ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿ: ಆಸ್ಟ್ರೇಲಿಯಾಕ್ಕೆ ಭಾರಿ ಜಯ

Published 6 ಏಪ್ರಿಲ್ 2024, 15:56 IST
Last Updated 6 ಏಪ್ರಿಲ್ 2024, 15:56 IST
ಅಕ್ಷರ ಗಾತ್ರ

ಪರ್ತ್; ಉತ್ತಮ ಲಯದಲ್ಲಿರುವ ಭಾರತ ಪುರುಷರ ಹಾಕಿ ತಂಡವು ಕನಿಷ್ಠ ಉತ್ತಮ ಹೋರಾಟ ನೀಡುವ ನಿರೀಕ್ಷೆಯಿತ್ತು. ಆದರೆ, ಶನಿವಾರ ಇಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 1-5 ಅಂತರದಿಂದ ಸೋಲನುಭವಿಸಿತು.

ಆಸ್ಟ್ರೇಲಿಯಾ ಆಟಗಾರರು ಆರಂಭದಿಂದ ಅಂತ್ಯದವರೆಗೆ ಪಂದ್ಯದ ಗತಿಯನ್ನು  ನಿಯಂತ್ರಿಸಿದರು. ಅಂತಿಮ ಕ್ವಾರ್ಟರ್‌ನಲ್ಲಿ ಭಾರತ ತಂಡ ಪ್ರತಿರೋಧ ತೋರಿದರೂ, ಅಷ್ಟರಲ್ಲಿ ಸಮಯ ಮೀರಿತ್ತು. 

ಟಾಮ್ ವಿಕ್ಹ್ಯಾಮ್ (20 ಮತ್ತು 38ನೇ ನಿಮಿಷ) ಎರಡು ಗೋಲು ಗಳಿಸಿದರೆ, ಟಿಮ್ ಬ್ರಾಂಡ್ (3ನೇ ನಿಮಿಷ), ಜೋಯಲ್ ರಿಂಟಾಲಾ (37ನೇ ನಿಮಿಷ) ಮತ್ತು ಫ್ಲಿನ್ ಒಗಿಲ್ವಿ (57ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು.  

ಭಾರತದ ಪರ ಗುರ್ಜಂತ್ ಸಿಂಗ್ 47ನೇ ನಿಮಿಷ ಏಕೈಕ ಗೋಲು ಗಳಿಸಿದರು. 

ಆರಂಭದಿಂದಲೂ ಆಕ್ರಮಣದ ಆಟ ಪ್ರದರ್ಶಿಸಿದ ಆತಿಥೇಯ ತಂಡ ಮೂರನೇ ನಿಮಿಷದಲ್ಲಿ ಬ್ರಾಂಡ್ ಅವರು ಗಳಿಸಿದ ಗೋಲಿನ ಮೂಲಕ ಮುನ್ನಡೆ ಸಾಧಿಸಿತು. 

ಎಂಟನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಆಸ್ಟ್ರೇಲಿಯಾಕ್ಕೆ ಗೋಲ್‌ಕೀಪರ್ ಶ್ರೀಜೇಶ್ ಅವರ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಒಂದು ನಿಮಿಷದ ನಂತರ, ಆಸ್ಟ್ರೇಲಿಯಾದ ಎರಡನೇ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲೂ ಗುರಿ ತಲುಪಲು ಬಿಡಲಿಲ್ಲ. 

10ನೇ ನಿಮಿಷ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕರೂ ಅದನ್ನು ಪರಿವರ್ತಿಸಿಕೊಳ್ಳುವಲ್ಲಿ ವಿಫಲವಾಯಿತು.

ಆದರೆ ಪಂದ್ಯ ಮುಂದುವರಿಯುತ್ತಿದ್ದಂತೆ ಆಸ್ಟ್ರೇಲಿಯಾ, ಎದುರಾಳಿಯ ರಕ್ಷಣಾ ಕೋಟೆಗೆ ಪದೇ ಪದೇ ದಾಳಿಯಿಟ್ಟಿತು. ಆತಿಥೇಯ ತಂಡವು ಎರಡನೇ ಕ್ವಾರ್ಟ್‌ರ್‌ಗೆ ಕೇವಲ ಐದು ನಿಮಿಷಗಳಿರುವಾಗ ವಿಕ್ಹ್ಯಾಮ್ ಗಳಿಸಿದ ಗೋಲಿನಿಂದ ಮುನ್ನಡೆಯನ್ನು ಹೆಚ್ಚಿಸಿತು. ಭಾರತಕ್ಕೆ ಲಯಕ್ಕೆ ಮರಳಲು ಆಸ್ಟ್ರೇಲಿಯಾ ಬಿಡಲಿಲ್ಲ.

51ನೇ ನಿಮಿಷ ಭಾರತಕ್ಕೆ ಬೆನ್ನುಬೆನ್ನಿಗೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕರೂ ನಾಯಕ ಹರ್ಮನ್ ಪ್ರೀತ್ ಸಿಂಗ್ ಗೋಲು ಗಳಿಸಲು ವಿಫಲರಾದರು.

ಭಾನುವಾರ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT