ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಲೀಗ್ ಹಾಕಿ ಟೂರ್ನಿ: ಭಾರತಕ್ಕೆ ಶೂಟೌಟ್‌ನಲ್ಲಿ ಜಯ

ಎಫ್‌ಐಎಚ್‌ ಪ್ರೊ ಲೀಗ್ ಹಾಕಿ: ಮನದೀಪ್, ಲಲಿತ್ ಮಿಂಚು
Published 22 ಮೇ 2024, 16:24 IST
Last Updated 22 ಮೇ 2024, 16:24 IST
ಅಕ್ಷರ ಗಾತ್ರ

ಆ್ಯಂಟ್ವರ್ಪ್, ಬೆಲ್ಜಿಯಂ: ಭಾರತ ಹಾಕಿ ತಂಡವು ಇಲ್ಲಿ ಆರಂಭವಾದ ಪ್ರೊ ಲೀಗ್ ಹಾಕಿ ಟೂರ್ನಿಯ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಶೂಟೌಟ್‌ನಲ್ಲಿ ಜಯಸಾಧಿಸಿತು. 

ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 5–4ರಿಂದ ಅರ್ಜೆಂಟೀನಾ ತಂಡವನ್ನು ಮಣಿಸಿತು.

ಮನದೀಪ್ ಸಿಂಗ್‌ (11ನೇ ನಿಮಿಷ) ಮತ್ತು ಲಲಿತ್  ಕುಮಾರ್ ಉಪಾಧ್ಯಾಯ ಅವರು ತಲಾ ಎರಡು ಫೀಲ್ಡ್ ಗೋಲು ಗಳಿಸಿದರು.  

ಇದಕ್ಕುತ್ತರವಾಗಿ ಅರ್ಜಿಂಟೀನಾದ ಲೂಕಾಸ್ ಮಾರ್ಟಿನೇಜ್ (20ನೇ ನಿಮಿಷ) ಹಾಗೂ ಥಾಮಸ್ ಡೊಮೆನ್ (60ನೇ ನಿ) ತಲಾ ಒಂದು ಗೋಲು ಗಳಿಸಿದರು. ಇದರಿಂದಾಗಿ ಸಮಬಲವಾಯಿತು. 

ಶೂಟೌಟ್‌ನಲ್ಲಿ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಸುಖಜೀತ್ ಸಿಂಗ್ ತಲಾ ಎರಡು ಗೋಲು ಗಳಿಸಿದರು. ಅಭಿಷೇಕ್ ಒಂದು ಗೋಲು ಹೊಡೆದರು. 

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ತುರುಸಿನ ಪೈಪೋಟಿ ನಡೆಸಿದವು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಭಾರತ ತಂಡವು ಮೊದಲ ಕ್ವಾರ್ಟರ್‌ನಲ್ಲಿ ಬಿಗಿಹಿಡಿತ ಸಾಧಿಸಿತು. 5ನೇ ನಿಮಿಷದಲ್ಲಿ ಸಂಜಯ್ ಗೋಲು ಗಳಿಸುವ ಪ್ರಯತ್ನ ಮಾಡಿದರು. ಆದರೆ ಅರ್ಜೆಂಟೀನಾದ ಗೋಲ್‌ಕೀಪರ್ ಥಾಮಸ್ ಸ್ಯಾಂಟಿಯಾಗೊ ಚುರುಕಾಗಿ ಪ್ರತಿಕ್ರಿಯಿಸಿ ಚೆಂಡನ್ನು ತಡೆದರು.

ಇದಾಗಿ ಆರು ನಿಮಿಷಗಳ ನಂತರ ಭಾರತದ ಮನದೀಪ್ ಅವರ ಪ್ರಯತ್ನಕ್ಕೆ ಗೋಲು ಒಲಿಯಿತು. ರಾಜಕುಮಾರ್ ಪಾಲ್ ಕೊಟ್ಟ ಪಾಸ್ ಪಡೆದ ಮನದೀಪ್ ಯಶಸ್ವಿಯಾದರು. 

ನಂತರದ 15ನಿಮಿಷದಲ್ಲಿ ಲಾಸ್ ಲಿಯೊನೆಸ್ ಬಳಗವು ಗೋಲು ಗಳಿಕೆಗಾಗಿ ಆಕ್ರಮಣಶೀಲ ಆಟ ತೋರಿತು. ಆದರೆ ಅನುಭವಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಮತ್ತು ತಂಡದ ರಕ್ಷಣಾ ಆಟಗಾರರು ಎದುರಾಳಿಗಳ ದಾಳಿಯನ್ನು ಹಿಮ್ಮೆಟ್ಟಿಸಿದರು.

ಅರ್ಜಿಂಟೀನಾ ತಂಡವು ಮೂರು ಪೆನಾಲ್ಟಿ ಪಡೆಯಿತು.  ಶ್ರೀಜೇಶ್ ಅವರ  ಉತ್ತಮ ಕೀಪಿಂಗ್ ಮುಂದೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ.  ಎರಡನೇ ಕ್ವಾರ್ಟರ್‌ನ ಕೊನೆಯ ಐದು ನಿಮಿಷಗಳಲ್ಲಿ ಸತತ ಮೂರು ಪೆನಾಲ್ಟಿಕಾರ್ನರ್ ಅವಕಾಶ ಗಿಟ್ಟಿಸಿದ ಭಾರತವು ಗೋಲು ಗಳಿಸಲು ವಿಫಲವಾಯಿತು. 

ಮೂರನೇ ಕ್ವಾರ್ಟರ್‌ನಲ್ಲಿ ಲಲಿತ್ ಕುಮಾರ್ ಅವರು ಜರ್ಮನ್‌ಪ್ರೀತ್ ಸಿಂಗ್ ಕೊಟ್ಟ ಪಾಸ್ ಪಡೆದು ಗೋಲು ಗಳಿಸಿದರು.  ಇದರಿಂದಾಗಿ 2–0 ಮುನ್ನಡೆ ಲಭಿಸಿತು.

ಆದರೆ ಪಂದ್ಯ ಮುಕ್ತಾಯದ ಹೂಟರ್ ಸದ್ದು ಮಾಡುವ ಮುನ್ನ ಎರಡು ಪೆನಾಲ್ಟಿ ಕಾರ್ನರ್‌ಗಳಲ್ಲಿ ಅರ್ಜೆಂಟೀನಾ ಗೋಲು ಗಳಿಸಿತು. ಡೊಮೆನ್ ಅವರ ಫ್ಲಿಕ್‌ಗಳ ವೇಗವನ್ನು ಅರಿಯುವಲ್ಲಿ ಶ್ರೀಜೇಶ್ ಕೂಡ ವಿಫಲರಾದರು. ಇದರಿಂದಾಗಿ ಶೂಟೌಟ್ ಘೋಷಿಸಲಾಯಿತು.

ಶುಕ್ರವಾರ ನಡೆಯಲಿರುವ ಯುರೋಪಿಯನ್ ಲೆಗ್‌ ನಲ್ಲಿ ಭಾರತ ತಂಡವು ಬೆಲ್ಜಿಯಂ ವಿರುದ್ಧ ಆಡಲಿದೆ. 

ಮಹಿಳಾ ತಂಡಕ್ಕೆ ಸೋಲು

ಭಾರತ ಮಹಿಳಾ ತಂಡವು ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ 0–5ರಿಂದ ಅರ್ಜೆಂಟೀನಾ ತಂಡದ ಎದುರು ಸೋತಿತು.  ಅರ್ಜೆಂಟೀನಾದ ಜೂಲಿಟಾ ಜಂಕುನಾಸ್ (53ನೇ 59ನೇ ನಿಮಿಷ) ಆಗಸ್ಟಿನಾ ಗಾರ್ಜೆಲಿನಿ (13ನೇ ನಿ) ವ್ಯಾಲೆಂಟಿನಾ ರೆಪೊಸೊ (24ನೇ ನಿ) ಹಾಗೂ ವಿಕ್ಟೋರಿಯಾ ಮಿರಾಂದಾ (41ನೇ ನಿ) ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT