ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ..ಚಿನ್ನ.. ಆಸೆ

ಜಕಾರ್ತ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡದ ಮೇಲೆ ನಿರೀಕ್ಷೆಯ ಭಾರ
Last Updated 5 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಪುರುಷರ ತಂಡ ಈ ಬಾರಿಯ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಲಿದೆಯೆ. ಜಕಾರ್ತದಲ್ಲಿ ಪಿ.ಆರ್‌.ಶ್ರೀಜೇಶ್‌ ಬಳಗದಿಂದ ‘ಗೋಲ್ಡನ್‌ ಡಬಲ್‌’ ಸಾಧನೆ ಮೂಡಿಬರಲಿದೆಯೆ... ಭಾರತದ ಹಾಕಿ ಪ್ರಿಯರಲ್ಲಿ ಗರಿಗೆದರಿರುವ ನಿರೀಕ್ಷೆಗಳು ಇವು.

18ನೇ ಏಷ್ಯನ್‌ ಕ್ರೀಡಾಕೂಟದ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಕೂಟದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಹಾಕಿ ವಿಭಾಗದಲ್ಲಿ ಪಾಕಿ ಸ್ತಾನದ ಆಧಿಪತ್ಯ ಎದ್ದುಕಾಣುತ್ತದೆ. ಈ ತಂಡ ಎಂಟು ಚಿನ್ನದ ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದೆ. ಸತತ 15 ಬಾರಿ ಕೂಟದಲ್ಲಿ ಭಾಗವಹಿಸಿರುವ ಭಾರತದ ಖಾತೆಯಲ್ಲಿ ಇರುವುದು ಮೂರು ಚಿನ್ನದ ಪದಕಗಳು ಮಾತ್ರ. 12 ಸಲ ಫೈನಲ್‌ ಪ್ರವೇಶಿಸಿರುವ ತಂಡ ಈ ಪೈಕಿ ಒಂಬತ್ತು ಬಾರಿ ಚಿನ್ನದ ಹಾದಿಯಲ್ಲಿ ಎಡವಿದೆ.

1966 ಡಿಸೆಂಬರ್‌ 19, ಭಾರತದ ಹಾಕಿ ಕ್ರೀಡೆಯ ಪಾಲಿಗೆ ಸ್ಮರಣೀಯ ದಿನ. ಅಂದು ಬ್ಯಾಂಕಾಕ್‌ನ ಕ್ರೀಡಾಂಗಣದಲ್ಲಿ ಗೋಲ್‌ಕೀಪರ್‌ ಶಂಕರ್‌ ಲಕ್ಷ್ಮಣನ್‌ ಸಾರಥ್ಯದ ತಂಡ ಹೊಸ ಮೈಲುಗಲ್ಲು ಸ್ಥಾಪಿಸಿತ್ತು. ಏಷ್ಯನ್‌ ಕೂಟದಲ್ಲಿ ಮೊದಲ ಚಿನ್ನ ಗೆದ್ದು ಪಾಕ್‌ ಪ್ರಾಬಲ್ಯಕ್ಕೆ ಕಡಿವಾಣ ಹಾಕಿತ್ತು. ಬಳಿಕ ತಂಡದಿಂದ ಚಿನ್ನದ ಸಾಧನೆ ಅರಳಲು 32 ವರ್ಷಗಳೇ ಬೇಕಾದವು. 1998ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಕೂಟದ ಫೈನಲ್‌ನಲ್ಲಿ ಭಾರತ, ಪೆನಾಲ್ಟಿ ಶೂಟೌಟ್‌ನಲ್ಲಿ ದಕ್ಷಿಣ ಕೊರಿಯಾವನ್ನು ಸೋಲಿಸಿತ್ತು. ನಂತರ ಜರುಗಿದ ಮೂರು ಕೂಟಗಳಲ್ಲಿ ತಂಡ ಕಹಿ ಅನುಭವಿಸಬೇಕಾಯಿತು. ನಾಲ್ಕು ವರ್ಷಗಳ ಹಿಂದೆ (2014) ದಕ್ಷಿಣ ಕೊರಿಯಾದ ಇಂಚೆನ್‌ನಲ್ಲಿ ನಡೆ ದಿದ್ದ ಕೂಟದಲ್ಲಿ ಸರ್ದಾರ್‌ ಸಿಂಗ್‌ ನೇತೃತ್ವದ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು. ಈ ಮೂಲಕ 16 ವರ್ಷಗಳಿಂದ ಕಾಡುತ್ತಿದ್ದ ಕೊರಗನ್ನು ದೂರ ಮಾಡಿತ್ತು.

ಈ ಬಾರಿಯ ಹಾದಿ ಹೂವಿನ ಹಾಸಿಗೆಯೆ?
ಇಂಡೊನೇಷ್ಯಾದಲ್ಲಿ ಆಗಸ್ಟ್‌ 18ರಿಂದ ನಡೆಯುವ ಕೂಟದಲ್ಲಿ ಶ್ರೀಜೇಶ್‌ ಪಡೆ ಚಿನ್ನ ಗೆಲ್ಲುವುದು ಖಚಿತ ಎಂದು ಹಲವರು ಈಗಾಗಲೇ ಷರಾ ಬರೆದುಬಿಟ್ಟಿದ್ದಾರೆ.

ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ಜರುಗಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮುಗ್ಗರಿಸಿದ್ದ ತಂಡ ಎಫ್‌ಐಎಚ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪುಟಿದೆದ್ದಿತ್ತು. ಬೆಲ್ಜಿಯಂ, ಅರ್ಜೆಂಟೀನಾ ಮತ್ತು ನೆದರ್ಲೆಂಡ್ಸ್‌ನಂತಹ ಬಲಿಷ್ಠ ತಂಡಗಳನ್ನು ಮಣಿಸಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದು ತಂಡದ ಮೇಲೆ ನಿರೀಕ್ಷೆ ಗರಿಗೆದರುವಂತೆ ಮಾಡಿದೆ.

ಇತ್ತೀಚೆಗೆ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಕೇಂದ್ರದಲ್ಲಿ ನಡೆದಿದ್ದ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿರುವುದು ಕೂಡಾ ತಂಡದ ಮೇಲೆ ವಿಶ್ವಾಸ ಹೆಚ್ಚುವಂತೆ ಮಾಡಿದೆ.

ಭಾರತ, ಈಗ ಹಾಕಿ ಲೋಕದ ಶಕ್ತಿಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಪ್ರಸ್ತುತ ಎಫ್‌ಐಎಚ್‌ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಶ್ರೀಜೇಶ್‌ ಪಡೆ ಐದನೇ ಸ್ಥಾನದಲ್ಲಿದೆ.

ಏಷ್ಯಾಮಟ್ಟದಲ್ಲಿ ಭಾರತಕ್ಕೆ ಪ್ರಬಲ ಸವಾಲೊಡ್ಡ ಬಲ್ಲ ತಂಡ ಸದ್ಯ ಯಾವುದೂ ಇಲ್ಲ. ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾ, ದಶಕದ ಹಿಂದಿನ ಛಾಪು ಕಳೆದುಕೊಂಡಿವೆ. ಏಷ್ಯಾದಲ್ಲಿ ಈ ತಂಡಗಳ ಆಧಿಪತ್ಯ ಕಡಿಮೆಯಾಗುತ್ತಾ ಬರುತ್ತಿದೆ.

ವೇತನ ಕಲಹದಿಂದ ಪಾಕ್‌ ತಂಡ ಜರ್ಜರಿತಗೊಂಡಿದೆ. ಆರು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಭತ್ಯೆ ನೀಡದಿದ್ದರೆ ಏಷ್ಯನ್‌ ಕೂಟದಿಂದ ಹಿಂದೆ ಸರಿಯುವುದಾಗಿ ಆಟಗಾರರು ಪಾಕಿಸ್ತಾನ ಹಾಕಿ ಫೆಡರೇಷನ್‌ಗೆ (ಪಿಎಚ್‌ಎಫ್‌) ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕೂಟಕ್ಕೂ ಮುನ್ನವೆ ಈ ತಂಡ ಬಹುತೇಕ ಸೋತಂತಾಗಿದೆ. ಇದರಿಂದಾಗಿ ಭಾರತದ ‘ಚಿನ್ನ’ದ ಹಾದಿ ಸುಗಮಗೊಂಡಂತಾಗಿದೆ!

‘ಏಷ್ಯನ್‌ ಕೂಟದಲ್ಲಿ ಮೊದಲ ಬಾರಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಚಿನ್ನದ ಪದಕ ಜಯಿಸುವ ನೆಚ್ಚಿನ ತಂಡಗಳೆಂಬ ಹಣೆಪಟ್ಟಿಯೊಂದಿಗೆ ಕಣಕ್ಕಿಳಿಯುತ್ತಿವೆ. ದಕ್ಷಿಣ ಕೊರಿಯಾ ಮತ್ತು ಪಾಕಿಸ್ತಾನ ಈ ಹಿಂದಿನ ಕೂಟಗಳಲ್ಲಿ ಭಾರತದ ಪ್ರಬಲ ಎದುರಾಳಿಗಳೆನಿಸಿದ್ದವು. ಈಗ ಈ ತಂಡಗಳ ಆಟದ ಗುಣಮಟ್ಟ ಸಂಪೂರ್ಣವಾಗಿ ಸೊರಗಿದೆ. ಮಲೇಷ್ಯಾ, ಹಿಂದಿನಂತೆ ಈ ಬಾರಿಯೂ ಬಲಿಷ್ಠರನ್ನು ಹಣಿದು ಅಚ್ಚರಿ ಮೂಡಿಸಬಹುದು. ಆದರೆ ಈ ತಂಡ ಭಾರತದ ಚಿನ್ನದ ಕನಸಿಗೆ ಅಡ್ಡಗೋಡೆಯಾಗಲಾರದು’ ಎಂದು ಕರ್ನಾಟಕದ ಹಿರಿಯ ಆಟಗಾರ ಎ.ಬಿ.ಸುಬ್ಬಯ್ಯ ಅಭಿಪ್ರಾಯಪಡುತ್ತಾರೆ.

ನಾವು ಏಷ್ಯನ್‌ ಕೂಟದಲ್ಲಿ 12 ಬಾರಿ ಫೈನಲ್‌ ಪ್ರವೇಶಿಸಿದ್ದೇವೆ. ಈ ಪೈಕಿ ಏಳು ಬಾರಿ ಪಾಕಿಸ್ತಾನ ಎದುರು ಸೋತಿದ್ದೇವೆ. ಅರವತ್ತು, ಎಪ್ಪತ್ತರ ದಶಕದಲ್ಲಿ ಪಾಕ್‌ ಬಲಿಷ್ಠವಾಗಿತ್ತು. ಆ ತಂಡದಲ್ಲಿ ಆಗ ಘಟಾನುಘಟಿ ಆಟಗಾರರಿದ್ದರು. ಆದರೆ ಈಗಿನ ತಂಡ ಅಷ್ಟೇನು ಶಕ್ತಿಶಾಲಿಯಾಗಿಲ್ಲ. ಹಿಂದಿನ ಟೂರ್ನಿಗಳ ಫಲಿತಾಂಶ ಇದನ್ನು ನಿರೂಪಿಸುವಂತಿದೆ.

‘ಪಾಕಿಸ್ತಾನದ ಪರಿಸ್ಥಿತಿ ನಮಗಿಂತಲೂ ಭಿನ್ನವಾಗಿದೆ. ಎಫ್‌ಐಎಚ್‌, ಆರ್ಥಿಕ ಸಂಕಷ್ಟದಿಂದ ನಲುಗಿದೆ. ವೇತನ ಕಲಹದಿಂದ ಆಟಗಾರರು ಏಷ್ಯನ್‌ ಕೂಟ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. ಗೊಂದಲದ ಗೂಡಾಗಿರುವ ಆ ತಂಡ ಸರಿಯಾದ ಪೂರ್ವಸಿದ್ಧತೆ ಮಾಡಿಕೊಳ್ಳದೆ ಕಣಕ್ಕಿಳಿಯಬೇಕಾದ ಅನಿವಾರ್ಯತೆಯಲ್ಲಿದೆ. ಹೀಗಿರುವಾಗ ಪಾಕಿಸ್ತಾನದಿಂದ ಶ್ರೇಷ್ಠ ಆಟ ನಿರೀಕ್ಷಿಸಲು ಸಾಧ್ಯವೆ?. ಕೊರಿಯಾ, ಜಪಾನ್‌ ಮತ್ತು ಚೀನಾ ತಂಡಗಳನ್ನೂ ಪ್ರಬಲ ಎದುರಾಳಿ ಗಳೆಂದು ಪರಿಗಣಿಸಲು ಆಗುವುದಿಲ್ಲ’ ಎಂದೂ ಅವರು ಹೇಳುತ್ತಾರೆ.

‘ಭಾರತ ತಂಡದವರು ಇತ್ತೀಚೆಗೆ ನಡೆದ ಪ್ರಮುಖ ಟೂರ್ನಿಗಳಲ್ಲೆಲ್ಲಾ ತುಂಬಾ ಚೆನ್ನಾಗಿ ಆಡಿದ್ದಾರೆ. ಜೊತೆಗೆ ವಿದೇಶಗಳಲ್ಲಿ ಆಯೋಜನೆಯಾಗಿದ್ದ ಪೂರ್ವಸಿದ್ಧತಾ ಪಂದ್ಯಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಿ ಆಟದ ಗುಣಮಟ್ಟ ಹೆಚ್ಚಿಸಿಕೊಂಡಿದ್ದಾರೆ. ಏಷ್ಯಾ ಹಂತದಲ್ಲಿ ನೋಡಿದರೆ ನಮ್ಮ ತಂಡ ಎಲ್ಲಾ ವಿಭಾಗಗಳಲ್ಲೂ ಶಕ್ತಿಯುತವಾಗಿದೆ. ರೂಪಿಂದರ್‌ ಪಾಲ್‌ ಸಿಂಗ್‌, ಹರ್ಮನ್‌ಪ್ರೀತ್‌ ಸಿಂಗ್‌ ಅವರು ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಇದು ಉತ್ತಮ ಬೆಳವಣಿಗೆ’ ಎಂದರು.

ಭಾರತ ತಂಡ ಈ ಹಿಂದೆ ಹಲವು ಟೂರ್ನಿಗಳಲ್ಲಿ ಅಂತಿಮ ಕ್ಷಣಗಳಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟು ನಿರಾಸೆ ಕಂಡಿತ್ತು. ಆಗೆಲ್ಲಾ ಸಾಕಷ್ಟು ಟೀಕೆಗಳನ್ನೂ ಎದುರಿಸಿತ್ತು. ಈ ಬಾರಿಯೂ ತಂಡದಿಂದ ಇಂತಹ ತಪ್ಪು ಮರುಕಳಿಸಬಹುದೆಂಬ ಆತಂಕ ಹಾಕಿ ಪ್ರಿಯರಲ್ಲಿದೆ.

‘ಯೂರೋಪಿಯನ್‌ ತಂಡಗಳು ಪಂದ್ಯದ ಕೊನೆಯಲ್ಲಿ ಎದುರಾಳಿಗಳ ಮೇಲೆ ಹೆಚ್ಚು ಒತ್ತಡ ಹೇರುವ ತಂತ್ರ ಅನುಸರಿಸುತ್ತವೆ. ಹೀಗಾಗಿ ಈ ಹಿಂದೆ ನಮ್ಮ ಆಟಗಾರರು ಹಲವು ತಪ್ಪುಗಳನ್ನು ಮಾಡಿ ಅಂತಿಮ ಕ್ವಾರ್ಟರ್‌ಗಳಲ್ಲಿ
ಗೋಲು ಬಿಟ್ಟುಕೊಟ್ಟಿರಬಹುದು. ಆದರೆ ಏಷ್ಯಾ ಹಂತದಲ್ಲಿ ನಮ್ಮವರ ಮೇಲೆ ಆ ಮಟ್ಟಿಗೆ ಒತ್ತಡ ಹೇರುವಂತಹ ತಂಡಗಳು ಇಲ್ಲ’ ಎಂದು ಸುಬ್ಬಯ್ಯ ನುಡಿಯುತ್ತಾರೆ.

ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡದ ಸಾಧನೆ

ಪ್ರಶಸ್ತಿ ವರ್ಷ; ಸ್ಥಳ

1966; ಬ್ಯಾಂಕಾಕ್‌, ಥಾಯ್ಲೆಂಡ್‌

1998; ಬ್ಯಾಂಕಾಕ್‌, ಥಾಯ್ಲೆಂಡ್

2014; ಇಂಚೆನ್‌, ದಕ್ಷಿಣ ಕೊರಿಯಾ

*


–ಭಾರತ ತಂಡದ ನಾಯಕ ಪಿ.ಆರ್‌.ಶ್ರೀಜೇಶ್‌ (ಎಡ) ಮತ್ತು ಮುಖ್ಯ ಕೋಚ್‌ ಹರೇಂದ್ರ ಸಿಂಗ್‌ ಪ್ರಜಾವಾಣಿ ಚಿತ್ರಗಳು/ಆರ್‌.ಶ್ರೀಕಂಠ ಶರ್ಮಾ

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT