ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಷ್ಯನ್ ರಿಲೇ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಚಿನ್ನ

Published 20 ಮೇ 2024, 16:07 IST
Last Updated 20 ಮೇ 2024, 16:07 IST
ಅಕ್ಷರ ಗಾತ್ರ

ಬ್ಯಾಂಕಾಕ್: ಭಾರತದ ಮಿಶ್ರ 4X400 ಮೀಟರ್‌ ರಿಲೇ ತಂಡವು ಏಷ್ಯನ್ ರಿಲೇ ಚಾಂಪಿಯನ್‌ಷಿಪ್‌ನ ಚೊಚ್ಚಲ ಆವೃತ್ತಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿತು. ಆದರೆ, ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಮಟ್ಟದ ಗುರಿ ತಲುಪುವಲ್ಲಿ ವಿಫಲವಾಯಿತು.  

ಮುಹಮ್ಮದ್ ಅಜ್ಮಲ್‌, ಜ್ಯೋತಿಕಾ ಶ್ರೀ ದಂಡಿ, ಅಮೋಜ್ ಜಾಕೋಬ್ ಮತ್ತು ಶುಭಾ ವೆಂಕಟೇಶನ್ ಅವರನ್ನೊಳಗೊಂಡ ತಂಡ 3 ನಿಮಿಷ 14.12 ಸೆಕೆಂಡುಗಳಲ್ಲಿ ಗುರಿ ತಲುಪಿತು. ಕಳೆದ ವರ್ಷ ಹಾಂಗೌಝೌ  ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಭಾರತ ತಂಡ 3 ನಿಮಿಷ 14.34 ಸೆಕೆಂಡುಗಳಲ್ಲಿ ಗುರಿ ತಲುಪಿತ್ತು.

ರಿಲೇ ಓಟದ ಎಲ್ಲಾ ನಾಲ್ಕು ಲೆಗ್‌ಗಳಲ್ಲೂ ಭಾರತ ಮುನ್ನಡೆ ಸಾಧಿಸಿತ್ತು. ಶ್ರೀಲಂಕಾ (3 ನಿಮಿಷ 17 ಸೆ.) ಹಾಗೂ ವಿಯೆಟ್ನಾಂ (3 ನಿಮಿಷ 18.45 ಸೆ) ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆಯಿತು.

ಮಿಶ್ರ 4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಕೇವಲ ಹದಿನಾರು ತಂಡಗಳು ಮಾತ್ರ ಸ್ಪರ್ಧಿಸುವುದರಿಂದ ಭಾರತವು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಕಠಿಣವಾಗಿದೆ.

ಈ ತಿಂಗಳ ಆರಂಭದಲ್ಲಿ ಬಹಾಮಾಸ್‌ನ ನೌಸಾದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ರಿಲೇಗಳಲ್ಲಿ ಹದಿನಾಲ್ಕು ಮಿಶ್ರ 4×400 ಮಿ. ತಂಡಗಳು ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿವೆ. ಜೂನ್ 30ರೊಳಗೆ ದೇಶಗಳ ಅತ್ಯುತ್ತಮ ಸಮಯದ ಆಧಾರದ ಮೇಲೆ ಕೇವಲ ಎರಡು ಸ್ಥಾನಗಳನ್ನು ಭರ್ತಿ ಮಾಡಲು ಮಾತ್ರ ಉಳಿದಿದೆ.

ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವ ಪಟ್ಟಿಯಲ್ಲಿ ಜೆಕ್ ಗಣರಾಜ್ಯ (3ನಿ 11.98 ಸೆ) ಮತ್ತು ಇಟಲಿ (3ನಿ 13.56 ಸೆ) ಕ್ರಮವಾಗಿ  15 ಮತ್ತು 16ನೇ ಸ್ಥಾನದಲ್ಲಿವೆ.  

ಜೂನ್ 30ರ ಗಡುವಿನ ಮೊದಲು ಮಿಶ್ರ 4×400 ಮೀಟರ್ ರಿಲೇ ತಂಡವನ್ನು ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಕಳುಹಿಸಲು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ಐ) ಪರಿಗಣಿಸಬಹುದು.

ಎರಡನೇ ದಿನವಾದ ಮಂಗಳವಾರ ಪುರುಷರ ಮತ್ತು ಮಹಿಳೆಯರ 4×400 ಮೀಟರ್ ರಿಲೇ ರೇಸ್‌ನಲ್ಲಿ ಭಾರತ ಸ್ಪರ್ಧಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT