ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆಡಲಿಂಗ್ ಚಾಂಪಿಯನ್‌ಷಿಪ್‌: ಪ್ರಶಸ್ತಿಗೆ ಮುತ್ತಿಕ್ಕಿದ ಆ್ಯಂಟೊನಿಯೊ, ಬರೆರಾಸ್

ಅಂತರರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡಲಿಂಗ್ ಚಾಂಪಿಯನ್‌ಷಿಪ್‌: ಭಾರತದ ಶೇಖರ್‌ಗೆ 5ನೇ ಸ್ಥಾನ
Published 10 ಮಾರ್ಚ್ 2024, 4:45 IST
Last Updated 10 ಮಾರ್ಚ್ 2024, 4:45 IST
ಅಕ್ಷರ ಗಾತ್ರ

ಮಂಗಳೂರು: ರೋಚಕ ರೇಸ್‌ನಲ್ಲಿ ಡೆನ್ಮಾರ್ಕ್‌ನ ಕ್ರಿಶ್ಚಿಯನ್ ಆ್ಯಂಡೆರ್ಸನ್ ಅವರನ್ನು ಹಿಂದಿಕ್ಕಿದ ಸ್ಪೇನ್‌ನ ಆ್ಯಂಟೊನಿಯೊ ಮೊರಿಲೊ, ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡು ಸಂಭ್ರಮಿಸಿದರು. 

ಅಸೋಸಿಯೇಷನ್ ಆಫ್‌ ಪೆಡಲ್‌ ಸರ್ಫ್ ಪ್ರೊಫೆಷನಲ್ಸ್‌ (ಎಎಪಿ) ಆಶ್ರಯದ ಅಂತರರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡಲಿಂಗ್ ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಶನಿವಾರ ನಡೆದ ದೂರ ಅಂತರದ ತಾಂತ್ರಿಕ ವಿಭಾಗದಲ್ಲಿ ಸ್ಪೇನ್‌ನ ಪೆಡ್ಲರ್ 56 ನಿಮಿಷ 59 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ ಕ್ರಿಶ್ಚಿಯನ್ 57 ನಿಮಿಷ 00.151 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಈ ವಿಭಾಗದ ಅಗ್ರ ಶ್ರೇಯಾಂಕಿತ ಅಥ್ಲೀಟ್‌ ಸ್ಪೇನ್‌ನ ಫರ್ನಾಂಡೊ ಪೆರೆಜ್ 57 ನಿಮಿಷ 28 ಸೆಕೆಂಡುಗಳೊಂದಿಗೆ ಮೂರನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಮಾಜಿ ವಿಶ್ವ ಚಾಂಪಿಯನ್ ಡ್ಯಾನಿಯಲ್ ಹಸುಲೊ ನಾಲ್ಕನೇ ಸ್ಥಾನ ಗಳಿಸಿದರೆ ರಾಷ್ಟ್ರೀಯ ಚಾಂಪಿಯನ್‌ ಶೇಖರ್ ಪಚಾಯ್‌ (1:01.06) ಐದನೇ ಸ್ಥಾನ ಗಳಿಸಿದರು. ಭಾರತದ ಮಣಿಕಂಠನ್ ಕೂಡ ಫೈನಲ್ ಪ್ರವೇಶಿಸಿದ್ದರು. 

ವಿಶ್ವ ಕ್ರಮಾಂಕದ ಎರಡನೇ ಸ್ಥಾನದಲ್ಲಿರುವ ಸ್ಪೇನ್‌ನ ಎಸ್ಪೆನಾನ್ಜ ಬರೆರಾಸ್ ಮಹಿಳೆಯರ 10 ಕಿಲೊಮೀಟರ್ ತಾಂತ್ರಿಕ ವಿಭಾಗದ ರೇಸ್‌ನ ಪ್ರಶಸ್ತಿ ಮುಡಿಗೇರಿಸಿಕೊಂಡರು. 59 ನಿಮಿಷ 38 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಥಾಯ್ಲೆಂಡ್‌ನ ಐರಿನ್ ಎನ್ ಅವರನ್ನು ಹಿಂದಿಕ್ಕಿದರು. ಐರಿನ್‌ ರೇಸ್ ಮುಗಿಸಲು 1 ತಾಸು 5 ನಿಮಿಷ 23 ಸೆಕೆಂಡುಗಳನ್ನು ತೆಗೆದುಕೊಂಡರು. ಜೂನಿಯರ್ ವಿಭಾಗದ ಚಾಂಪಿಯನ್, ಇಟಲಿಯ ಬಿಯಾಂಕ ಟೊಸೆಲಿ (1:08.21) ಅನುಭವಿಗಳ ಜೊತೆ ಸ್ಪರ್ಧಿಸಿ ಮೂರನೇ ಸ್ಥಾನ ಗಳಿಸಿದರು. ಭಾರತವೂ ಸೇರಿದಂತೆ 7 ದೇಶಗಳ ಪೆಡ್ಲರ್‌ಗಳು ಈ ವಿಭಾಗದ ಫೈನಲ್ ಪ್ರವೇಶಿಸಿದ್ದರು.

ಪುರುಷರ ದೂರ ಅಂತರದ ರೇಸ್‌ನ ತಾಂತ್ರಿಕ ವಿಭಾಗದಲ್ಲಿ ಚಾಂಪಿಯನ್ ಆದ ಸ್ಪೇನ್‌ನ ಆ್ಯಂಟೊನಿಯೊ ಮೊರಿಲೊ (ಮುಂದೆ ಇರುವವರು)
ಪುರುಷರ ದೂರ ಅಂತರದ ರೇಸ್‌ನ ತಾಂತ್ರಿಕ ವಿಭಾಗದಲ್ಲಿ ಚಾಂಪಿಯನ್ ಆದ ಸ್ಪೇನ್‌ನ ಆ್ಯಂಟೊನಿಯೊ ಮೊರಿಲೊ (ಮುಂದೆ ಇರುವವರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT