ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಲಿಂಪಿಕ್ಸ್ ಬಾಕ್ಸಿಂಗ್ ಅರ್ಹತಾ ಟೂರ್ನಿ: ಆರಂಭಿಕ ಸುತ್ತಿನಲ್ಲಿ ದೀಪಕ್‌ ನಿರ್ಗಮನ

Published 3 ಮಾರ್ಚ್ 2024, 18:56 IST
Last Updated 3 ಮಾರ್ಚ್ 2024, 18:56 IST
ಅಕ್ಷರ ಗಾತ್ರ

ಬುಸ್ಟೊ ಅರ್ಸಿಜಿಯೊ, ಇಟಲಿ: ಇಲ್ಲಿ ನಡೆಯುತ್ತಿರುವ ಮೊದಲ ಒಲಿಂಪಿಕ್ಸ್ ಬಾಕ್ಸಿಂಗ್ ವಿಶ್ವ ಅರ್ಹತಾ ಟೂರ್ನಿಯಲ್ಲಿ ಭಾರತದ ಅಭಿಯಾನವು ನಿರಾಶಾದಾಯಕವಾಗಿ ಪ್ರಾರಂಭವಾಯಿತು. ಪದಕದ ನಿರೀಕ್ಷೆ ಮೂಡಿಸಿದ್ದ ದೀಪಕ್ ಭೋರಿಯಾ (51 ಕೆಜಿ) ಮತ್ತು ನರೇಂದರ್ ಬರ್ವಾಲ್ (92 ಕೆಜಿ) ಆರಂಭಿಕ ಸುತ್ತಿನಲ್ಲೇ ನಿರ್ಗಮಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ದೀಪಕ್ ಭೋರಿಯಾ (51 ಕೆಜಿ) ಅವರು 64ರ ಘಟ್ಟದ  ಅಜರ್‌ಬೈಜಾನ್‌ನ ಹುಸೇನೊವ್ ನಿಜತ್ ವಿರುದ್ಧ ಮುಗ್ಗರಿಸಿದರು.

2019ರ ವಿಶ್ವ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಲ್ ಅವರನ್ನು ಹಿಂದಿಕ್ಕಿ ಭಾರತ ತಂಡದಲ್ಲಿ  ಸ್ಥಾನ ಪಡೆದಿದ್ದ ಭೋರಿಯಾ ಅವರು 2-3ರಿಂದ ಹುಸೇನೊವ್ ಅವರಿಗೆ ಮಣಿದರು.

ಮೊದಲ ಎರಡು ಸುತ್ತುಗಳಲ್ಲಿ ಇಬ್ಬರೂ ಬಾಕ್ಸರ್‌ಗಳ ನಡುವೆ ತೀವ್ರ ಪೈಪೋಟಿ ಕಂಡುಬಂತು. ಆದರೆ,  ಹುಸೇನೊವ್ ಅವರು ವೇಗದ ಚಲನೆಯ ಲಾಭ ಪಡೆದು, ರಿಂಗ್‌ನಲ್ಲಿ ಭೋರಿಯಾ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಅಂತಿಮ ಮೂರು ನಿಮಿಷದಲ್ಲಿ ಭಾರತದ ಸ್ಪರ್ಧಿ ತಿರುಗೇಟು ನೀಡಿದರೂ ಅದು ಗೆಲುವಿಗೆ ಸಾಕಾಗಲಿಲ್ಲ.

ನರೇಂದರ್ ಅವರು ಜರ್ಮನಿಯ ನೆಲ್ವಿ ಟಿಯಾಫಕ್ ವಿರುದ್ಧ 3–2ರಿಂದ ಪರಾಭವಗೊಂಡರು. ಆರಂಭಿಕ ಸುತ್ತಿನಲ್ಲಿ ಮೇಲುಗೈ ಸಾಧಿಸಿದ್ಧ ಭಾರತದ ಬಾಕ್ಸರ್‌ ನಂತರದ ಸುತ್ತಿನಲ್ಲಿ ಮುಗ್ಗರಿಸಿದರು.

2022ರ ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಜೈಸ್ಮಿನ್ (60 ಕೆಜಿ), ಮೊಹಮ್ಮದ್ ಹುಸಾಮುದ್ದೀನ್ (57 ಕೆಜಿ), ನಿಶಾಂತ್‌ ದೇವ್ (71 ಕೆಜಿ), ಶಿವ ಥಾಪಾ (63.5 ಕೆಜಿ) ಮತ್ತು ಸಂಜೀತ್ (92 ಕೆಜಿ) ಸ್ಪರ್ಧಾ ಕಣದಲ್ಲಿದ್ದಾರೆ.

ಭಾರತದ ನಾಲ್ಕು ಬಾಕ್ಸರ್‌ಗಳು ಮಾತ್ರ ಈವರೆಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಈ ಟೂರ್ನಿಯಿಂದ ಒಲಿಂಪಿಕ್ಸ್‌ಗೆ 49 ಕೋಟಾ (ಪುರುಷರಿಗೆ 28, ಮಹಿಳೆಯರಿಗೆ 21) ಸ್ಥಾನಗಳಿವೆ. 

ಇಲ್ಲಿ ಕೋಟಾಗಳನ್ನು ಗಳಿಸಲು ವಿಫಲರಾದ ಬಾಕ್ಸರ್‌ಗಳು ಮೇ 23ರಿಂದ ಜೂನ್ 3ರವರೆಗೆ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಎರಡನೇ ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಕ್ವಾಲಿಫೈಯರ್‌ನಲ್ಲಿ ಕೊನೆಯ ಅವಕಾಶ ಪಡೆಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT