ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | ಮಣಿಕಾ ಬಾತ್ರಾಗೆ ರೋಚಕ ಗೆಲುವು

Published 29 ಸೆಪ್ಟೆಂಬರ್ 2023, 23:35 IST
Last Updated 29 ಸೆಪ್ಟೆಂಬರ್ 2023, 23:35 IST
ಅಕ್ಷರ ಗಾತ್ರ

ಹಾಂಗ್‌ಝೌ: ಕಾಮನ್ವೆಲ್ತ್ ಕ್ರೀಡೆಗಳ ಸ್ವರ್ಣಪದಕ ವಿಜೇತೆ ಮಣಿಕಾ ಬಾತ್ರಾ ಅವರು ಏಷ್ಯನ್ ಗೇಮ್ಸ್‌ ಟೇಬಲ್ ಟೆನಿಸ್‌ ಮಹಿಳೆಯರ ಸಿಂಗಲ್ಸ್‌ನಲ್ಲಿ ಶುಕ್ರವಾರ ಎಂಟರ ಘಟ್ಟಕ್ಕೆ ಮುನ್ನಡೆದರು. ಆದರೆ ಪುರುಷರ ವಿಭಾಗದಲ್ಲಿ ಭಾರತದ ಅನುಭವಿಗಳಾದ ಎ.ಶರತ್ ಕಮಲ್ ಮತ್ತು ಜಿ.ಸತ್ಯನ್ ಅವರ ಸವಾಲು ಪ್ರಿಕ್ವಾರ್ಟರ್‌ಫೈನಲ್‌ಗೇ ಅಂತ್ಯಗೊಂಡಿತು.

ಪುರುಷರ ಸಿಂಗಲ್ಸ್‌ನಲ್ಲಿ ಶರತ್ ವೀರೋಚಿತ ಪ್ರದರ್ಶನ ನೀಡಿದರೂ, ಚೀನಾ ತೈಪೆಯ ಚಿ ಯುವಾನ್ ಚುವಾಂಗ್ ಎದುರು ಗೆಲುವು  ಸಾಧ್ಯವಾಗಲಿಲ್ಲ. ತೈಪೆಯ ಆಟಗಾರ 11–7, 12–10, 9–11, 11–5, 10–12, 6–11, 11–8ರಲ್ಲಿ ಜಯಳಿಸಿದರು. ಎರಡು ಗೇಮ್‌ಗಳ ಹಿನ್ನಡೆಯಿಂದ ಚೇತರಿಸಿಕೊಂಡ ಶರತ್ ನಂತರ 3–3 ಸಮ ಮಾಡಿಕೊಂಡರೂ, ನಿರ್ಣಾಯಕ ಗೇಮ್‌ನಲ್ಲಿ ಸಮಚಿತ್ತದಿಂದ ಆಟವಾಡಲು ಆಗಲಿಲ್ಲ.

ಜಿ.ಸತ್ಯನ್ 3–11, 3–11, 6–11, 3–11 ರಿಂದ ಚೀನಾದ ಚಿಕಿನ್ ವಾಂಗ್‌ ಅವರ ಎದುರು ಸೋಲನುಭವಿಸಿದರು.

ಮಿಶ್ರಫಲ: ‌ಮಹಿಳೆಯರ ಡಬಲ್ಸ್‌ನಲ್ಲಿ ಭಾರತಕ್ಕೆ ಇಂದು ಮಿಶ್ರಫಲ. ಸುತೀರ್ಥ ಮುಖರ್ಜಿ– ಐಹಿಕಾ ಮುಖರ್ಜಿ 11–8, 11–7, 11–4 ರಿಂದ ಥಾಯ್ಲೆಂಡ್‌ನ ಜಿನ್ನಿಪಾ–ವಾನ್ವಿಸಾ ಎದುರು ಜಯ ಗಳಿಸಿದರು. ಆದರೆ ಶ್ರೀಜಾ ಅಕುಲಾ– ದಿವ್ಯಾ ಚಿತಳೆ ಹೊರಬಿದ್ದರು. ಮಿವಾ ಹರಿಮೊಟೊ– ಮಿಯು ಕಿಹಾರಾ 11–3, 11–5, 11–8 ರಿಂದ ಭಾರತದ ಜೋಡಿಯನ್ನು ಸೋಲಿಸಿದರು.

ಸಿಂಗಲ್ಸ್‌ನಲ್ಲಿ ಹಿರಿಯ ಆಟಗಾರ್ತಿ ಮಣಿಕಾ ಅವರ ವೀರೋಚಿತ ಗೆಲುವು ಭಾರತದ ಪಾಳೆಯದಲ್ಲಿ ಹರುಷ ಮೂಡಿಸಿತು. ತೀವ್ರ ಸೆಣಸಾಟ ಕಂಡ 16ರ ಘಟ್ಟದ ಪಂದ್ಯದಲ್ಲಿ ಮಣಿಕಾ 11–7, 6–11, 12–10, 11–13, 12–10, 11–6ರಲ್ಲಿ ಥಾಯ್ಲೆಂಡ್‌ನ ಸುತಾಸಿನಿ ಸವೆಟ್ಬಟ್ ಅವರನ್ನು ಹಿಮ್ಮೆಟ್ಟಿಸಿದರು. ಶನಿವಾರ ನಡೆಯುವ ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ವಿಶ್ವದ ಮೂರನೇ ಕ್ರಮಾಂಕದ ಆಟಗಾರ್ತಿ, ಚೀನಾದ ಯಿದಿ ವಾಂಗ್‌ ಅವರನ್ನು ಎದುರಿಸಲಿದ್ದಾರೆ. ಮಹಿಳಾ ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್‌ನಲ್ಲಿ ಈಗಾಗಲೇ ಸೋತಿರುವ ಕಾರಣ ಮಣಿಕಾ ಅವರಿಗೆ ಪದಕ ಗೆಲ್ಲಲು ಸಿಂಗಲ್ಸ್‌ನಲ್ಲಿ ಮಾತ್ರ ಅವಕಾಶ ಉಳಿದಿದೆ. ಜಕಾರ್ತಾ ಕ್ರೀಡೆಗಳಲ್ಲಿ ಅವರು ಮಿಕ್ಸೆಡ್ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಪುರುಷರ ಡಬಲ್ಸ್‌ನಲ್ಲಿ ಭಾರತದ ಮಾನವ್ ಠಕ್ಕರ್ ಮತ್ತು ಮನುಷ್‌ ಉತ್ಪಲ್‌ಭಾಯ್ ಶಾ ಜೋಡಿ 3–2 ರಿಂದ (3–11, 11–9, 11–6, 5–11, 11–8 ರಿಂದ ಸಿಂಗಪುರದ ಐಸಾಕ್ ಕ್ವೆಕ್ ಯಾಂಗ್– ಯೆ ಎನ್ ಕೊಯೆನ್ ಪಾಂಗ್ ಜೋಡಿಯನ್ನು ಮಣಿಸಿ ಎಂಟರ ಘಟ್ಟ ತಲುಪಿತು. ಭಾರತದ ಆಟಗಾರರು ಮುಂದಿನ ಸುತ್ತಿನಲ್ಲಿ ಕೊರಿಯಾದ ವೂಜಿನ್ ಜಾಂಗ್ –ಲಿಮ್‌ ಜಾಂಗ್ ಹೂನ್ ಅವರನ್ನು ಎದುರಿಸಲಿದ್ದಾರೆ.

ಆದರೆ ಭಾರತದ ಇನ್ನೊಂದು ಜೋಡಿ ಶರತ್‌– ಸತ್ಯನ್ 0–3 ರಿಂದ (5–11, 4–11, 7–11) ರಿಂದ ಚೀನಾದ ಚುಕಿನ್ ವಾಂಗ್‌– ಫಾನ್ ಝೆನ್‌ಡಾಂಗ್ ಎದುರು ಸೋಲನುಭವಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT