ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತವ್ಯ ಮಾಹಿತಿ ನೀಡಲು ವಿಫಲ: ಹಿಮಾ ದಾಸ್‌ಗೆ ತಾತ್ಕಾಲಿಕ ಅಮಾನತು

Published 5 ಸೆಪ್ಟೆಂಬರ್ 2023, 14:44 IST
Last Updated 5 ಸೆಪ್ಟೆಂಬರ್ 2023, 14:44 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ವೇಗದ ಓಟಗಾರ್ತಿ ಹಿಮಾ ದಾಸ್‌ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಘಟಕವು (ನಾಡಾ) ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಒಂದು ವರ್ಷದ ಅವಧಿಯಲ್ಲಿ ಮೂರು ಸಲ ಅವರು ತಮ್ಮ ವಾಸ್ತವ್ಯದ ಮಾಹಿತಿ ನೀಡಲು ವಿಫಲರಾಗಿರುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷದ ಆರಂಭದಲ್ಲಿ ಗಾಯಾಳಾಗಿರುವ ಕಾರಣಕ್ಕೆ 23 ವರ್ಷದ ಹಿಮಾ ಅವರನ್ನು ಹಾಂಗ್‌ಜೌ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ.

‘ಈ ವಿಷಯ ನಿಜ. ಒಂದು ವರ್ಷದ ಅವಧಿಯಲ್ಲಿ ಅವರು ಮೂರು ಸಲ ಪರೀಕ್ಷಕರಿಗೆ ವಾಸ್ತವ್ಯದ ಮಾಹಿತಿ ನೀಡಿಲ್ಲ. ಹೀಗಾಗಿ ‘ನಾಡಾ’ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ’ ಎಂದು ಭಾರತ ತಂಡದ ಅಧಿಕಾರಿಯೊಬ್ಬರು ಹೆಸರು ಬಹಿರಂಗಪಡಿಸಬಾರದೆಂಬ ಷರತ್ತಿನ ಮೇಲೆ ಪಿಟಿಐಗೆ ತಿಳಿಸಿದರು.

ಈಗಾಗಲೇ ರಾಷ್ಟ್ರೀಯ ಶಿಬಿರ ತೊರೆದಿರುವ ಅಸ್ಸಾಮಿನ ಓಟಗಾರ್ತಿ, ಗರಿಷ್ಠ ಎರಡು ವರ್ಷದ ನಿಷೇಧ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಅವರು ಎಸಗಿರುವ ತಪ್ಪಿನ ತೀವ್ರತೆ ಪರಿಗಣಿಸಿ ಶಿಕ್ಷೆಯನ್ನು ನಂತರ ಕನಿಷ್ಠ ಒಂದು ವರ್ಷಕ್ಕೆ ಇಳಿಸಲೂ ಅವಕಾಶವಿದೆ.

‌ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ನಿಯಮಗಳ ಪ್ರಕಾರ, 12 ತಿಂಗಳ ಅವಧಿಯಲ್ಲಿ ಮೂರು ಬಾರಿ ಅಥ್ಲೀಟ್‌ ಒಬ್ಬರು ತಮ್ಮ ಇರವಿನ (ವಾಸ್ತವ್ಯದ) ಬಗ್ಗೆ ಮಾಹಿತಿ ನೀಡದಿದ್ದರೆ/ ಮುಚ್ಚಿಟ್ಟಲ್ಲಿ ಅಥವಾ ಪರೀಕ್ಷೆ ತಪ್ಪಿಸಿಕೊಂಡಲ್ಲಿ ಅದು ಉದ್ದೀಪನ ಮದ್ದು ಸೇವನೆ ತಡೆ ನಿಯಮ ಉಲ್ಲಂಘಿಸಿದಂತೆ ಆಗುತ್ತದೆ.

ಹಿಮಾ ದಾಸ್‌ ಅವರು 2018ರ ಜಕಾರ್ತಾ ಏಷ್ಯನ್ ಕ್ರೀಡೆಗಳ 400 ಮೀ. ಓಟದಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು.  ಮಹಿಳೆಯರ 4x400 ಮೀ. ರಿಲೇ ಓಟದಲ್ಲಿ ಮತ್ತು 4x400 ಮಿಕ್ಸೆಡ್‌ ರಿಲೇ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯ ಪದಕ ಗೆದ್ದ ತಂಡದಲ್ಲೂ ಅವರು ಓಡಿದ್ದರು.

ಹಿಮಾ ಅವರು ಮೂರು ಬಾರಿ ತಮ್ಮ ವಾಸ್ತವ್ಯದ ಮಾಹಿತಿ ನೀಡಲಿಲ್ಲವೇ ಅಥವಾ ಪರೀಕ್ಷೆ ತಪ್ಪಿಸಿಕೊಂಡರೇ ಎಂಬ ವಿವರ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT