ಮುಂದಿದ್ದರು.
ದೀಪಕ್ ಮತ್ತು ನಿಶಾಂತ್ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಗಮನ ಸೆಳೆದಿದ್ದರು. ಸೆಮಿಫೈನಲ್‌ನಲ್ಲೂ ತೀವ್ರ ಹೋರಾಟ ಪ್ರದರ್ಶಿಸಿ ಸೋತು ಕಂಚಿನ ಪದಕ ಪಡೆದಿದ್ದರು.
ಮಹಿಳೆಯರ 48 ಕೆ.ಜಿ. ತೂಕ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿರುವ ನೀತು ಘಂಗಾಸ್ ಅವರು 54 ಕೆ.ಜಿ. ವಿಭಾಗದಲ್ಲಿ ಅರ್ಹತೆ ಪಡೆಯಲು ವಿಫಲರಾದರು. ಹರಿಯಾಣದ ಸ್ಪರ್ಧಿ, 19 ವರ್ಷದ ಪ್ರೀತಿ ಪವಾರ್, ನೀತು ಅವರನ್ನು ಹಿಂದೆಹಾಕಿದ್ದರು. ಒಲಿಂಪಿಕ್ಸ್‌ನಲ್ಲಿ 48 ಕೆ.ಜಿ. ತೂಕ ವಿಭಾಗ ಇರದ ಕಾರಣ ಮತ್ತು ನಿಖತ್ ಈಗಾಗಲೇ 51 ಕೆ.ಜಿ. ವಿಭಾಗದಲ್ಲಿ ಅರ್ಹತೆ ಪಡೆದಿರುವ ಕಾರಣ ನೀತು 54 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಬಯಸಿದ್ದರು.
ತಂಡ ಇಂತಿದೆ: ಮಹಿಳೆಯರು: ನಿಖತ್ ಝರೀನ್ (51 ಕೆ.ಜಿ.), ಪ್ರೀತಿ ಪವಾರ್ (54 ಕೆ.ಜಿ), ಪರ್ವೀನ್ ಹೂಡ (57 ಕೆ.ಜಿ), ಜೈಸ್ಮಿನ್ ಲಂಬೋರಿಯಾ (60 ಕೆ.ಜಿ), ಅರುಂಧತಿ ಚೌಧರಿ (66 ಕೆ.ಜಿ), ಲವ್ಲಿನಾ ಬೊರ್ಗೊಹೈನ್ (75 ಕೆ.ಜಿ)
ಪುರುಷರು: ದೀಪಕ್ ಭೋರಿಯಾ (51 ಕೆ.ಜಿ), ಸಚಿನ್ ಸಿವಾಚ್ (57 ಕೆ.ಜಿ), ಶಿವ್ ಥಾಪಾ (63.5 ಕೆ.ಜಿ), ನಿಶಾಂತ್ ದೇವ್ (71 ಕೆ.ಜಿ), ಲಕ್ಷ್ಯ ಚಾಹರ್ (80 ಕೆ.ಜಿ), ಸಂಜೀತ್ (92 ಕೆ.ಜಿ) ಮತ್ತು ನರೇಂದರ್ ಬೆರ್ವಾಲ್ (+92 ಕೆ.ಜಿ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.