ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸವಾಲು ಎದುರಿಸುವ ವಿಶ್ವಾಸ: ಭಾರತ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ

‘ಐಒಎ ಆಡಳಿತದಲ್ಲಿ ಸುಧಾರಣೆ‌: ನನ್ನ ಗುರಿ ಸ್ಪಷ್ಟ’
Last Updated 18 ಮಾರ್ಚ್ 2023, 18:41 IST
ಅಕ್ಷರ ಗಾತ್ರ

ಬೆಂಗಳೂರು: ‘ಅಥ್ಲೆಟಿಕ್‌ ಜೀವನದ ಆರಂಭದಿಂದಲೇ ಅಡೆತಡೆ ಎದುರಿಸಿಕೊಂಡು ಬಂದವಳು ನಾನು. ಆದ್ದರಿಂದ ಕ್ರೀಡೆಯ ಆಡಳಿತದಲ್ಲಿ ಎದುರಾಗುವ ಅಡ್ಡಿಗಳನ್ನೂ ಎದುರಿಸುವ ವಿಶ್ವಾಸವಿದೆ’ ಎಂದು ಭಾರತ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷೆಯಾಗಿರುವ ದಿಗ್ಗಜ ಅಥ್ಲೀಟ್‌ ಪಿ.ಟಿ.ಉಷಾ ಹೇಳಿದ್ದಾರೆ.

ಲಿಟ್ಲ್‌ ಮಿಲೆನಿಯಂ ಎಜುಕೇಷನ್‌ ಪ್ರೈವೇಟ್‌ ಲಿಮಿಟೆಡ್‌ ಇಲ್ಲಿ ಆಯೋಜಿಸಿರುವ ‘ಮಿಲೆನಿಯಂ ಕಿಡ್ಸ್‌ ಮ್ಯಾರಥಾನ್‌’ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ಕೇರಳದಲ್ಲಿರುವ ಉಷಾ ಸ್ಕೂಲ್‌ ಆಫ್‌ ಅಥ್ಲೆಟಿಕ್ಸ್‌ಅನ್ನು ನಡೆಸಿಕೊಂಡು ಹೋಗಲೂ ಅಡ್ಡಿ ಎದುರಾಗುತ್ತಿದೆ. ಭಾರತ ಒಲಿಂಪಿಕ್‌ ಸಂಸ್ಥೆಯನ್ನು ಮುನ್ನಡೆಸುವುದರಲ್ಲೂ ಸವಾಲು ಇದೆ. ನಾನು ಯಾವುದೇ ಕೆಲಸ ಮಾಡುವಾಗಲೂ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡಿರುತ್ತೇನೆ. ಐಒಎ ಅಧ್ಯಕ್ಷೆಯಾಗುವಾಗಲೂ ಸ್ಪಷ್ಟ ಗುರಿ ಇಟ್ಟುಕೊಂಡಿದ್ದು, ಅದನ್ನು ಈಡೇರಿಸಲು ಪ್ರಯತ್ನಿಸುವೆ’ ಎಂದಿದ್ದಾರೆ.

‘ಕ್ರೀಡೆಯ ಒಳಗೆ ಮತ್ತು ಹೊರಗೆ ಏನು ನಡೆಯುತ್ತಿದೆ ಎಂಬುದು ಚೆನ್ನಾಗಿ ಬಲ್ಲೆ. ನಾನು ಅಧಿಕಾರ ವಹಿಸಿಕೊಂಡಾಗ ಐಒಎಗೆ ಸಂಬಂಧಿಸಿದಂತೆ ಸುಮಾರು 251 ಪ್ರಕರಣಗಳು ಇದ್ದವು. ಈಗ ಅವುಗಳ ಸಂಖ್ಯೆ 80ಕ್ಕೆ ಇಳಿದಿದೆ. ಎಲ್ಲವೂ ಸರಿ ಹೋಗಲು ಅಲ್ಪ ಸಮಯ ಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ.

1,500 ಮಕ್ಕಳು ಪಾಲ್ಗೊಳ್ಳುವ ನಿರೀಕ್ಷೆ: ಲಿಟ್ಲ್‌ ಮಿಲೆನಿಯಂ ಎಜುಕೇಷನ್‌ ಪ್ರೈವೇಟ್‌ ಲಿಮಿಟೆಡ್‌ ಉಪಾಧ್ಯಕ್ಷ ಆರ್.ಆನಂದ್‌ ಮಾತನಾಡಿ, ‘ಮಕ್ಕಳಲ್ಲಿ ಎಳೆ ವಯಸ್ಸಿ ನಲ್ಲೇ ಕ್ರೀಡೆ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ‘ಕಿಡ್ಸ್‌ ಮ್ಯಾರಥಾನ್‌’ ಆಯೋಜಿಸಲಾಗಿದೆ. ‘ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಓಟ’ ಎಂಬ ಘೋಷವಾಕ್ಯದೊಂದಿಗೆ ನಡೆಯಲಿದೆ’ ಎಂದರು. ‘ಅಶೋಕನಗರದ ಡಿಸೋಜಾ ಬಡಾವಣೆಯಲ್ಲಿರುವ ಸೇಂಟ್‌ ಜೋಸೆಫ್ಸ್‌ ಇಂಡಿಯನ್ ಹೈಸ್ಜೂಲ್‌ ಮೈದಾನದಲ್ಲಿ ಭಾನುವಾರ ಬೆಳಿಗ್ಗೆ 6.30ಕ್ಕೆ ಓಟ ನಡೆಯಲಿದ್ದು, 1,500ಕ್ಕೂ ಅಧಿಕ ಮಕ್ಕಳು ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT