ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ಕೆ ಪೂರ್ಣಗೊಳಿಸಿದ 5 ತಿಂಗಳ ಗರ್ಭಿಣಿ

ಟಿಸಿಎಸ್‌ ವಿಶ್ವ 10ಕೆ: ಬೆಂಗಳೂರು ಮಹಿಳೆಯ ಸಾಧನೆ
Last Updated 23 ಡಿಸೆಂಬರ್ 2020, 21:39 IST
ಅಕ್ಷರ ಗಾತ್ರ

ಬೆಂಗಳೂರು: ಐದು ತಿಂಗಳ ಗರ್ಭಿಣಿಯೊಬ್ಬರು ಬೆಂಗಳೂರು ಟಿಸಿಎಸ್‌ 10ಕೆಯನ್ನು ಕೇವಲ 62 ನಿಮಿಷಗಳಲ್ಲಿ ಪೂರ್ಣಗೊಳಿಸಿ ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ನಗರದ ಅಂಕಿತಾ ಗೌರ್ ಭಾನುವಾರ (ಡಿ.20) ಈ ಸಾಧನೆ ಮಾಡಿದ್ದಾರೆ.

ವಿಶ್ವದಾದ್ಯಂತ ಟಿಸಿಎಸ್ ಆ್ಯಪ್ ಮೂಲಕ ಈ ಬಾರಿಯ ಬೆಂಗಳೂರು 10ಕೆಯನ್ನು ನಡೆಸಲಾಗುತ್ತಿದೆ.ಆ್ಯಪ್‌ನಲ್ಲಿ ನೋಂದಾಯಿಸಿಕೊಂಡು ಸ್ಪರ್ಧಿಗಳು ತಾವಿರುವ ಸ್ಥಳದಿಂದಲೇ ಇದೇ 20ರಂದು ಆರಂಭವಾಗಿರುವ (27ಕ್ಕೆ ಮುಗಿಯಲಿದೆ) ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

‘ಕಳೆದ ಒಂಬತ್ತು ವರ್ಷಗಳಿಂದ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವೆ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಎಲ್ಲರೂ ಸಾಮಾನ್ಯವಾಗಿ ವಾಯುವಿಹಾರ ಮಾಡುತ್ತಾರೆ. ಗಾಯಗೊಂಡಾಗ ಅಥವಾ ಆನಾರೋಗ್ಯದ ಸಂದರ್ಭದಲ್ಲಿ ಮಾತ್ರ ಹಿಂದೆ ಸರಿಯಬೇಕಾಗುತ್ತದೆ. ಓಟ ನನ್ನ ಉಸಿರಿನೊಳಗೇ ಬೆರೆತುಹೋಗಿದೆ‘ ಎಂದು ಅಂಕಿತಾ ಹೇಳಿದ್ದಾರೆ.

‘ಓಟ ಆರೋಗ್ಯಕ್ಕೆ ಸುರಕ್ಷಿತ. ಗರ್ಭಾವಸ್ಥೆಯ ಸಂದರ್ಭದಲ್ಲಿ ಓಡುವುದು ಉತ್ತಮ ವ್ಯಾಯಾಮ. ‘ಅಮೆರಿಕನ್ ಕೌನ್ಸಿಲ್ ಆಫ್ ಹೆಲ್ತ್‌‘ ಸಂಸ್ಥೆಯವರ ಪ್ರಕಾರ ಓಟಗಾರರಿಗೆ ಯಾವುದೇ ಸಂದರ್ಭವೂ ಸೂಕ್ತವಾದದ್ದೇ‘ ಎಂದು ಅಂಕಿತಾ ನುಡಿದರು.

ವೃತ್ತಿಯಲ್ಲಿ ಇಂಜಿನಿಯರ್‌ ಆಗಿರುವ ಅಂಕಿತಾ, 2013ರಿಂದ ಟಿಸಿಎಸ್‌ ವಿಶ್ವ 10ಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಬರ್ಲಿನ್‌ (ಮೂರು ಬಾರಿ), ಬೋಸ್ಟನ್‌ ಹಾಗೂ ನ್ಯೂಯಾರ್ಕ್‌ಗಳಲ್ಲಿ ಸೇರಿ ಐದರಿಂದ ಆರು ಅಂತರರಾಷ್ಟ್ರೀಯ ಮ್ಯಾರಥಾನ್‌ಗಳಲ್ಲಿಯೂ ಪಾಲ್ಗೊಂಡಿದ್ದಾರೆ.

‘ಈ ಬಾರಿ ಆ್ಯಪ್ ಮೂಲಕ ನಡೆದ 10ಕೆಯನ್ನೂ ಆನಂದಿಸಿದೆ. ಇದು ಬಳಕೆದಾರ ಸ್ನೇಹಿಯಾಗಿದೆ. ನಿಧಾನವಾಗಿ ಹಾಗೂ ನಿಯಮಿತವಾಗಿ ಓಡಿದೆ. ಈ ಬಾರಿಯ ಅನುಭವ ಭಿನ್ನವಾಗಿತ್ತು. ಈ ಮೊದಲಿನ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದೆ. ಈ ಬಾರಿ ಸಾಧ್ಯವಾಗಲಿಲ್ಲ. ಓಟದಲ್ಲಿ ಪಾಲ್ಗೊಳ್ಳುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದರು. ಪೋಷಕರು ಹಾಗೂ ಪತಿಯ ಬೆಂಬಲವೂ ಇದ್ದಿದ್ದರಿಂದ ಇದು ಸಾಧ್ಯವಾಯಿತು‘ ಎಂದು ಅಂಕಿತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT