ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್‌: ಮೈಸೂರಿಗೆ ಸಮಗ್ರ ಪ್ರಶಸ್ತಿ

Last Updated 2 ಅಕ್ಟೋಬರ್ 2022, 21:32 IST
ಅಕ್ಷರ ಗಾತ್ರ

ಮೈಸೂರು: ಆತಿಥೇಯ ಮೈಸೂರು ವಲಯ ತಂಡವು ದಸರಾ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯವಾದ ಕ್ರೀಡಾಕೂಟದಲ್ಲಿ ಮೈಸೂರು ವಲಯ ತಂಡವು 203 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆಯಿತು.ಮೈಸೂರಿನ ಮಹಿಳಾ ವಿಭಾಗವು 120 ಅಂಕ ಹಾಗೂ ಪುರುಷರ ವಿಭಾಗ 83 ಅಂಕ ಗಳಿಸಿ ಸಾಧನೆ ಮಾಡಿತು.

ಬೆಂಗಳೂರು ವಲಯ ತಂಡ (ಪುರುಷರು– 59 ಅಂಕ, ಮಹಿಳೆಯರು– 85 ಅಂಕ, ಒಟ್ಟು 114 ಅಂಕ) ದ್ವಿತೀಯ ಸ್ಥಾನ ಪಡೆದರೆ, ಬೆಳಗಾವಿ ವಲಯವು (ಪುರುಷರು– 53 ಅಂಕ, ಮಹಿಳೆಯರು 42 ಅಂಕ, ಒಟ್ಟು– 95 ಅಂಕ) ಮೂರನೇ ಸ್ಥಾನ ಪಡೆಯಿತು.

ಅಂತಿಮ ದಿನ ಮೈಸೂರಿಗರ ದಾಖಲೆ: ಅಥ್ಲೆಟಿಕ್ಸ್‌ನ ಅಂತಿಮ ದಿನದ ಸ್ಪರ್ಧೆಗಳಲ್ಲಿ ಮೈಸೂರು ವಲಯದ ಬಿ.ಮಹಂತ್, ಚೈತ್ರಾ ದೇವಾಡಿಗಹಾಗೂ ಜಿ.ಪವಿತ್ರಾ ನೂತನ ದಾಖಲೆ ನಿರ್ಮಿಸಿದರು.

ಮಂಡ್ಯ ಜಿಲ್ಲೆಯ ಪಾಂಡವಪುರದ ಬಿ.ಮಹಂತ್‌, ಟ್ರಿಪಲ್‌ಜಂಪ್‌ನಲ್ಲಿ 15.25 ಮೀ. ಜಿಗಿದು 2016ರಲ್ಲಿ ಮೈಸೂರಿನ ಕಾರ್ತಿಕ್ ಬಸಗೊಂಡಪ್ಪ ಐಹೊಳೆ ನಿರ್ಮಿಸಿದ್ದ (15.04 ಮೀ.) ದಾಖಲೆಯನ್ನು ಮುರಿದರು. ಮೈಸೂರಿನ ಸಂದೇಶ್‌, ಬೆಳಗಾವಿಯ ಜಾಫರ್‌ ಖಾನ್ ಸರ್ವಾರ್ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.

1500 ಮೀ. ಓಟದಲ್ಲಿ ದಾಖಲೆ ನಿರ್ಮಿಸಿದ್ದಮೂಡಬಿದರೆಯ ಆಳ್ವಾಸ್‌ ಕಾಲೇಜಿನ ಚೈತ್ರಾ ದೇವಾಡಿಗ
ಅವರು 3,000 ಮೀ ಓಟದ ಸ್ಪರ್ಧೆಯಲ್ಲೂ ದಾಖಲೆ ಬರೆದರು.10.05.72 ನಿಮಿಷದಲ್ಲಿ ಗುರಿಮುಟ್ಟಿ, 2012ರಲ್ಲಿ ಮೈಸೂರಿನ ತಿಪ್ಪವ್ವ ಸಣ್ಣಕ್ಕಿ ಹೆಸರಿನಲ್ಲಿದ್ದ (10.22.70 ನಿಮಿಷ) ದಾಖಲೆಯನ್ನು ಮುರಿದರು. ಬೆಂಗಳೂರಿನ ಅರ್ಚನಾ (10.10.75 ನಿ.) ಕೂಡ ದಾಖಲೆ ಬರೆದು ದ್ವಿತೀಯ ಸ್ಥಾನ ಗಳಿಸಿದರು. ಬೆಳಗಾವಿಯ ಟೀನಾ ಜಿ.ವಾಂಖೆಡೆ ಮೂರನೇ ಸ್ಥಾನ ಪಡೆದರು.

ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ಜಿ.ಪವಿತ್ರಾ, ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ 12.69 ಮೀಟರ್‌ ಜಿಗಿದು ಬೆಂಗಳೂರಿನ ಜಾಯ್‌ಲಿನ್ ಲೋಬೋ ಹೆಸರಿನಲ್ಲಿದ್ದ (12.38 ಮೀ.) ದಾಖಲೆಯನ್ನು ಮುರಿದರು. ಮೈಸೂರಿನ ಕೃತಿ ಜಿ. ಶೆಟ್ಟಿ, ಬೆಳಗಾವಿಯ ಸ್ಮಿತಾ ಕಾಕತ್ಕರ್‌ ಬೆಳ್ಳಿ ಹಾಗೂ ಕಂಚು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT