ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಹಾಕಿ ರಾಷ್ಟ್ರೀಯ ಶಿಬಿರಕ್ಕೆ 33 ಸಂಭಾವ್ಯ ಆಟಗಾರ್ತಿಯರು

Published 8 ಏಪ್ರಿಲ್ 2024, 16:11 IST
Last Updated 8 ಏಪ್ರಿಲ್ 2024, 16:11 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಮೇ 16ರವರೆಗೆ ನಡೆಯುವ ಭಾರತ ಮಹಿಳಾ ಹಾಕಿ ರಾಷ್ಟ್ರೀಯ ಶಿಬಿರಕ್ಕೆ 33 ಸಂಭನೀಯರನ್ನು ಹಾಕಿ ಇಂಡಿಯಾ ಆಯ್ಕೆ ಮಾಡಿದೆ. ಸವಿತಾ ಪೂನಿಯಾ, ವಂದನಾ ಕಟಾರಿಯಾ ಮೊದಲಾದ ಅನುಭವಿಗಳೊಂದಿಗೆ ಹೊಸ ಮುಖಗಳಿಗೂ ಸ್ಥಾನ ಕಲ್ಪಿಸಲಾಗಿದೆ.

ಮುಂಬರುವ ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಟೂರ್ನಿಗೆ ಆಟಗಾರ್ತಿಯರನ್ನು ಗುರುತಿಸುವ ಭಾಗವಾಗಿ ಶಿಬಿರ ಆಯೋಜಿಸಲಾಗಿದೆ. ಮೇ 22ರಿಂದ ನಡೆಯುವ ಹಾಕಿ ಪ್ರೊ ಲೀಗ್‌ನಲ್ಲಿ ‌‌ಭಾರತ ಮಹಿಳಾ ತಂಡವು ಅರ್ಜೆಂಟೀನಾ, ಬೆಲ್ಜಿಯಂ, ಜರ್ಮನಿ ಮತ್ತು ಬ್ರಿಟನ್‌ ತಂಡಗಳನ್ನು ಎದುರಿಸಲಿದ್ದು, ಆ ನಿಟ್ಟಿನಲ್ಲಿ ಆ್ಯಂಟ್‌ವರ್ಪ್‌ (ಬೆಲ್ಜಿಯಂ) ಮತ್ತು ಲಂಡನ್‌ಗೆ ಪ್ರಯಾಣಿಸಲಿದೆ.

ಈಚೆಗೆ ನಡೆದ 14ನೇ ಸೀನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಮೂಲಕ ಉತ್ತಮ ಆಟಗಾರ್ತಿಯರನ್ನು ಆಯ್ಕೆ ಮಾಡಲು ಸಾಧ್ಯವಾಗಿದೆ. ಹೊಸ ತಂಡವು ಭವಿಷ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಹಾಕಿ ಇಂಡಿಯಾ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಹರ್ಮನ್ ಕ್ರೂಸ್ ಹೇಳಿದ್ದಾರೆ.‌

ಅನುಭವಿಗಳಾದ ಭಾರತ ತಂಡದ ನಾಯಕಿ, ಗೋಲ್‌ಕೀಪರ್‌ ಸವಿತಾ, ಡಿಫೆಂಡರ್ಸ್‌ ನಿಕ್ಕಿ ಪ್ರಧಾನ್, ಮಿಡ್-ಫೀಲ್ಡರ್‌ಗಳಾದ ಸಲಿಮಾ ಟೆಟೆ, ಅಜ್ಮಿನಾ ಕುಜೂರ್ ಮತ್ತು ನಿಶಾ ಸಂಭಾವ್ಯರ ತಂಡದಲ್ಲಿದ್ದಾರೆ. ಫಾರ್ವರ್ಡ್ ಆಟಗಾರ್ತಿಯರಾದ ಲಾಲ್ರೆಮ್ಸಿಯಾಮಿ, ಸಂಗೀತಾ ಕುಮಾರ್ ಮತ್ತು ಕಟಾರಿಯಾ ಕೂಡ ಸ್ಥಾನ ಪಡೆದಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ನಾಲ್ಕನೇ ಸ್ಥಾನ ಗಳಿಸಿದ್ದ ಭಾರತದ ಮಹಿಳಾ ತಂಡವು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾವು ತಂಡಕ್ಕೆ ಹೊಸಸ್ವರೂಪ ನೀಡಲು ಮುಂದಾಗಿದೆ.

22 ವರ್ಷದ ಮರೀನಾ ಲಾಲ್‌ರಮ್ಕಿ ಮತ್ತು 25 ವರ್ಷದ ಮನೀಶಾ ಚೌಹಾನ್ ಶಿಬಿರಕ್ಕೆ ಆಯ್ಕೆಯಾಗಿರುವ ಹೊಸಮುಖಗಳು. ಅವರು ರಾಷ್ಟ್ರೀಯ ಟೂರ್ನಿಯಲ್ಲಿ ಕ್ರಮವಾಗಿ ಮಿಜೋರಾಂ ಮತ್ತು ಮಣಿಪುರ ತಂಡವನ್ನು ಪ್ರತಿನಿಧಿಸಿದ್ದರು. 2017ರಲ್ಲಿ ವಿಶ್ವ ಲೀಗ್ ಸೆಮಿಫೈನಲ್‌ನಲ್ಲಿ ಸೀನಿಯರ್ ತಂಡದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಪ್ರೀತಿ ದುಬೆ ಶಿಬಿರಕ್ಕೆ ವಾಪಸಾಗಿದ್ದಾರೆ.

ಕಳೆದ ವರ್ಷದ ಜೂನಿಯರ್ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿದ್ದ ಗೋಲ್‌ಕೀಪರ್ ಮಾಧುರಿ ಕಿಂಡೊ, ಡಿಫೆಂಡರ್‌ಗಳಾದ ರೋಪ್ನಿ ಕುಮಾರಿ, ಪ್ರೀತಿ, ಮಿಡ್‌ಫೀಲ್ಡರ್ ಎಡುಲಾ ಜ್ಯೋತಿ ಮತ್ತು ಫಾರ್ವರ್ಡ್‌ಗಳಾದ ದೀಪಿಕಾ ಸೊರೆಂಗ್ ಮತ್ತು ರುತುಜಾ ಪಿಸಲ್ ಅವರೂ ಶಿಬಿರದಲ್ಲಿ ಸ್ಥಾನ ಪಡೆದಿದ್ದಾರೆ.

ಸಂಭಾವ್ಯ ಆಟಗಾರ್ತಿಯರು:

ಗೋಲ್‌ಕೀಪರ್ಸ್‌: ಸವಿತಾ ಪೂನಿಯಾ, ಬಿಚುದೇವಿ ಖರಿಬಮ್, ಬನ್ಸಾರಿ ಸೋಲಂಕಿ, ಮಾಧುರಿ ಕಿಂಡೊ.

ಡಿಫೆಂಡರ್ಸ್: ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಮೋನಿಕಾ, ರೋಪ್ನಿ ಕುಮಾರಿ, ಮಹಿಮಾ ಚೌಧರಿ, ಜ್ಯೋತಿ ಛತ್ರಿ, ಪ್ರೀತಿ.

ಮಿಡ್‌ಫೀಲ್ಡರ್‌ಗಳು: ಸಲೀಮಾ ಟೆಟೆ, ಮರೀನಾ ಲಾಲ್‌ರಮ್ಕಿ, ವೈಷ್ಣವಿ ಫಾಲ್ಕೆ, ನೇಹಾ, ಜ್ಯೋತಿ, ಎದುಲಾ ಜ್ಯೋತಿ, ಬಲ್ಜೀತ್ ಕೌರ್, ಮನೀಶಾ ಚೌಹಾನ್, ಅಕ್ಷತಾ ಅಬಾಸೊ ಧೇಕಳೆ, ಅಜ್ಮಿನಾ ಕುಜೂರ್, ನಿಶಾ.

ಫಾರ್ವರ್ಡ್‌ಗಳು: ಮುಮ್ತಾಜ್ ಖಾನ್, ಲಾಲ್ರೆಮ್ಸಿಯಾಮಿ, ಸಂಗೀತಾ ಕುಮಾರಿ, ದೀಪಿಕಾ, ಶರ್ಮಿಳಾ ದೇವಿ, ನವನೀತ್ ಕೌರ್, ದೀಪಿಕಾ ಸೊರೆಂಗ್, ಪ್ರೀತಿ ದುಬೆ, ವಂದನಾ ಕಟಾರಿಯಾ, ರುತುಜಾ  ಪಿಸಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT