ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ವಿಶ್ವಾಮಿತ್ರ

Last Updated 30 ಆಗಸ್ಟ್ 2021, 13:25 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಯೂತ್ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ವಿಶ್ವಾಮಿತ್ರ ಚೋಂಗಥಮ್‌ ಅವರು ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಪಾರಮ್ಯ ಮುಂದುವರಿಯಿತು.

ವಿಶ್ವಾಮಿತ್ರ ಅವರು ತೀವ್ರ ಪೈಪೋಟಿ ನಡೆದ 51 ಕೆಜಿ ವಿಭಾಗದ ಫೈನಲ್ ಹಣಾಹಣಿಯಲ್ಲಿ 4–1ರಿಂದ ಉಜ್ಬೆಕಿಸ್ತಾನದ ಕುಜಿಬೊಯ್‌ ಅಹಮದ್‌ಜೊನ್‌ ಅವರನ್ನು ಮಣಿಸಿದರು.

ವಿಶ್ವನಾಥ್ ಸುರೇಶ್‌ (48 ಕೆಜಿ) ಬೆಳ್ಳಿ ಪದಕ ಗಳಿಸಿದರು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅವರು 0–5ರಿಂದ ಹಾಲಿ ಯೂತ್ ವಿಶ್ವ ಚಾಂಪಿಯನ್‌, ಕಜಕಸ್ತಾನದ ಸಂಜಾರ್‌ ತಷ್ಕೆನ್‌ಬಾಯ್‌ ಎದುರು ಎಡವಿದರು.

ಇದಕ್ಕೂ ಮೊದಲು ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಮಹಿಳೆಯರು ಅರ್ಧ ಡಜನ್ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ಒಟ್ಟಾರೆ ಎಂಟು ಚಿನ್ನ, ಐದು ಬೆಳ್ಳಿ ಮತ್ತು ಆರು ಕಂಚಿನ ಪದಕಗಳು ದೇಶದ ಪಾಲಾದವು.

ಫೈನಲ್‌ ತಲುಪಿದ್ದ 10 ಮಂದಿ ಮಹಿಳೆಯರ ಪೈಕಿ ಆರು ಮಂದಿ ಚಿನ್ನ ಗೆದ್ದರೆ, ಇನ್ನುಳಿದ ನಾಲ್ವರು ಬೆಳ್ಳಿ ಪದಕಗಳನ್ನು ಗಳಿಸಿದರು. ಪುರುಷರ ವಿಭಾಗದಲ್ಲಿ ಮೂರು ಮಂದಿ ಫೈನಲ್‌ ತಲುಪಿದ್ದರು. ಅದರಲ್ಲಿ ಇಬ್ಬರು ಚಿನ್ನ ಮತ್ತು ಒಬ್ಬರು ಬೆಳ್ಳಿ ಪದಕ ಗೆದ್ದುಕೊಂಡರು.

ಭಾನುವಾರ ತಡರಾತ್ರಿ ನಡೆದ ಜೂನಿಯರ್ ವಿಭಾಗದ ಫೈನಲ್ ಬೌಟ್‌ಗಳಲ್ಲಿ ನಿಖಿತಾ ಚಾಂದ್‌ (60 ಕೆಜಿ), ಪ್ರಾಂಜಲ್ ಯಾದವ್‌ (75 ಕೆಜಿ), ಮಾಹಿ ರಾಘವ್‌ (63 ಕೆಜಿ) ಮತ್ತು ಕೀರ್ತಿ (+81 ಕೆಜಿ) ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಇವರೆಲ್ಲರೂ ಫೈನಲ್‌ಗಳಲ್ಲಿ ಕಜಕಸ್ತಾನದ ಎದುರಾಳಿಗಳನ್ನು ಮಣಿಸಿದರು.

ಕೀರ್ತಿ 4-1ರಿಂದ ಶುಗಿಲಾ ರೈಸ್‌ಬೆಕ್ ಎದುರು, ಮಾಹಿ 3–2ರಿಂದ ಅಲ್ಗೆರಿಮ್‌ ಕಬ್‌ಡೋಲ್ಡಾ ವಿರುದ್ಧ, ನಿಖಿತಾ 4–1ರಿಂದ ಅಸ್ಸೆಮ್‌ ತಾನತರ್‌ ಎದುರು, ಪ್ರಾಂಜಲ್‌ 4–1ರಿಂದ ಅಕ್‌ಜಾನ್ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT