ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾರಿತ್ರಿಕ ಚಿನ್ನದ ಮೇಲೆ ಭಾರತ ವನಿತೆಯರ ಕಣ್ಣು

ಏಷ್ಯಾ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಮಿಂಚಿದ ತ್ರಿಸಾ–ಗಾಯತ್ರಿ
Published 17 ಫೆಬ್ರುವರಿ 2024, 12:50 IST
Last Updated 17 ಫೆಬ್ರುವರಿ 2024, 12:50 IST
ಅಕ್ಷರ ಗಾತ್ರ

ಶಾ ಆಲಂ, ಮಲೇಷ್ಯಾ (ಪಿಟಿಐ): ಭಾರತ ಮಹಿಳಾ ಬ್ಯಾಡ್ಮಿಂಟನ್ ತಂಡವು ಏಷ್ಯಾ ಟೀಮ್ ಚಾಂಪಿಯನ್‌ಷಿಪ್‌ ಫೈನಲ್ ಪ್ರವೇಶಿಸಿತು. ಇದೇ ಮೊದಲ ಬಾರಿಗೆ ಭಾರತ ತಂಡವು ಈ ಚಾರಿತ್ರಿಕ ಸಾಧನೆ ಮಾಡಿತು. 

ಶನಿವಾರ ನಡೆದ ರೋಚಕ ಸೆಮಿಫೈನಲ್‌ನಲ್ಲಿ ಭಾರತ ತಂಡವು 3–2ರಿಂದ  ಎರಡು ಬಾರಿಯ ಚಾಂಪಿಯನ್ ಜಪಾನ್ ಎದುರು ಜಯಭೇರಿ ಬಾರಿಸಿತು.

2016 ಮತ್ತು 2020ರಲ್ಲಿ ಭಾರತ ಪುರುಷರ ತಂಡಗಳು ಕಂಚಿನ ಪದಕಗಳನ್ನು ಜಯಿಸಿದ್ದವು. ಇದೀಗ ಮೊಟ್ಟಮೊದಲ ಬಾರಿ ಚಿನ್ನ ಜಯಿಸುವ ಅವಕಾಶ ಒದಗಿಬಂದಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 23ನೇ ಸ್ಥಾನದಲ್ಲಿರುವ ಭಾರತದ ಜೋಡಿ ತ್ರಿಸಾ ಜೊಲಿ ಮತ್ತು ಗಾಯತ್ರಿ ಗೋಪಿಚಂದ್,  53ನೇ ರ‍್ಯಾಂಕಿಂಗ್‌ ಜೋಡಿ ಅಷ್ಮಿತಾ ಚಲಿಹಾ ಮತ್ತು 17 ವರ್ಷದ ಅನ್ಮೋಲ್ ಖರ್ಬ್ ಅವರು ಮೊದಲ ಹಾಗೂ ಎರಡನೇ ಡಬಲ್ಸ್‌ಗಳಲ್ಲಿ ಜಯಿಸಿದರು. ಇದರಿಂದಾಗಿ ತಂಡದ ಫೈನಲ್ ಹಾದಿ ಸುಗಮವಾಯಿತು.

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡವು ಥಾಯ್ಲೆಂಡ್ ಬಳಗವನ್ನು ಎದುರಿಸಲಿದೆ.

ಜಪಾನ್ ತಂಡದಲ್ಲಿ ಒಲಿಂಪಿಯನ್ ಅಕಾನೆ ಯಮಗುಚಿ ಇರಲಿಲ್ಲ. ಆದರೂ ತಂಡವು   ಪ್ರಬಲ ಪೈಪೋಟಿಯಡ್ಡಿತು.

ಮೊದಲ ಡಬಲ್ಸ್‌ನಲ್ಲಿ ತ್ರಿಸಾ –ಗಾಯತ್ರಿ 21–17, 16–21, 22–20ರಿಂದ ನಮಿ ಮತ್ಸುಯಾಮಾ–ಚಿಹಾರು ಶಿಡಾ ವಿರುದ್ಧ  73 ನಿಮಿಷಗಳ ಪೈಪೋಟಿಯಲ್ಲಿ ಜಯಿಸಿದರು.

ಆದರೆ ಸಿಂಗಲ್ಸ್‌ನಲ್ಲಿ ಒಲಿಂಪಿಯನ್ ಪಿ.ವಿ. ಸಿಂಧು 13–21, 20–22 ರಿಂದ ಎಡಗೈ ಆಟಗಾರ್ತಿ ಅಯಾ ಒಹೊರಿ ವಿರುದ್ಧ ಮಣಿದರು. ಇದರಿಂದಾಗಿ 1–1ರ ಸಮಬಲವಾಯಿತು.

ಇನ್ನೊಂದು ಸಿಂಗಲ್ಸ್‌ನಲ್ಲಿ ಎಡಗೈ ಆಟಗಾರ್ತಿ ಅಶ್ಮಿತಾ  21-17, 21-14ರಿಂದ  ಮಾಜಿ ವಿಶ್ವ ಚಾಂಪಿಯನ್ ನೊಜೊಮಿ ಒಕುಹರಾ ವಿರುದ್ಧ ಮೇಲುಗೈ ಸಾಧಿಸಿದರು. ಆಕರ್ಷಕ ಕ್ರಾಸ್ ಡ್ರಾಪ್, ಜಂಪ್ ಸ್ಮ್ಯಾಷ್‌ಗಳ ಮೂಲಕ  ಎದುರಾಳಿಗೆ ಆಘಾತ ನೀಡಿದರು. 

ಇನ್ನೊಂದು ಡಬಲ್ಸ್‌ನಲ್ಲಿ  ತನಿಷಾ ಕ್ರಸ್ಟೊ ಗಾಯಗೊಂಡ ಕಾರಣ ಅಶ್ವಿನಿ ಪೊನ್ನಪ್ಪ ಅವರೊಂದಿಗೆ ಕಣಕ್ಕಿಳಿದ ಪಿ.ವಿ.ಸಿಂಧು 14–21, 11–21 ರಿಂದ ರೆನಾ ಮಿಯಾರಾ ಮತ್ತು ಅಯಾಕೊ ಸಕುರಾಮೊಟೊ ವಿರುದ್ಧ ಸೋತರು. 43 ನಿಮಿಷಗಳ ಹಣಾಹಣಿಯಲ್ಲಿ ಭಾರತದ ಅನುಭವಿ ಆಟಗಾರ್ತಿಯರು ಮಣಿದರು.  ಇದರಿಂದಾಗಿ 2–2ರ ಸಮಬಲವಾಯಿತು.

ಇನ್ನೊಂದು ಪಂದ್ಯದಲ್ಲಿ ಯುವ ಆಟಗಾರ್ತಿ ಅನ್ಮೋಲ್ 21–14, 21–18ರಿಂದ 29ನೇ ರ‍್ಯಾಂಕಿನ ಆಟಗಾರ್ತಿ ನತ್ಸುಕಿ ನಿದೈರಾ ವಿರುದ್ಧ ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT