ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆ: ಒಲಿಂಪಿಕ್ಸ್ ಆಯ್ಕೆ ಟ್ರಯಲ್ಸ್; ಶಾಟ್‌ಗನ್ ಶೂಟರ್ಸ್ ಕಂಗಾಲು

Published 17 ಫೆಬ್ರುವರಿ 2024, 15:32 IST
Last Updated 17 ಫೆಬ್ರುವರಿ 2024, 15:32 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರೈತರ ಪ್ರತಿಭಟನೆ ಮತ್ತು ಅಂತರರಾಜ್ಯ ಪ್ರಯಾಣ ನಿರ್ಬಂಧ ಹೇರಿರುವ ಕಾರಣ, ಪಟಿಯಾಲಾದಲ್ಲಿ ಈ ತಿಂಗಳಾಂತ್ಯದಲ್ಲಿ ನಿಗದಿಯಾಗಿರುವ ಮಹತ್ವದ ಒಲಿಂಪಿಕ್‌ ಟ್ರಯಲ್ಸ್‌ನಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿ 150ಕ್ಕೂ ಹೆಚ್ಚು ಶಾಟ್‌ಗನ್‌ ಶೂಟರ್‌ಗಳು ಈಗ ಆತಂಕಕ್ಕೆ ಒಳಗಾಗಿದ್ದಾರೆ.

ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಈ ಸಂಬಂಧ ಎರಡು ಸಭೆಗಳನ್ನು ಕರೆದಿದೆ. ಆದರೆ ಮೂರನೇ ಆಯ್ಕೆ ಟ್ರಯಲ್ಸ್‌ಗೆ ಸಂಬಂಧಿಸಿದಂತೆ ಅದು ದಿನಾಂಕ ಅಥವಾ ಸ್ಥಳ ಬದಲಾವಣೆಗೆ ಸಂಬಂಧಿಸಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕೆಲವು ತೊಡಕುಗಳು ಇದಕ್ಕೆ ಕಾರಣ. ಬಿಡುವಿಲ್ಲದ ವೇಳಾಪಟ್ಟಿ ಮತ್ತು ಯಾವುದೇ ಕ್ಷಣದಲ್ಲಿ ಲೋಕಸಭಾ ಚುನಾವಣೆ ಘೋಷಣೆ ಸಾಧ್ಯತೆ ಇರುವುದರಿಂದ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ತಂಡದ ಆಯ್ಕೆ ಟ್ರಯಲ್ಸ್‌ ಫೆ. 25 ರಿಂದ ಮಾರ್ಚ್‌ 2ರವರೆಗೆ ಪಟಿಯಾಲದ ಮೋತಿಬಾಗ್ ಗನ್‌ ಕ್ಲಬ್ ರೇಂಜಸ್‌ನಲ್ಲಿ ನಡೆಯಬೇಕಾಗಿದೆ ಎಂದು ಜನವರಿ 22ರಂದು ಎನ್‌ಆರ್‌ಎಐ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

ರಸ್ತೆ ಮಾರ್ಗದಲ್ಲಿ ಶಸ್ತ್ರಗಳನ್ನು ಒಯ್ಯುವುದು ಈಗಿನ ಪರಿಸ್ಥಿತಿಯಲ್ಲಿ ದೂರದ ಮಾತು ಎಂದು ಹಲವು ಶಾಟ್‌ಗನ್‌ ಶೂಟರ್‌ಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ರೈತರ ಪ್ರತಿಭಟನೆ ಕಾರಣ ಗಡಿಗಳನ್ನು ಮುಚ್ಚಿರುವ ಕಾರಣ ಚಂಡೀಗಢಕ್ಕೆ ವಿಮಾನ ಪ್ರಯಾಣದ ದರ ಗಗನಕ್ಕೇರಿದೆ.

ಪಟಿಯಾಲದಲ್ಲಿ ಟ್ರಯಲ್ಸ್ ನಡೆಸಲು ಫೆಡರೇಷನ್‌ಗೆ ಸಾಧ್ಯವಾಗಬಹುದೇ ಎಂಬ ಪ್ರಶ್ನೆಗೆ, ‘ಇದು ತುಂಬಾ ಕಷ್ಟದ ಪ್ರಶ್ನೆ. ಈಗಿನ ಬಿಡುವಿಲ್ಲದ ವೇಳಾಪಟ್ಟಿ, ಚುನಾವಣೆ.... ನಾವು ಸಮಯದ ಜೊತೆ ಪೈಪೋಟಿಯಲ್ಲಿದ್ದೇವೆ’ ಎಂದು ಎನ್‌ಆರ್‌ಎಐ ಮಹಾಪ್ರಧಾನ ಕಾರ್ಯದರ್ಶಿ ಸುಲ್ತಾನ್ ಸಿಂಗ್ ಉತ್ತರಿಸಿದರು.

ಜೈಪುರದ ಜಗತಪುರ ರೇಂಜ್ ಅಥವಾ ದೆಹಲಿಯ ಕರ್ಣಿ ಸಿಂಗ್ ರೇಂಜ್‌ಗೆ ಟ್ರಯಲ್ಸ್‌ ಅನ್ನು ಸ್ಥಳಾಂತರಿಸಬಹುದೇ ಎಂಬ ಪ್ರಶ್ನಗೆ, ‘ದೆಹಲಿಯಲ್ಲಿ ಮಾರ್ಚ್‌ 6 ರಿಂದ 15ರವರೆಗೆ ಪ್ಯಾರಾ ಶೂಟಿಂಗ್‌ ವಿಶ್ವಕಪ್ ನಡೆಯಲಿದ್ದು, ಅಲ್ಲಿ ಸಿದ್ಧತೆಗಳು ನಡೆದಿವೆ. 52 ರಾಷ್ಟ್ರಗಳ ಶೂಟರ್‌ಗಳು ಭಾಗಿಯಾಗಲಿದ್ದಾರೆ ಎಂದರು. ಇದನ್ನು ದಕ್ಷಿಣ ಭಾರತಕ್ಕೆ ಸ್ಥಳಾಂತರಿಸಿದರೆ, ಉತ್ತರಭಾರತದ ಸ್ಪರ್ಧಿಗಳಿಗೆ ತೊಂದರೆಯಾಗುತ್ತದೆ. ದಕ್ಷಿಣದ ಸ್ಪರ್ಧಿಗಳಿಗೆ ಉತ್ತರ ಭಾರತಕ್ಕೆ ಬರುವುದು ಕಷ್ಟ. ಈಗಿನ ಅಯೋಮಯ ಸ್ಥಿತಿಯಲ್ಲಿ ಜೈಪುರಕ್ಕೆ ನಾವು ತಲುಪುವುದಾದರೂ ಹೇಗೆ ಎಂದು ಚಂಡೀಗಢದ ಶೂಟರ್‌ಗಳು ಕೇಳುತ್ತಾರೆ’ ಎಂದು ಸಿಂಗ್ ಹೇಳಿದರು.

ಎರಡು ಸಭೆಗಳು ನಡೆದರೂ ಪರಿಹಾರ ಸಿಕ್ಕಿಲ್ಲ. ಟ್ರಯಲ್ಸ್ ಮುಂದೂಡುವುದಂತೂ ಕಷ್ಟದ ಮಾತು. ಚುನಾವಣೆ ಘೋಷಣೆಯಾದರೆ, ನೀತಿ ಸಂಹಿತೆ ಜಾರಿಯಾಗುತ್ತದೆ. ಶಸ್ತ್ರಗಳನ್ನು ಒಯ್ಯುವಂತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT