ಸಿಂಗಪುರ (ಪಿಟಿಐ): ಭಾರತದ ಸ್ಪರ್ಧಿಗಳು ಇಲ್ಲಿ ನಡೆದ ಏಷ್ಯಾ ಕಪ್ ಸ್ಟೇಜ್–3 ಆರ್ಚರಿ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳ ಫೈನಲ್‌ನಲ್ಲಿ ಕೊರಿಯಾ ಮತ್ತು ಚೀನಾ ಸ್ಪರ್ಧಿಗಳ ಎದುರು ಮುಗ್ಗರಿಸಿದರು.
ಆರು ಬೆಳ್ಳಿ ಮತ್ತು ಒಂದು ಕಂಚಿನ ಪದಕದ ಮೂಲಕ ಭಾರತ ತಂಡದವರು ಪದಕ ಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿದರು. 4 ಚಿನ್ನ, 1 ಬೆಳ್ಳಿ ಮತ್ತು 2 ಕಂಚು ಗೆದ್ದುಕೊಂಡ ಕೊರಿಯಾದವರು ಅಗ್ರಸ್ಥಾನ ಪಡೆದರು. 4 ಚಿನ್ನ ಹಾಗೂ 4 ಕಂಚಿನೊಂದಿಗೆ ಚೀನಾ ಎರಡನೇ ಸ್ಥಾನ ಗಳಿಸಿತು.
ಶನಿವಾರ ನಡೆದ ತನ್ನ ಮೊದಲ ಸ್ಪರ್ಧೆಯ ಫೈನಲ್‌ನಲ್ಲಿ ಭಾರತಕ್ಕೆ ನಿರಾಸೆ ಉಂಟಾಯಿತು. ಸಾಕ್ಷಿ ಚೌಧರಿ, ಪ್ರಗತಿ ಮತ್ತು ದೀಪಶಿಖಾ ಅವರನ್ನೊಳಗೊಂಡ ಕಾಂಪೌಂಡ್ ಮಹಿಳೆಯರ ತಂಡವು 232–234 ರಲ್ಲಿ ಕೊರಿಯಾ ಎದುರು ಅಲ್ಪ ಅಂತರದಲ್ಲಿ ಪರಾಭವಗೊಂಡಿತು.
ಕಾಂಪೌಂಡ್ ಪುರುಷರ ತಂಡದವರು ಕೊರಿಯಾ ಕೈಯಲ್ಲಿ 235–238 ರಲ್ಲಿ ಮಣಿದರು.
ರಿಕರ್ವ್ ಮಹಿಳೆಯರ ತಂಡ ವಿಭಾಗದ ಫೈನಲ್‌ನಲ್ಲೂ ಕೊರಿಯಾ ತಂಡ, ಭಾರತದ ಚಿನ್ನದ ಕನಸಿಗೆ ಅಡ್ಡಿಯಾಯಿತು. ರಿಧಿ, ರುಮಾ ಮತ್ತು ಅದಿತಿ ಜೈಸ್ವಾಲ್ ಅವರು 3–5 ರಲ್ಲಿ ಕೊರಿಯಾ ಆಟಗಾರ್ತಿಯರ ಎದುರು ಸೋತರು.
ರಿಕರ್ವ್ ವಿಭಾಗದ ಫೈನಲ್‌ನಲ್ಲಿ ಪುರುಷರ ತಂಡ 1–5 ರಲ್ಲಿ ಚೀನಾ ಎದುರು ಪರಾಭವಗೊಂಡಿತು. ಪುರುಷರ ವೈಯಕ್ತಿಕ ರಿಕರ್ವ್ ವಿಭಾಗದ ಫೈನಲ್‌ನಲ್ಲಿ ಪಾರ್ಥ್ ಸಾಳುಂಕೆ 2–6 ರಲ್ಲಿ ಚೀನಾದ ಕ್ವಿ ಕ್ಸಿಯಾಂಗ್‌ಶುವೊ ಎದುರು ಮಣಿದರು.
ಮಹಿಳೆಯರ ವೈಯಕ್ತಿಕ ಕಾಂಪೌಂಡ್ ವಿಭಾಗದ ಫೈನಲ್‌ನಲ್ಲಿ ರುಮಾ ಬಿಶ್ವಾಸ್ 2–6 ರಲ್ಲಿ ಚೀನಾದ ಆನ್ ಕ್ವಿಜುವಾನ್ ಎದುರು ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.
ಮಹಿಳೆಯರ ಕಾಂಪೌಂಡ್ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ಪ್ರಗತಿ ಅವರು 147–146 ರಲ್ಲಿ ಭಾರತದವರೇ ಆದ ದೀಪಶಿಖಾ ಅವರನ್ನು ಮಣಿಸಿದರು.