ನವದೆಹಲಿ: ಇದೇ ತಿಂಗಳ 28 ರಿಂದ ಸೆಪ್ಟೆಂಬರ್ 8ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್ ಕೂಟದಲ್ಲಿ ಪಾಲ್ಗೊಳ್ಳುವ ಭಾರತ ಪ್ಯಾರಾಲಿಂಪಿಕ್ಸ್ ತಂಡಕ್ಕೆ ಶುಕ್ರವಾರ ಬೀಳ್ಕೊಡುಗೆ ನೀಡಲಾಯಿತು.
ಭಾರತ ಪ್ಯಾರಾಲಿಂಪಿಕ್ ಸಮಿತಿ (ಪಿಸಿಐ) ಮತ್ತು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಈ ಸಮಾರಂಭ ಆಯೋಜಿಸಿತ್ತು. ವಿವಿಧ 12 ಕ್ರೀಡೆಗಳಲ್ಲಿ ಪಾಲ್ಗೊಳ್ಳಲು 84 ಮಂದಿ ಪ್ಯಾರಾ ಕ್ರೀಡಾಪಟುಗಳು ಪ್ಯಾರಿಸ್‌ಗೆ ತೆರಳಲಿದ್ದಾರೆ.
ಭಾರತದ ಸ್ಪರ್ಧಿಗಳು– ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕೆನೊಯಿಂಗ್, ಸೈಕ್ಲಿಂಗ್, ಅಂಧರ ಜುಡೊ, ಪವರ್‌ಲಿಫ್ಟಿಂಗ್, ರೋಯಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.
‘ಅಡೆತಡೆಗಳನ್ನು ದಾಟಿ, ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಅಸಾಧಾರಣ ಸಾಮರ್ಥ್ಯವನ್ನು ನಮ್ಮ ಪ್ಯಾರಾ ಅಥ್ಲೀಟುಗಳು ಹೊಂದಿದ್ದಾರೆ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಸಿದ್ಧತೆಗಾಗಿ ಅಸಾಧಾರಣ ಮನೋಸ್ಥೈರ್ಯ ಮತ್ತು ಅವಿರತ ಪ್ರಯತ್ನವನ್ನು ಅವರು ನಡೆಸಿದ್ದಾರೆ’ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಹೇಳಿಕೆಯಲ್ಲಿ ಶ್ಲಾಘಿಸಿದ್ದಾರೆ.
‘ಹೆಚ್ಚಿನ ಅಥ್ಲೀಟುಗಳು ಖೇಲೊ ಇಂಡಿಯಾ ಉಪಕ್ರಮದ ಲಾಭ ಪಡೆದಿದ್ದಾರೆ. ಈ ಯೋಜನೆಯಲ್ಲಿ ತೊಡಗಿದ ಅಥ್ಲೀಟುಗಳಲ್ಲಿ ಬಹುಪಾಲು ಮಂದಿ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಹೋಗುತ್ತಿದ್ದಾರೆ. ಅತ್ಯುನ್ನತ ಮಟ್ಟದಲ್ಲಿ ಸಾಧನೆ ತೋರಲು ಅವರಿಗೆ ಬೇಕಾದ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ’ ಎಂದು ಮಾಂಡವೀಯ ತಿಳಿಸಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 19 ಪದಕಗಳನ್ನು ಗೆದ್ದುಕೊಂಡಿತ್ತು. ‘ದೇಶದ ಅಥ್ಲೀಟುಗಳು ಈ ಬಾರಿಯೂ ಉತ್ತಮ ಪ್ರದರ್ಶನ ನೀಡಲಿದ್ದಾರೆ’ ಎಂದು ಪಿಸಿಐ ಅಧ್ಯಕ್ಷ ದೇವೇಂದ್ರ ಜಝಾರಿಯಾ ವಿಶ್ವಾಸ ವ್ಯಕ್ತಪಡಿಸಿದರು.
‘ಸಮರ್ಪಣೆ ಮತ್ತು ಶ್ರದ್ಧೆಯಿಂದ ತರಬೇತಿಯಲ್ಲಿ ತೊಡಗಿಸಿಕೊಂಡ ನಮ್ಮ ಅಥ್ಲೀಟುಗಳ ಬಗ್ಗೆ ಅತೀವ ಹೆಮ್ಮೆಯಿದೆ’ ಎಂದರು.
ಸಂಗೀತ ನಿರ್ದೇಶಕ ವಿವೇಕ್ ಅಭಿಷೇಕ್ ರಚಿಸಿರುವ ‘ಮಛಾ ಧೂಮ್..’ ಎಂಬ ವಿಶೇಷ ಧ್ಯೇಯಗೀತೆಯನ್ನು ಈ ವೇಳೆ ಬಿಡುಗಡೆ ಮಾಡಲಾಯಿತು.