ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ವಿಶ್ವಾಸದಲ್ಲಿ ‘ದಿ ಇನ್ವೇಡರ್‌’

ಇಂದು ಉದ್ಯಾನನಗರಿಯಲ್ಲಿ ಕ್ಯಾಟಲಿಸ್ಟ್‌ ಪ್ರಾಪರ್ಟೀಸ್‌ ಬೆಂಗಳೂರು ಡರ್ಬಿ
Last Updated 25 ಜನವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ವರ್ಣರಂಜಿತ ಬೆಂಗಳೂರು ಡರ್ಬಿ ಶನಿವಾರ ಸಂಜೆ 4.30ಕ್ಕೆ ಬೆಂಗಳೂರು ಟರ್ಫ್‌ ಕ್ಲಬ್‌ ಲಿಮಿಟೆಡ್‌ ಆವರಣದಲ್ಲಿ ನಡೆಯಲಿದೆ. ಕ್ಯಾಟಲಿಸ್ಟ್‌ ಪ್ರಾಪರ್ಟೀಸ್‌ ಮತ್ತು ಬಿ.ಟಿ.ಸಿ ಜಂಟಿ ಪ್ರಾಯೋಜಕತ್ವದಲ್ಲಿ ಏರ್ಪಡಿಸಿರುವ ಈ ಪ್ರತಿಷ್ಠಿತ ಡರ್ಬಿಯಲ್ಲಿ ಒಂಬತ್ತು ಗಂಡು ಮತ್ತು ನಾಲ್ಕು ಹೆಣ್ಣು ಕುದುರೆಗಳು ಸೇರಿದಂತೆ ಒಟ್ಟು 13 ಕುದುರೆಗಳು ಭಾಗವಹಿಸುತ್ತಿವೆ.

ಡರ್ಬಿಯ ಒಟ್ಟು ಬಹುಮಾನದ ಮೊತ್ತ ಸುಮಾರು ₹ 1.52 ಕೋಟಿಗಿಂತಲೂ ಹೆಚ್ಚಿನದಾಗಿದ್ದು, ಗೆಲ್ಲುವ ಕುದುರೆಯು ಸುಮಾರು ₹ 1.25 ಲಕ್ಷ ಮೌಲ್ಯದ ಸುಂದರ ಟ್ರೋಫಿಯೊಂದಿಗೆ ಮೊದಲನೇ ಬಹುಮಾನ ಸುಮಾರು ₹ 74.79 ಲಕ್ಷಗಳನ್ನು ತನ್ನ ಮಾಲೀಕರಿಗೆ ಕೊಡಿಸಲಿದೆ.

ಪೆಸಿ ಶ್ರಾಫ್‌ ಅವರಿಂದ ತರಬೇತಿ ಪಡೆಯುತ್ತಿರುವ ‘ಈಗಲ್‌ ಇನ್‌ ದಿ ಸ್ಕೈ’ ಮತ್ತು ‘ಕೆನಡಿ‘ ಮುಂಬೈನಿಂದ ಬಂದಿರುವ ಸ್ಫರ್ಧಿಗಳಾಗಿದ್ದು, ಉಳಿದ 12 ಸ್ಪರ್ಧಿಗಳು ಸ್ಥಳೀಯ ಕುದುರೆಗಳು. ಮಂಜರಿ ಸ್ಟಡ್‌ ಬೆಂಗಳೂರು 2000 ಗಿನ್ನೀಸ್‌ ನಲ್ಲಿ ಮೊದಲ ಎರಡು ಸ್ಥಾನ ಗಳಿಸಿರುವ ‘ದಿ ಇನ್ವೇಡರ್‌’ ಮತ್ತು ‘ಮಿಸ್ಟರ್ ಹ್ಯಾಂಡ್ಸಮ್‌’ ಈ ಡರ್ಬಿ ಗೆಲ್ಲುವ ಪ್ರಮುಖ ಸ್ಪರ್ಧಿಗಳಾಗಿ ಕಂಡು ಬರುತ್ತಿವೆ. ಇದೇ ರೇಸ್‌ನಲ್ಲಿ ಫೇವರಿಟ್‌ ಆಗಿದ್ದ ‘ನಾಟಿ ಆ್ಯಶ್‌‘ ನಿರಾಶದಾಯಕ ಪ್ರದರ್ಶನ ನೀಡಿತ್ತು. ಆದರೆ, ಇತ್ತೀಚಿನ ಮಾಕ್‌ ರೇಸ್‌ನಲ್ಲಿ ‘ದಿ ಇನ್ವೇಡರ್‌’ ಜೊತೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ತನ್ನನ್ನು ಕಡೆಗಣಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ.

ಮಂಜರಿ ಸ್ಟಡ್‌ ಬೆಂಗಳೂರು 2000 ಗಿನ್ನೀಸ್‌ ಒಂದು ಮೈಲ್‌ ದೂರದ ರೇಸ್‌ನಲ್ಲಿ ‘ದಿ ಇನ್ವೇಡರ್‌’ ಗೆಲುವು ಆಕಸ್ಮಿಕವಾಗಿದ್ದರೂ, ಎಲ್ಲರನ್ನು ದಿಗ್ಭ್ರಮೆಗೊಳಿಸುವ ರೀತಿಯಲ್ಲಿ ಗೆದ್ದಿದೆ. ಈ ರೇಸ್‌ನಲ್ಲಿ ಎರಡನೇ ಫೇವರಿಟ್‌ ಆಗಿದ್ದ ‘ಮಿ.ಹ್ಯಾಂಡ್ಸಮ್‌’ ಗೆಲ್ಲುವ ಭರವಸೆ ಹೊಂದಿತ್ತಾದರೂ, ಕೊನೆಗೆ ಎರಡನೇ ಸ್ಥಾನ ಪಡೆಯುವಲ್ಲಿ ಸಫಲವಾಗಿತ್ತು ಮತ್ತು ಇಂದು ಸೇಡು ತೀರಿಸುವ ತವಕದಲ್ಲಿದೆ. ಆದರೆ, ‘ದಿ ಇನ್ವೇಡರ್‌’ ಅಂದು ಗೆದ್ದಿದ್ದು 4 ಲೆಂಗ್ತ್‌ಗಳ ಅಂತರದಲ್ಲಿ ಮತ್ತು ನಂತರದ ಮಾಕ್ ರೇಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಅಲ್ಲದೆ 2000 ಗಿನ್ನೀಸ್‌ ಗೆಲುವು ಆಕಸ್ಮಿಕವಲ್ಲ ಎಂದು ಸಾಬೀತುಪಡಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದೆ.

ಈ ಆಧಾರದ ಮೇಲೆ, 2400 ಮೀಟರ್ಸ್‌ ದೂರದ ಡರ್ಬಿ ರೇಸ್‌ನಲ್ಲಿ ಟ್ರೆವರ್‌ ಪಟೇಲ್‌ ಸವಾರಿಯಲ್ಲಿರುವ ಟೋಟಲ್‌ ಗ್ಯಾಲರಿ–ಡೆಜೋಲಿ ಸಂತತಿಯ ಜಿ.ನಿತ್ಯಾನಂದ ತರಬೇತಿನ ಈ ಕುದುರೆಯು ಮತ್ತೊಮ್ಮೆ ‘ಮಿಸ್ಟರ್‌ ಹ್ಯಾಂಡ್ಸಮ್‌’ ಮತ್ತು ‘ನಾಟಿ ಆ್ಯಶ್‌’ ವಿರುದ್ಧ ಗೆದ್ದು, ಡರ್ಬಿಯನ್ನು ತನ್ನದಾಗಿಸಿಕೊಳ್ಳುವ ನಿರೀಕ್ಷೆಯಿದೆ.

ಓಕ್ಸ್‌ನಲ್ಲಿ ‘ಮಿಯಾ ಕಲ್ಪ’ ತುಸು ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದರೂ, ಈ ಮೂರು ಕುದುರೆಗಳ ವಿರುದ್ಧ ಗೆಲುವು ಪಡೆಯುವ ಸಾಮರ್ಥ್ಯ ಕಂಡು ಬರುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT