ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆರುಗು ತುಂಬುವುದೇ ಪೆಂಕಾಕ್‌ ಸಿಲೆಟ್‌, ಸಾಂಬೊ?

Last Updated 12 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಕನಸು ಹೊತ್ತು ಬರುವ ಕ್ರೀಡಾಪಟುಗಳನ್ನು ಸ್ವಾಗತಿಸಲು ಇಂಡೊನೇಷ್ಯಾ ಸಿದ್ಧಗೊಂಡಿದೆ. ಈ ಕ್ರೀಡಾಕೂಟದ 18ನೇ ಆವೃತ್ತಿಗೆ ಆತಿಥ್ಯ ವಹಿಸಲು ಜಕಾರ್ತ ನಗರ ಸಜ್ಜಾಗಿದೆ. ಅನೇಕ ಹೊಸ ಕ್ರೀಡೆಗಳನ್ನು ಈ ಬಾರಿಯ ಕೂಟಕ್ಕೆ ಸೇರಿಸಲಾಗಿದೆ.ಈ ಹಿಂದೆ ಇದ್ದ ಕ್ರೀಡೆಗಳ ಪೈಕಿ ಕೆಲವನ್ನು ಕೈಬಿಡಲಾಗಿದೆ. ಇವುಗಳಲ್ಲಿ ಕ್ರಿಕೆಟ್‌, ಸರ್ಫಿಂಗ್‌, ಬೆಲ್ಟ್‌ ಕುಸ್ತಿಗಳು ಸೇರಿವೆ.

2020ರಲ್ಲಿ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್‌ ಕ್ರೀಡಾಕೂಟದಲ್ಲಿರುವ ಎಲ್ಲ ಕ್ರೀಡೆಗಳನ್ನು ಏಷ್ಯನ್‌ ಕೂಟದಲ್ಲಿ ಸೇರಿಸಲಾಗಿದೆ. ಒಟ್ಟು 58 ಕ್ರೀಡೆಗಳಲ್ಲಿ ಸ್ಪರ್ಧೆ ನಡೆಯಲಿದೆ. ಏಷ್ಯನ್‌ ಕೂಟದ 67 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ 10 ಹೊಸ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಪೈಪೋಟಿ ನಡೆಸಲಿದ್ದಾರೆ. ಇವುಗಳಿಗೆ ಕ್ರೀಡಾಪ್ರೇಮಿಗಳು ಹಾಗೂ ಕ್ರೀಡಾಪಟುಗಳುಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇವುಗಳ ಕುರಿತ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ.

1) 3x3 ಬ್ಯಾಸ್ಕೆಟ್‌ಬಾಲ್‌

3x3 ಬ್ಯಾಸ್ಕೆಟ್‌ಬಾಲ್‌ ಆಡುವ ತಂಡವೊಂದರಲ್ಲಿ ನಾಲ್ಕು ಆಟಗಾರರಷ್ಟೇ ಇರುತ್ತಾರೆ. ಪಂದ್ಯದಲ್ಲಿ ಮೂವರು ಮಾತ್ರ ಅಂಗಳಕ್ಕಿಳಿಯುತ್ತಾರೆ. ಇನ್ನೊಬ್ಬ ಬದಲಿ ಆಟಗಾರನಾಗಿರುತ್ತಾನೆ. ಬ್ಯಾಸ್ಕೆಟ್‌ಬಾಲ್‌ ಅಂಗಳದ ಒಟ್ಟು ವಿಸ್ತೀರ್ಣದ ಅರ್ಧ ಭಾಗದಲ್ಲಿ ಪಂದ್ಯ ಆಡಿಸಲಾಗುತ್ತದೆ. ಒಂದೇ ಬ್ಯಾಸ್ಕೆಟ್‌ನಲ್ಲಿ ಎರಡೂ ತಂಡಗಳ ಆಟಗಾರರು ಚೆಂಡನ್ನು ಗುರಿ ಸೇರಿಸಬೇಕಾಗುತ್ತದೆ. ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ನ ನಿಯಮಾವಳಿಗಳ ಪ್ರಕಾರವೇ ಪಂದ್ಯ ನಡೆಯುತ್ತದೆ.

2) ಬ್ರಿಡ್ಜ್‌

ಬ್ರಿಡ್ಜ್‌ ಕಾಂಟ್ರಾಕ್ಟ್‌ ಅಥವಾ ಬ್ರಿಡ್ಜ್‌ ಎಂಬ ಹೆಸರಿನ ಈ ಕಾರ್ಡ್‌ ಗೇಮ್‌ ಎರಡು ತಂಡಗಳ ಮಧ್ಯೆ ನಡೆಯುತ್ತದೆ. ಪ್ರತಿ ತಂಡದಲ್ಲಿ ಇಬ್ಬರು ಆಟಗಾರಿರುತ್ತಾರೆ.ಒಟ್ಟು 52 ಕಾರ್ಡ್‌ಗಳನ್ನು ಬಳಸಲಾಗುತ್ತದೆ. ಪ್ರತಿಯೊಬ್ಬರಿಗೂ 13 ಕಾರ್ಡ್‌ಗಳನ್ನು ನೀಡಲಾಗುತ್ತದೆ. ಬೌದ್ಧಿಕ ಚುರುಕುತನದಲ್ಲಿ ಮೇಲುಗೈ ಸಾಧಿಸುವವರು ಮಾತ್ರ ಇಲ್ಲಿ ಜಯಿಸುತ್ತಾರೆ. ವಿಶ್ವ ಬ್ರಿಡ್ಜ್‌ ಫೆಡರೇಷನ್‌ ರೂಪಿಸಿರುವ ನಿಯಮಗಳ ಅನುಸಾರ ಇದನ್ನು ಆಯೋಜಿಸಲಾಗುತ್ತದೆ.

3) ಜೆಟ್‌ ಸ್ಕೀಯಿಂಗ್‌

ಪರ್ಸನಲ್‌ ವಾಟರ್‌ ಕ್ರಾಫ್ಟ್‌ ಕ್ರೀಡೆಯ ಮತ್ತೊಂದು ಹೆಸರು ಜೆಟ್ ಸ್ಕೀಯಿಂಗ್‌. ಮನರಂಜನೆಗಾಗಿ ಆಡುವ ಈ ಆಟವನ್ನು ಮೊದಲ ಬಾರಿಗೆ ಏಷ್ಯನ್‌ ಗೇಮ್ಸ್‌ನಲ್ಲಿ ಪರಿಚಯಿಸಲಾಗುತ್ತಿದೆ.ಒಂದರಿಂದ ಮೂವರು ಸ್ಪರ್ಧಿಗಳು ಬೈಸಿಕಲ್‌ ಅಥವಾ ಮೊಟರ್‌ಸೈಕಲ್‌ ಮಾದರಿಯಲ್ಲಿ ಕುಳಿತು ಸಮುದ್ರದ ಅಲೆಗಳ ಮಧ್ಯೆ ಜೆಟ್‌ ಅನ್ನು ಚಲಾಯಿಸುತ್ತಾರೆ.ಈ ಸ್ಪರ್ಧೆಯು ಆ್ಯಂಕಲ್‌ ಬೀಚ್‌ನಲ್ಲಿ ಆಗಸ್ಟ್‌ 23–26ರವರೆಗೆ ನಡೆಯಲಿದೆ.

4) ಪ್ಯಾರಾ ಗ್ಲೈಡಿಂಗ್‌

ಮನರಂಜನೆಗಾಗಿ ಆಡುವ ಈ ಸಾಹಸ ಕ್ರೀಡೆಯು ಈ ಬಾರಿಯ ಕ್ರೀಡಾಕೂಟಕ್ಕೆ ಮೆರುಗು ತುಂಬುವ ನಿರೀಕ್ಷೆ ಇದೆ.ಇದರಲ್ಲಿ ಕ್ರಾಸ್‌ ಕಂಟ್ರಿ, ಏರೋಬೆಟಿಕ್ಸ್‌, ಅಲ್ಟ್ರಾ ಫ್ಲೈ ಎಂಬ ವಿಭಾಗಗಳಿವೆ. ಆದರೆ, ಕ್ರೀಡಾಕೂಟದಲ್ಲಿ ಕ್ರಾಸ್ ಕಂಟ್ರಿ ಹಾಗೂ ಏರೋಬೆಟಿಕ್ಸ್‌ ವಿಭಾಗಗಳಲ್ಲಿ ಮಾತ್ರ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಆಕಾಶದಲ್ಲಿ ಹಾರಾಡುವಾಗ ಪ್ಯಾರಚೂಟ್‌ ಮೇಲೆ ಯಾವ ರೀತಿ ನಿಯಂತ್ರಣ ಸಾಧಿಸಲಾಗುತ್ತದೆ ಎಂಬುದರ ಮೇಲೆ ಪಾಯಿಂಟ್ಸ್‌ಗಳನ್ನು ನಿರ್ಧರಿಸಲಾಗುತ್ತದೆ.

5) ಪೆಂಕಾಕ್‌ ಸಿಲೆಟ್‌

ಇದು ಇಂಡೊನೇಷ್ಯಾದ ಸಾಂಪ್ರದಾಯಿಕ ಸಮರ ಕಲೆ. ಕ್ರೀಡಾಕೂಟದಲ್ಲಿ ಮೂರು ಹೊಸ ಕ್ರೀಡೆಗಳನ್ನು ಸೇರಿಸುವ ಅವಕಾಶ ಆತಿಥ್ಯ ವಹಿಸುವ ರಾಷ್ಟ್ರಕ್ಕಿರುತ್ತದೆ. ಹೀಗಾಗಿ ಈ ಕ್ರೀಡೆಯನ್ನು ಇಂಡೊನೇಷ್ಯಾ ಆಯ್ಕೆ ಮಾಡಿಕೊಂಡಿದೆ.

ಆಗ್ನೇಯ ಏಷ್ಯಾ ಭಾಗಗಳಲ್ಲಿ ಈ ಕ್ರೀಡೆಗೆ ಸಾಂಸ್ಕೃತಿಕ ಮಹತ್ವವಿದೆ. ಬ್ರುನೈ ಹಾಗೂ ವಿಯೆಟ್ನಾಂ ರಾಷ್ಟ್ರಗಳಲ್ಲೂ ಇದು ಸಾಕಷ್ಟು ಜನಪ್ರಿಯ.

6) ಜು ಜಿಟ್ಸು

ಜೂಡೊ ರೀತಿ ಕಾಣುವ ಈ ಕ್ರೀಡೆಯು ಸಮರಕಲೆಯ ಒಂದು ವಿಧ. ಇದರಲ್ಲಿ ದೈಹಿಕ ಸಾಮರ್ಥ್ಯದ ಜೊತೆ ತಂತ್ರಗಾರಿಕೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಈ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಇಬ್ಬರು ಸ್ಪರ್ಧಿಗಳು ಪಂಚ್‌ ಅಥವಾ ಕಿಕ್‌ ಮಾಡುವ ಹಾಗಿಲ್ಲ. ಆದರೆ, ಸ್ಲ್ಯಾಷಿಂಗ್‌ ಮತ್ತು ಡ್ರಾಪಿಂಗ್‌ (ಪಟ್ಟುಗಳು) ಮೂಲಕ ಪಾಯಿಂಟ್ಸ್‌ ಸಂಗ್ರಹಿಸಬಹುದು. ಕುಸ್ತಿಯಂತೆ ಚಿತ್ ಮಾಡುವವರು ಈ ಕ್ರೀಡೆಯ ಪಂದ್ಯಗಳಲ್ಲಿ ವಿಜೇತರಾಗುತ್ತಾರೆ.

7) ಸಾಂಬೊ

ಸಾಂಬೊ, ರಷ್ಯಾದ ಸಾಂಪ್ರದಾಯಿಕ ಸಮರ ಕಲೆ. ಸಮೊಜಾಶಾಚಿತಾ ಬೆಜ್‌ ಒರುಜಿಯಾ ಎಂಬ ಹೆಸರಿನಿಂದ ಈ ಕ್ರೀಡೆಗೆ ಸಾಂಬೊ ಎಂದು ನಾಮಕರಣ ಮಾಡಲಾಗಿದೆ. ‘ಶಸ್ತ್ರಾಸ್ತ್ರಗಳಿಲ್ಲದೇ ಸ್ವಯಂ ರಕ್ಷಣೆ’ ಎಂಬುದು ಇದರ ಅರ್ಥ. 1920ರ ದಶಕದಲ್ಲಿ ರಷ್ಯಾ ಸೈನಿಕರು ಶಸ್ತ್ರಗಳಿಲ್ಲದ ವೇಳೆ ಸ್ವಯಂ ರಕ್ಷಣೆಗಾಗಿ ವಿಭಿನ್ನ ಸಮರ ಕಲೆಗಳ ಮೊರೆ ಹೋದರು. ಕುಸ್ತಿ, ಜೂಡೊ, ಜುಜಿಟ್ಸು, ಬಾಕ್ಸಿಂಗ್‌, ಸವಾಟೆಯಂತಸಮರ ಕಲೆಗಳ ಮಿಶ್ರಣವನ್ನೇ ಸಾಂಬೊ ಎಂದು ಕರೆಯಲಾಗುತ್ತದೆ.‌

8) ಕುರಾಶ್‌

ಇದು ಉಜ್ಬೇಕಿಸ್ತಾನದ ಸಮರ ಕಲೆ. ಸುಮಾರು 3,500ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಕುರಾಶ್‌, ಜಗತ್ತಿನ ಪುರಾತನ ಸಮರಕಲೆಗಳಲ್ಲಿ ಒಂದು. ಜೂಡೊ ಹಾಗೂ ಕುಸ್ತಿಯ ಅನೇಕ ಅಂಶಗಳು ಇದರಲ್ಲಿ ಪ್ರತಿಫಲನವಾಗುತ್ತವೆ. ವಿಶೇಷ ಧಿರಿಸು ಧರಿಸುವ ಸ್ಪರ್ಧಿಗಳು ಪಟ್ಟುಗಳ ಮೂಲಕ ಮೇಲುಗೈ ಸಾಧಿಸುತ್ತಾರೆ.

9) ರಾಕ್‌ ಕ್ಲೈಂಬಿಂಗ್‌

ಆತಿಥ್ಯ ರಾಷ್ಟ್ರ ಇಂಡೊನೇಷ್ಯಾದ ಮನವಿ ಮೇರೆಗೆ ಈ ಸಾಹಸ ಕ್ರೀಡೆಯನ್ನು ಈ ಬಾರಿಯ ಕ್ರೀಡಾಕೂಟದಲ್ಲಿ ಸೇರಿಸಲಾಗಿದೆ. ರಾಕ್‌ ಕ್ಲೈಂಬಿಂಗ್‌ನಲ್ಲಿ ಆತಿಥೇಯರು ಎರಡು ಪದಕಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಹಗ್ಗದ ನೆರವಿನಿಂದ ಬೆಟ್ಟ ಹತ್ತುವ ಈ ಕ್ರೀಡೆ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ ಎಂಬ ನಿರೀಕ್ಷೆಯೂ ಆಯೋಜಕರಿಗಿದೆ.

10) ರೋಲರ್‌ ಸ್ಪೋರ್ಟ್‌

ಬಾಲ್‌ ಬೇರಿಂಗ್ಸ್‌ ಹಾಗೂ ಪಾಲಿಯುರೇತನ್‌ ಚಕ್ರಗಳಿಂದ ತಯಾರಾದ ವೀಲರ್‌ಗಳನ್ನು ಈ ಕ್ರೀಡೆಯಲ್ಲಿ ಬಳಸಲಾಗುತ್ತದೆ. ಸ್ಕೇಟ್‌ ಬೋರ್ಡಿಂಗ್‌ ಹಾಗೂ ರೋಲರ್‌ಬ್ಲೆಡಿಂಗ್‌ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಅಂತರರಾಷ್ಟ್ರೀಯ ರೋಲರ್‌ ಸ್ಪೋರ್ಟ್ಸ್‌ ಫೆಡರೇಷನ್‌ ಇದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT