ಪ್ಯಾರಿಸ್: ನ್ಯೂಜಿಲೆಂಡ್‌ನ ಹಮಿಶ್ ಕೆರ್ ಅವರು ಅಮೆರಿಕದ ಸೆಲ್ಬಿ ಮೆಕ್‌ಇವೆನ್ ಅವರ ತೀವ್ರ ಪೈಪೋಟಿಯನ್ನು ಯಶಸ್ವಿಯಾಗಿ ಎದುರಿಸಿ ಪ್ಯಾರಿಸ್ ಒಲಿಂಪಿಕ್ಸ್ ಹೈಜಂಪ್‌ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಕೆರ್ ಮತ್ತು ಮೆಕ್‌ಇವೆನ್ 2.36 ಮೀ. ಎತ್ತರ ಜಿಗಿಯುವಲ್ಲಿ ಯಶಸ್ವಿಯಾದರು. ಆದರೆ, ಕೌಂಟ್‌ಬ್ಯಾಕ್ ಆಧಾರದಲ್ಲಿ ಜಯವನ್ನು ನಿರ್ಧರಿಸಲಾಗಲಿಲ್ಲ.
ನಂತರ ಚಿನ್ನದ ಪದಕಕ್ಕಾಗಿ ಜಂಪ್‌ಅಪ್ ಮೊರೆ ಹೋಗಲಾಯಿತು. ಅಲ್ಲಿ 2.34 ಮೀ. ಎತ್ತರವನ್ನು ಯಶಸ್ವಿಯಾಗಿ ಜಿಗಿದ ಹಮಿಶ್ ಕೆರ್ ಚಿನ್ನ ಪದಕಕ್ಕೆ ಕೊರಳೊಡಿದ್ದರು. ಸೆಲ್ಬಿ ಮೆಕ್‌ಇವೆನ್ ಬೆಳ್ಳಿಗೆ ತೃಪ್ತರಾದರು.
ಕತಾರ್‌ನ ಮುತಾಜ್ ಇಸ್ಸಾ ಬಾರ್ಶಿಮ್ 2.34 ಮೀ. ಎತ್ತರ ಜಿಗಿದು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಟೋಕಿಯೊದಲ್ಲಿ ಬಾರ್ಶಿಮ್ ಜೊತೆಗೆ ಚಿನ್ನದ ಪದಕ ಹಂಚಿಕೊಂಡಿದ್ದ ಇಟಲಿಯ ಜಾನ್ ಮಾರ್ಕೊ ತಂಬೆರಿ 2.22 ಮೀ. ಎತ್ತರ ಜಿಗಿಯಲಷ್ಟೆ ಶಕ್ತವಾದರು. ಒಟ್ಟು 12 ಸ್ಪರ್ಧಿಗಳಲ್ಲಿ ಅವರು 11ನೇ ಸ್ಥಾನ ಪಡೆದರು.