ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games 2023 | ಭಾರತಕ್ಕೆ 'ಪದಕ ಶತಕ'ದ ಕನಸು

ನೀರಜ್ ಚೋಪ್ರಾ, ಸಿಂಧು, ಲವ್ಲಿನಾ ಮೇಲೆ ನಿರೀಕ್ಷೆ; ಚೆಸ್‌, ಕ್ರಿಕೆಟ್, ಕುಸ್ತಿಯಲ್ಲಿ ಚಿನ್ನದ ನಿರೀಕ್ಷೆ
Published 23 ಸೆಪ್ಟೆಂಬರ್ 2023, 0:30 IST
Last Updated 23 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಹಾಂಗ್‌ಝೌ: ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಅವರ ನಾಯಕತ್ವದ ಭಾರತವು ಶನಿವಾರದಿಂದ ಆರಂಭವಾಗಲಿರುವ 19ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪದಕಗಳ ಶತಕ ದಾಖಲಿಸಲು ಸಜ್ಜಾಗಿದೆ.

ಹೋದ ವರ್ಷವೇ ಈ ಕೂಟ ನಡೆಯಬೇಕಿತ್ತು. ಆದರೆ ಕೋವಿಡ್ ಬಿಕ್ಕಟ್ಟಿನ ಕಾರಣ ಈ ವರ್ಷಕ್ಕೆ ಮೂಂದೂಡಲಾಗಿತ್ತು.. ಇದೀಗ ಕೂಟವನ್ನು ಯಶಸ್ವಿಗೊಳಿಸಲು ಆತಿಥೇಯ ಚೀನಾ ದೇಶವೂ ಸರ್ವಸನ್ನದ್ಧವಾಗಿದೆ.

ಈ ಬಾರಿ ಒಟ್ಟು 39 ಕ್ರೀಡೆಗಳಲ್ಲಿ ಭಾರತದ 655 ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಪಣಕ್ಕೊಡ್ಡಲಿದ್ದಾರೆ. 2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡವು 70 ಪದಕಗಳನ್ನು (16 ಚಿನ್ನ, 23 ಬೆಳ್ಳಿ ಹಾಗೂ 31 ಕಂಚು) ಜಯಿಸಿತ್ತು. ಈ ಬಾರಿ ನೂರರ ಗಡಿ ದಾಟುವ ಆತ್ಮವಿಶ್ವಾಸದಲ್ಲಿ ಭಾರತ ತಂಡವಿದೆ.

2021ರಲ್ಲಿ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ ಕೂಟದಲ್ಲಿ  ಭಾರತ ಅಮೋಘ ಪ್ರದರ್ಶನ ನೀಡಿತ್ತು. ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕೂಟಕ್ಕೆ ಅರ್ಹತೆ ಗಿಟ್ಟಿಸಲು ಏಷ್ಯನ್ ಕ್ರೀಡಾಕೂಟದಲ್ಲಿ ಅವಕಾಶವಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಕ್ರೀಡಾಪಟುಗಳು ಟ್ರ್ಯಾಕ್‌ ಮತ್ತು ಫೀಲ್ಡ್, ಈಜು, ಕುಸ್ತಿ, ಶೂಟಿಂಗ್, ಬಾಕ್ಸಿಂಗ್ ಮತ್ತಿತರ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅದರಿಂದಾಗಿ ಕಳೆದ ಬಾರಿಗಿಂತ ಈ ಸಲ ಹೆಚ್ಚು ಪದಕ ಗಳಿಕೆಯಾಗುವ ನಿರೀಕ್ಷೆ ಇದೆ.

ಹೋದ ಬಾರಿ ಟ್ರ್ಯಾಕ್‌ ಹಾಗೂ ಫೀಲ್ಟ್‌ನಲ್ಲಿ 20 ಪದಕ ಜಯಿಸಿದ್ದ ತಂಡವು ಈ ಬಾರಿ 25 ಪದಕ ಗೆಲ್ಲುವ ಭರವಸೆ ಇದೆ.  ಎಲ್ಲ ಕ್ರೀಡೆಗಳಲ್ಲಿಯೂ ಸೇರಿಸಿ 20ಕ್ಕಿಂತ ಹೆಚ್ಚು ಚಿನ್ನದ ಪದಕಗಳು ಒಲಿಯುವ ಸಾಧ್ಯತೆ ಇದೆ.

ಐವರು ಒಲಿಂಪಿಕ್ ಪದಕ ವಿಜೇತರು

ಇದೇ ಮೊದಲ ಬಾರಿಗೆ ಏಷ್ಯನ್ ಕೂಟದಲ್ಲಿ ಭಾರತ ತಂಡದಲ್ಲಿ ಐವರು ಒಲಿಂಪಿಕ್ ಪದಕ ವಿಜೇತರು ಇದ್ದಾರೆ.

ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಈಚೆಗಷ್ಟೇ ವಿಶ್ವ ಅಥ್ಲೆಟಿಕ್ಸ್‌ನಲ್ಲಿಯೂ ಸ್ವರ್ಣ ಸಂಭ್ರಮ ಆಚರಿಸಿದ್ದರು. ಡೈಮಂಡ್ ಲೀಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡಿದ್ದರು. ಇದರಿಂದಾಗಿ ಅವರು ಇಲ್ಲಿಯೂ ಚಿನ್ನ ಗೆಲ್ಲುವ ನೆಚ್ಚಿನ ಅಥ್ಲೀಟ್ ಆಗಿದ್ದಾರೆ.

ಅವರಲ್ಲದೇ ವೇಟ್‌ಲೀಫ್ಟರ್ ಮೀರಾಬಾಯಿ ಚಾನು, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಕುಸ್ತಿಪಟು ಬಜರಂಗ್ ಪೂನಿಯಾ, ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಕಣದಲ್ಲಿದ್ದಾರೆ. ಅಲ್ಲದೇ ಹೋದ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ ಪುರುಷರ ಹಾಕಿ ತಂಡದ ಬಹುತೇಕ ಆಟಗಾರರೂ ಇಲ್ಲಿದ್ದಾರೆ. ಹಾಕಿ ಕ್ರೀಡೆಯಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಚಿನ್ನದ ಮೇಲೆ ಕಣ್ಣಿಟ್ಟಿವೆ. ಕಬಡ್ಡಿಯಲ್ಲಿಯೂ ಎರಡೂ ತಂಡಗಳು ಚಿನ್ನದ ಪದಕ ಜಯಿಸುವ ಸಾಧ್ಯತೆಗಳು ಹೆಚ್ಚಿವೆ. 

ಈ ಬಾರಿ ಚೆಸ್, ಆರ್ಚರಿ ಮತ್ತು ಕ್ರಿಕೆಟ್‌ ಕ್ರೀಡೆಗಳಲ್ಲಿಯೂ ಭಾರತಕ್ಕೆ ಚಿನ್ನದ ಗರಿ ಲಭಿಸುವ ನಿರೀಕ್ಷೆ ಇದೆ. ಕಳೆದ ಬಾರಿ ಎಂಟು ಪದಕ ಗೆದ್ದಿದ್ದ ಶೂಟರ್‌ಗಳು ಈ ಬಾರಿಯೂ ವಿಶ್ವಾಸ ಮೂಡಿಸಿದ್ದಾರೆ.

ಮಹಿಳೆಯರ ಬಾಕ್ಸಿಂಗ್‌ನಲ್ಲಿ ನಿಖತ್ ಜರೀನ್ ಮತ್ತು ಲವ್ಲೀನಾ ಅವರ ಮೇಲೆ ಅಪಾರ ನಿರೀಕ್ಷೆ ಇದೆ. ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧು ಲಯಕ್ಕೆ ಮರಳಿದರೆ ಪದಕ ಖಚಿತ.  ಉಳಿದಂತೆ ಲಕ್ಷ್ಯ ಸೇನ್, ಪ್ರಣಯ್, ಕಿದಂಬಿ ಶ್ರೀಕಾಂತ್, ಡಬಲ್ಸ್‌ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ, ಗಾಯತ್ರಿ ಗೋಪಿಚಂದ್‌–ತ್ರಿಷಾ ಜೋಳಿ ಅವರಿಂದ ಚಿನ್ನದ ನಿರೀಕ್ಷೆ ಇದೆ. ಫುಟ್‌ಬಾಲ್‌ನಲ್ಲಿ ಸುನಿಲ್ ಚೆಟ್ರಿ ಬಳಗವೂ ಫೈನಲ್‌ವರೆಗೆ ಸಾಗುವ ಭರವಸೆ ಇದೆ.

ಪ್ರತಿ ಬಾರಿಯಂತೆ ಚೀನಾ ದೇಶವು ಈ ಸಲವೂ ಪದಕ ಜಯದಲ್ಲಿ ಕಠಿಣ ಪೈಪೋಟಿಯೊಡ್ಡಲಿದೆ. ಈ ತಂಡದಲ್ಲಿ 437 ಮಹಿಳಾ ಅಥ್ಲೀಟ್‌ಗಳೂ ಸೇರಿ 886 ಮಂದಿ ಇದ್ದಾರೆ. 2010ರಲ್ಲಿ ಚೀನಾ ತಂಡದಲ್ಲಿ 977 ಕ್ರೀಡಾಪಟುಗಳಿದ್ದರು. ದಕ್ಷಿಣ ಕೊರಿಯಾ ತಂಡವೂ 867 ಅಥ್ಲೀಟ್‌ಗಳನ್ನು ಕಣಕ್ಕಿಳಿಸುತ್ತಿದೆ. ಬಲಾಢ್ಯ ದೇಶಗಳಾದ ಜಪಾನ್, ಇಂಡೊನೇಷ್ಯಾ, ಇರಾನ್ ಹಾಗೂ ಮಲೇಷ್ಯಾ ತಂಡಗಳ ಪೈಪೋಟಿಯನ್ನು ಭಾರತವು ಎದುರಿಸಿ ನಿಂತು ನೂರರ ಕನಸು ನನಸುಗೊಳಿಸಿಕೊಳ್ಳುವ ಸವಾಲು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT