ಪ್ಯಾರಿಸ್: ಗುಂಪು ಸ್ಪರ್ಧೆಯಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದ ಭಾರತದ ಅನುಭವಿ ಬಿಲ್ಗಾರ್ತಿ ದೀಪಿಕಾ ಕುಮಾರಿ ಅವರು ವೈಯಕ್ತಿಕ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಜರ್ಮನಿಯ ಮಿಷೆಲ್ ಕ್ರೊಪ್ಪೆನ್ ವಿರುದ್ಧ 6–4ರ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಆದರೆ ಭಜನ್ ಕೌರ್ ಅವರು ಇಂಡೊನೇಷ್ಯಾದ ಡಿಯಾನಾಂದ ಚೌರುನಿಸಾ ವಿರುದ್ಧ ಪರಾಭವಗೊಂಡು ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ದೀಪಿಕಾ ಅವರು ಜರ್ಮನಿಯ ಪ್ರತಿಸ್ಪರ್ಧಿ ವಿರುದ್ಧ 9 ಅಂಕಗಳನ್ನು ಮೂರು ಬಾರಿ ಪಡೆಯುವ ಮೂಲಕ ಉತ್ತಮ ಆಟವಾಡಿದರು. ಬಿಲ್ಲುಗಾರಿಕೆಯಲ್ಲಿ ಪದಕ ಗೆಲ್ಲಲೇಬೇಕೆಂಬ ಛಲ ಹೊಂದಿರುವ ದೀಪಿಕಾ ಅವರು ಕೊರಿಯಾದ ಸುಯಾನ್ ನಾಮ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಎದುರಿಸಲಿದ್ದಾರೆ.
18 ವರ್ಷದ ಭಜನ್ ಅವರು ಇಂಡೊನೇಷ್ಯಾದ ಪ್ರತಿಸ್ಪರ್ಧಿ ವಿರುದ್ಧ 8 ಅಂಕಗಳನ್ನು ಕಲೆಹಾಕಿದ್ದರು. ಆದರೆ ಅಂತಿಮ ಎಂಟರ ಘಟ್ಟ ತಲುಪಲು ಅವರಿಗೆ ಹತ್ತು ಅಂಕಗಳ ಅಗತ್ಯವಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಭಜನ್, ‘ನಾನು ಎಲ್ಲಿಯೋ ಹಿಂದೆ ಬಿದ್ದಿದ್ದೇನೆ. ಹೀಗಾಗಿ ಪರಾಭವಗೊಂಡೆ. ಸ್ವದೇಶಕ್ಕೆ ಮರಳಿದ ನಂತರ ಆ ಕುರಿತು ಅವಲೋಕಿಸಿ, ಹೆಚ್ಚಿನ ಅಭ್ಯಾಸ ಮಾಡುತ್ತೇನೆ’ ಎಂದಿದ್ದಾರೆ.