ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ | ಭಾರತ ವನಿತೆಯರಿಗೆ ಚೊಚ್ಚಲ ಚಿನ್ನ

ಏಷ್ಯನ್ ಟೀಮ್ ಚಾಂಪಿಯನ್‌ಷಿಪ್: ಅನ್ಮೋಲ್, ಸಿಂಧು ಅಮೋಘ ಆಟ
Published 18 ಫೆಬ್ರುವರಿ 2024, 13:24 IST
Last Updated 18 ಫೆಬ್ರುವರಿ 2024, 13:24 IST
ಅಕ್ಷರ ಗಾತ್ರ

ಶಾ ಆಲಂ, ಮಲೇಷ್ಯಾ: ಭಾರತದ ಕೋಟ್ಯಂತರ ಕ್ರೀಡಾಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಮಹಿಳಾ ಬ್ಯಾಡ್ಮಿಂಟನ್ ತಂಡವು ಏಷ್ಯಾ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ದಾಖಲೆ ಮಾಡಿತು.

ಭಾನುವಾರ ನಡೆದ ಫೈನಲ್‌ನಲ್ಲಿ  ಭಾರತ ತಂಡವು ಯುವ ಆಟಗಾರ್ತಿ ಅನ್ಮೋಲ್ ಖರ್ಬ್ ಅವರ ಅಮೋಘ ಅಟದ ಬಲದಿಂದ 3–2ರಿಂದ ಥಾಯ್ಲೆಂಡ್ ವಿರುದ್ಧ ರೋಚಕ ಜಯ ಸಾಧಿಸಿತು.  ತಂಡ ವಿಭಾಗದಲ್ಲಿ ಭಾರತದ ವನಿತೆಯರು ಗೆದ್ದ ಮೊಟ್ಟಮೊದಲ ಪ್ರಶಸ್ತಿ ಇದಾಗಿದೆ.

ಇದರೊಂದಿಗೆ ಏಪ್ರಿಲ್ 28 ರಿಂದ ಮೇ ಐದರವರೆಗೆ ಚೀನಾದಲ್ಲಿ ನಡೆಯಲಿರುವ ಊಬರ್ ಕಪ್ ಟೂರ್ನಿಯಲ್ಲಿ ಉನ್ನತ ಸಾಧನೆ ಮಾಡುವ ವಿಶ್ವಾಸ ತಂಡದಲ್ಲಿ ಮೂಡಿದೆ.

2016 ಮತ್ತು 2020ರ ಟೂರ್ನಿಗಳಲ್ಲಿ ಭಾರತದ ಪುರುಷರ ತಂಡಗಳು ಕಂಚಿನ ಪದಕ ಜಯಿಸಿದ್ದವು. ಆದರೆ ಮಹಿಳೆಯರ ತಂಡವು ಇದೇ ಮೊದಲ ಸಲ ಫೈನಲ್ ಪ್ರವೇಶಿಸಿತ್ತು. ಒಲಿಂಪಿಯನ್ ಪಿ.ವಿ. ಸಿಂಧು ನೇತೃತ್ವದ ತಂಡವು ಚಿನ್ನದ ಸಾಧನೆ ಮಾಡಿತು.

'ಭಾರತದ ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಇದೊಂದು ಮಹತ್ವದ ಸಾಧನೆಯಾಗಿದೆ. ಯುವ ಆಟಗಾರರಿಗೆ ಈ ಶ್ರೇಯ ಸಲ್ಲಬೇಕು. ಅವರು ಅಮೋಘವಾಗಿ ಆಡಿದರು. ತಂಡದಲ್ಲಿದ್ದ ಎಲ್ಲರೂ ಪರಸ್ಪರ ಉತ್ತಮ ಹೊಂದಾಣಿಕೆ ಮತ್ತು ಬೆಂಬಲದೊಂದಿಗೆ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಭಾರತ ತಂಡವು ಥಾಮಸ್ ಕಪ್ ಜಯಿಸಿದ್ದ ರೀತಿಯ ಸಾಧನೆಯನ್ನು ಮಹಿಳಾ ತಂಡವು ನೆನಪಿಸಿದೆ’ ಎಂದು ಭಾರತ ತಂಡದ ಮಾಜಿ ಕೋಚ್ ವಿಮಲ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಫೈನಲ್‌ನಲ್ಲಿ ಆಡಿದ ಥಾಯ್ಲೆಂಡ್ ತಂಡದಲ್ಲಿ ಇಬ್ಬರು ಪ್ರಮುಖ ಆಟಗಾರ್ತಿಯರು ಇರಲಿಲ್ಲ. ಸಿಂಗಲ್ಸ್‌ನಲ್ಲಿ ವಿಶ್ವ ರ‍್ಯಾಂಕಿಂಗ್‌ನ 13ನೇ ಸ್ಥಾನದಲ್ಲಿರುವ ರಚಾನೊಕ್ ಇಂಟನಾನ್ ಮತ್ತು 16ನೇ ರ‍್ಯಾಂಕ್ ಆಟಗಾರ್ತಿ ಪಾರ್ನ್‌ಪಾವಿ ಚೋಚುವಾಂಗ್ ಅವರು ಈ ಬಾರಿ ಇರಲಿಲ್ಲ.

ಭಾರತದ ಪಿ.ವಿ. ಸಿಂಧು ಗಾಯದಿಂದಾಗಿ ನಾಲ್ಕು ತಿಂಗಳು ವಿಶ್ರಾಂತಿ ಪಡೆದು ಕಣಕ್ಕೆ ಮರಳಿದ್ದಾರೆ. ಈ ಪಂದ್ಯದಲ್ಲಿ ಅವರು ತಂಡಕ್ಕೆ ಉತ್ತಮ ಆರಂಭ ನೀಡಿದರು.

ಎರಡು ಒಲಿಂಪಿಕ್ ಪದಕವಿಜೇತ ಆಟಗಾರ್ತಿ ಸಿಂಧು ಮೊದಲ ಸಿಂಗಲ್ಸ್‌ನಲ್ಲಿ 21–12, 21–12ರಿಂದ 17ನೇ ರ‍್ಯಾಂಕ್ ಆಟಗಾರ್ತಿ ಸುಪನಿದಾ ಕೆಟೆಥಾಂಗ್ ವಿರುದ್ಧ ಗೆದ್ದು 1–0 ಮುನ್ನಡೆ ಒದಗಿಸಿದರು.

24ನೇ ರ‍್ಯಾಂಕ್‌ನಲ್ಲಿರುವ ಭಾರತದ ತ್ರಿಸಾ ಜೊಲಿ ಮತ್ತು ಗಾಯತ್ರಿ ಗೋಪಿಚಂದ್ 21–16, 18–21, 21–16ರಿಂದ ಥಾಯ್ಲೆಂಡ್‌ನ 10ನೇ ರ‍್ಯಾಂಕ್ ಜೋಡಿ ಜಾಗ್‌ಕೊಲ್ಪಾನ್ ಕಿಟಿತಾರ್ಕುಲ್ ಮತ್ತು ರವಿಂದಾ ಪ್ರಾ ಜೊಂಗ್‌ಜೈ ವಿರುದ್ಧ ಗೆದ್ದು ತಂಡವನ್ನು 2–0 ಮುನ್ನಡೆಗೆ ತಂದರು.

ಆದರೆ ಎರಡನೇ ಸಿಂಗಲ್ಸ್‌ನಲ್ಲಿ ಭಾರತದ ಅಷ್ಮಿತಾ ಚಾಲಿಹಾ 11–21, 14–21ರಿಂದ ಬುಸಾನನ್ ಒಂಗ್‌ಬಾಮ್ರುಂಗ್‌ಪಾನ್ ವಿರುದ್ಧ ಮಣಿದರು.

ಡಬಲ್ಸ್‌ನಲ್ಲಿ 107ನೇ ರ‍್ಯಾಂಕ್ ಜೋಡಿ ಶ್ರುತಿ ಮಿಶ್ರಾ ಮತ್ತು ಪ್ರಿಯಾ ಕೊಂಜೆಂಗ್‌ಬಾಲ್ 11–21, 9–21ರಿಂದ 13ನೇ ರ‍್ಯಾಂಕ್‌ನ ಬೆನಯಾಪಾ ಏಮಸಾರ್ದ್ ಮತ್ತು ನುನಟಾಕರ್ನ್ ಏಮ್‌ಸಾರ್ದ್ ವಿರುದ್ಧ ಸೋತರು. ಇದರಿಂದಾಗಿ 2–2ರ ಸಮಬಲವಾಯಿತು.

ಈ ಹಂತದಲ್ಲಿ ಮತ್ತೆ ಮಿಂಚಿದ ಅನ್ಮೋಲ್ ಖರ್ಬ್ ತಂಡದ ಚಿನ್ನದ ಕನಸು ಕಮರದಂತೆ ನೋಡಿಕೊಂಡರು.

ಸಿಂಗಲ್ಸ್‌ನಲ್ಲಿ ಅನ್ಮೋಲ್ 21–14, 21–9ರಿಂದ ಪಾರ್ನ್‌ಪಿಚಾ ಚೊಯಿಕೀವಾಂಗ್ ವಿರುದ್ಧ ಗೆದ್ದರು.

ಜಯದ ಪಾಯಿಂಟ್‌ ದಾಖಲಾಗಿದ್ದೇ ತಡ. ತಂಡದ ಎಲ್ಲ ಆಟಗಾರ್ತಿಯರು ಅಂಕಣದತ್ತ ಧಾವಿಸಿ ಅನ್ಮೋಲ್ ಅವರನ್ನು ಹೆಗಲ ಮೇಲೆ ಹೊತ್ತು ಮೆರೆಸಿದರು. ಸೆಟಿಯಾ ಸಿಟಿ ಕನ್ವೆಷನ್ ಸೆಂಟರ್‌ನಲ್ಲಿ ಭಾರತದ ಆಟಗಾರ್ತಿಯರ ಸಂತಸ ಹೊನಲಾಗಿ ಹರಿಯಿತು. ಪ್ರೇಕ್ಷಕರ ಗ್ಯಾಲರಿಯಲ್ಲಿ ತ್ರಿವರ್ಣ ಧ್ವಜಗಳು ಹಾರಾಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT