ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮಿಂಚಿನಾಟಕ್ಕೆ ಬಸವಳಿದ ಅರ್ಜೆಂಟೀನಾ

ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ: ಹರ್ಮನ್‌ಪ್ರೀತ್ ಸಿಂಗ್, ಮನದೀಪ್ ಸಿಂಗ್ ತಲಾ ಒಂದು ಗೋಲು
Last Updated 24 ಜೂನ್ 2018, 16:10 IST
ಅಕ್ಷರ ಗಾತ್ರ

ಬ್ರೇಡಾ, ನೆದರ್‌ಲ್ಯಾಂಡ್ಸ್‌: ಭಾರತ ತಂಡವು ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿತು.

ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 2–1ರಿಂದ ಅರ್ಜೆಂಟೀನಾ ವಿರುದ್ಧ ಗೆದ್ದಿತು. ಹರ್ಮನ್‌ಪ್ರೀತ್ ಸಿಂಗ್ (17ನೇ ನಿಮಿಷ) ಅವರು ಫೀಲ್ಡ್‌ ಗೋಲ್ ಮತ್ತು ಮನದೀಪ್ ಸಿಂಗ್ (28ನೇ ನಿಮಿಷ) ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಹೊಡೆದರು. 30ನೇ ನಿಮಿಷದಲ್ಲಿ ಅರ್ಜೆಂಟೀನಾದ ಡ್ರ್ಯಾಗ್‌ಫ್ಲಿಕರ್ ಗೊಂಜೆಲೊ ಪೀಲ್ಲಟ್ ಗೋಲು ಗಳಿಸಿದರು.

ಪಂದ್ಯದ ಆರಂಭದಿಂದಲೇ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಭಾರತದ ಆಟಗಾರರು ಗೋಲು ಹೊಡೆಯುವ ಪ್ರಯತ್ನಗಳಿಗೆ ಅರ್ಜೆಂಟೀನಾ ರಕ್ಷಣಾ ಪಡೆಯು ತಡೆಯೊಡ್ಡಿತು. ಆದರೆ ಹರ್ಮನ್‌ಪ್ರೀತ್ ಸಿಂಗ್ ಅವರ ಚುರುಕಿನ ಆಟವು 17ನೇ ನಿಮಿಷದಲ್ಲಿ ಫಲ ಕೊಟ್ಟಿತು. ಮೂವರು ರಕ್ಷಣಾ ಆಟಗಾರರು ಮತ್ತು ಗೋಲುಕೀಪರ್‌ನನ್ನು ವಂಚಿಸಿದ ಅವರು ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದ ರೀತಿ ಸೊಗಸಾಗಿತ್ತು. ಭಾರತ ತಂಡದ ಪಾಳಯದಲ್ಲಿ ಸಂಭ್ರಮ ಗರಿಗೆದರಿತು.

26ನೇ ನಿಮಿಷದಲ್ಲಿ ಕಾಲಿಗೆ ಚೆಂಡು ಬಡಿದು ಗಾಯಗೊಂಡ ಸುರೇಂದರ್ ಕುಮಾರ್ ಚಿಕಿತ್ಸೆ ಪಡೆಯಲು ತೆರಳಿದರು. ಅದಾಗಿ ೆರಡು ನಿಮಿಷಗಳ ನಂತರ ಲಭಿಸಿದ ಪೆನಾಲ್ಟಿ ಕಾರ್ನರ್‌ ಅನ್ನು ಮನದೀಪ್ ಸಿಂಗ್ ಗೋಲಿನಲ್ಲಿ ಪರಿವರ್ತಿಸಿದರು. ಮೊದಲಾರ್ಧದ ವಿಶ್ರಾಂತಿಗೆ ತೆರಳುವ ಕೆಲವೇ ಸೆಕೆಂಡುಗಳ ಮುನ್ನ ಅರ್ಜೆಂಟೀನಾದ ಗೊಂಜೆಲೊ ಕೈಚಳಕ ಮೆರೆದರು. ಕೆಲವೇ ಅಡಿಗಳಷ್ಟು ದೂರದಿಂದ ಅವರು ಹೊಡೆದ ಚೆಂಡು ಮಿಂಚಿನ ವೇಗದಲ್ಲಿ ಸಾಗಿ ಗೋಲುಪೆಟ್ಟಿಗೆಯೊಳಗೆ ಸೇರಿತು.

ನಂತರದ ಅವಧಿಯಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಬಹಳಷ್ಟುಪ್ರಯಾಸಪಟ್ಟವು. ಆದರೆ ಎರಡೂ ತಂಡಗಳ ರಕ್ಷಣಾ ಆಟಗಾರರು ಅಮೋಘವಾಗಿ ಆಡಿದರು. ಇದರಿಂದಾಗಿ ದ್ವಿತೀಯಾರ್ಧದಲ್ಲಿ ಒಂದೂ ಗೋಲು ದಾಖಲಾಗಲಿಲ್ಲ.

ಪಿ.ಆರ್. ಶ್ರೀಜೇಶ್ ನಾಯಕತ್ವದ ಭಾರತ ತಂಡವು ಶನಿವಾರ 4–0 ಗೋಲುಗಳಿಂದ ಪಾಕಿಸ್ತಾನ ತಂಡವನ್ನು ಹಣಿದಿತ್ತು. 27ರಂದು ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT