ಬುಡಾಪೆಸ್ಟ್: ವಿಶ್ವದ ನಾಲ್ಕನೇ ನಂಬರ್ ಆಟಗಾರ ಅರ್ಜುನ್ ಇರಿಗೇಶಿ ಚೆಸ್ ಒಲಿಂಪಿಯಾಡ್‌ನಲ್ಲಿ ಸತತ ಆರನೇ ಗೆಲುವನ್ನು ಪಡೆದರು. 45ನೇ ಚೆಸ್ ಒಲಿಂಪಿಯಾಡ್‌ನ ಓಪನ್ ವಿಭಾಗದಲ್ಲಿ ಭಾರತ ಸೋಮವಾರ ಆರನೇ ಸುತ್ತಿನಲ್ಲಿ 3–1 ಅಂತರದಿಂದ ಹಂಗರಿ ತಂಡವನ್ನು ಸೋಲಿಸಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಮಹಿಳಾ ವಿಭಾಗದಲ್ಲಿ ಭಾರತ, ಅರ್ಮೇನಿಯಾ ತಂಡವನ್ನು ಮಣಿಸಿತು.
ಆದರೆ ಆರನೇ ಸುತ್ತಿನಲ್ಲಿ ಭಾರತದ ಆಟಗಾರರು ಗೆಲುವಿಗೆ ಹೆಚ್ಚು ಶ್ರಮ ಹಾಕಬೇಕಾಯಿತು. ರಷ್ಯಾದಿಂದ ಈ ವರ್ಷವಷ್ಟೇ ಹಂಗರಿಯಲ್ಲಿ ನೆಲೆಕಂಡಿರುವ ಸುಗಿರೋವ್ ಸನನ್ ಅವರನ್ನು ಅರ್ಜುನ್ ಆರನೇ ಸುತ್ತಿನಲ್ಲಿ ಸೋಲಿಸಿದರು.
ಕಪ್ಪು ಕಾಯಿಗಳಲ್ಲಿ ಆಡಿದ ಗುಕೇಶ್, ಮೊದಲ ಬೋರ್ಡ್‌ನಲ್ಲಿ ಹಂಗರಿಯ ಅಗ್ರ ಆಟಗಾರ ರಿಚರ್ಡ್ ರ‍್ಯಾಪೋರ್ಟ್ ಅವರ ಜೊತೆ ಸುಲಭವಾಗಿ ಡ್ರಾ ಮಾಡಿಕೊಂಡರು. ಪ್ರಜ್ಞಾನಂದ ಅವರೂ ಮಾಜಿ ದಿಗ್ಗಜ ಪೀಟರ್ ಲೆಕೊ ಜೊತೆ ‘ಡ್ರಾ’ ಕರಾರಿಗೆ ಸಹಿಹಾಕಿದರು. ಕೊನೆಯ ಬೋರ್ಡ್‌ನಲ್ಲಿ ವಿದಿತ್ ಗುಜರಾತಿ, ಬೆಂಜಮಿನ್ ಗ್ಲೆಡುರಾ ವಿರುದ್ಧ ಜಯಗಳಿಸಿದರು.
ಸ್ಫೂರ್ತಿಯುತ ಪ್ರದರ್ಶನ ನೀಡಿದ ವಿಯೆಟ್ನಾಮ್ 2–2 ರಿಂದ ಚೀನಾ ತಂಡವನ್ನು ‘ಡ್ರಾ’ಕ್ಕೆ ಒಳಪಡಿಸಿದ ಪರಿಣಾಮ, ಭಾರತ ಈಗ ಏಕಾಂಗಿಯಾಗಿ ಅಗ್ರಸ್ಥಾನಕ್ಕೇರಿದೆ.
ಮಂಗಳವಾರ ವಿರಾಮದ ದಿನ. ಭಾರತ ಬುಧವಾರ ನಡೆಯುವ ಎಂಟನೇ ಸುತ್ತಿನಲ್ಲಿ ಚೀನಾ ವಿರುದ್ಧ ಆಡಲಿದೆ.
ಮಹಿಳಾ ವಿಭಾಗದಲ್ಲಿ ದಿವ್ಯಾ ದೇಶಮುಖ್ ಅವರು, ಎಲೆನಾ ಡೆನೀಲಿಯನ್ ವಿರುದ್ಧ ಅನಿವಾರ್ಯವಾಗಿದ್ದ ಜಯ ಸಾಧಿಸಿದ್ದರಿಂದ ಭಾರತ ಆರನೇ ಸುತ್ತಿನಲ್ಲಿ ಅರ್ಮೇನಿಯಾ ತಂಡವನ್ನು 2.5–1.5 ರಿಂದ ಮಣಿಸಿತು. ಭಾರತ ತಂಡ ಈ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಡೆದಿದೆ.
ಹಾರಿಕಾ ಮೊದಲ ಬೋರ್ಡ್‌ನಲ್ಲಿ ಲಿಲಿಟ್ ಕ್ರಟ್ಚಿಯಾನ್ ಜೊತೆ ಸುರಕ್ಷಿತವಾಗಿ ‘ಡ್ರಾ’ ಮಾಡಿಕೊಂಡರೆ, ವೈಶಾಲಿ ಅವರೂ ಮರಿಯಮ್ ಕ್ರಿಟ್ಚಿಯಾನ್ ಜೊತೆ ‘ಡ್ರಾ’ ಒಪ್ಪಿಕೊಂಡರು. ದಿವ್ಯಾ ತಮ್ಮ ಪಂದ್ಯ ಗೆದ್ದ ಕಾರಣ ಭಾರತ 2–1 ಮುನ್ನಡೆ ಪಡೆಯಿತು. ಹೀಗಾಗಿ ನಾಲ್ಕನೇ ಬೋರ್ಡ್‌ನಲ್ಲಿ ತಾನಿಯಾ ಸಚ್‌ದೇವ್, ಅನ್ನಾ ಸರ್ಗಾಸಿಯಾನ್ ಜೊತೆ ‘ಡ್ರಾ’ಕ್ಕೆ ಸಹಿಮಾಡಿದರು.
ಮಹಿಳಾ ತಂಡವೂ ಅಗ್ರಸ್ಥಾನದಲ್ಲಿದ್ದು, ಬುಧವಾರ ಏಳನೇ ಸುತ್ತಿನಲ್ಲಿ ಜಾರ್ಜಿಯಾ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.