ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಲಿಂಪಿಕ್‌ ಸಂಸ್ಥೆ ಖಜಾಂಚಿಗೆ ಅಧ್ಯಕ್ಷೆ ಪಿ.ಟಿ. ಉಷಾ ನೋಟಿಸ್‌

ಹುದ್ದೆಗೆ ಆಯ್ಕೆಗಿರುವ ಅರ್ಹತೆ ಪ್ರಶ್ನಿಸಿ ಐಒಎಗೆ ಬಂದಿದ್ದ ದೂರು
Published : 12 ಸೆಪ್ಟೆಂಬರ್ 2024, 14:07 IST
Last Updated : 12 ಸೆಪ್ಟೆಂಬರ್ 2024, 14:07 IST
ಫಾಲೋ ಮಾಡಿ
Comments

ನವದೆಹಲಿ: ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಖಜಾಂಚಿ ಸಹದೇವ್ ಯಾದವ್ ಅವರಿಗೆ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾಅವರು ಷೋಕಾಸ್ ನೋಟಿಸ್‌ ಜಾರಿಮಾಡಿದ್ದಾರೆ. ಸಹದೇವ್ ಅವರ ಆಯ್ಕೆಯು ರಾಷ್ಟ್ರೀಯ ಕ್ರೀಡಾ ಸಂಹಿತೆ ಉಲ್ಲಂಘಿಸಿದೆ ಎಂಬ ದೂರುಗಳನ್ನು ಅನುಸರಿಸಿ ಅವರು ಈ ಕ್ರಮ ಕೈಗೊಂಡಿದ್ದಾರೆ.

ಸೆ. 10ರಂದು ನೋಟಿಸ್‌ ಜಾರಿಗೊಳಿಸಿದ್ದು, ಇದೇ 24ರ ಒಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ. ‘ಕಳೆದ ಚುನಾವಣೆಯಲ್ಲಿ ಖಜಾಂಚಿ ಹುದ್ದೆಗೆ ನಿಮಗಿರುವ ಅರ್ಹತೆಯನ್ನು ಪ್ರಶ್ಜಿಸಿ ಭಾರತ ಒಲಿಂಪಿಕ್‌ ಸಂಸ್ಥೆಗೆ ಇತ್ತೀಚೆಗೆ ಅಧಿಕೃತವಾಗಿ ದೂರು ಸಲ್ಲಿಸಿರುವುದನ್ನು ಗಮನಕ್ಕೆ ತರಲು ಈ ಪತ್ರ ನೀಡಲಾಗಿದೆ’ ಎಂದು ಉಷಾ ನೋಟಿಸ್‌ನಲ್ಲಿ ಬರೆದಿದ್ದಾರೆ.

‘ದೂರುದಾರರು, ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಪ್ರಸ್ತಾಪಿಸಿದ್ದು, ಅದು ಖಜಾಂಚಿ ಹುದ್ದೆಗೆ ಸ್ಪರ್ಧಿಸಲು ನಿಮಗಿರುವ ಅರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸುತ್ತದೆ’ ಎಂದು ಪತ್ರದಲ್ಲಿ ಉಷಾ ವಿವರಿಸಿದ್ದಾರೆ.

ಇದರ ಪ್ರತಿಯನ್ನು ಕ್ರೀಡಾ ಸಚಿವ ಮನ್ಸುಖ್‌ ಮಾಂಡವೀಯ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಎನ್‌ಒಸಿ (ರಾಷ್ಟ್ರೀಯ ಒಲಿಂಪಿಕ್ ಸಮಿತಿ) ಸಂಬಂಧಗಳ ವಿಭಾಗದ ಅಸೋಸಿಯೇಟ್‌ ನಿರ್ದೇಶಕ ಜೆರೋಮ್ ಪೊಯಿವೆ ಅವರಿಗೂ ಕಳುಹಿಸಿದ್ದಾರೆ.

ಕ್ರೀಡಾಸಂಹಿತೆ ನಿಗದಿಪಡಿಸಿರುವ ವಯಸ್ಸು ಮತ್ತು ಅವಧಿಯನ್ನು ಮೀರಿ ಯಾದವ್‌ ಮತ್ತು ಕೆಲವು ಅಧಿಕಾರಿಗಳು ಹುದ್ದೆಯಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸತತ 12 ವರ್ಷಗಳ ಅಧಿಕಾರದ ನಂತರ ಪದಾಧಿಕಾರಿಯು ಆ ಹುದ್ದೆಯಿಂದ ಕೆಳಗಿಳಿಯುವುದು ಕಡ್ಡಾಯ ಎಂದು ಸಂಹಿತೆ ಹೇಳುತ್ತದೆ.

ಯಾದವ್‌ ಅವರು ಭಾರತ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ನ ಮಾಜಿ ಕಾರ್ಯದರ್ಶಿಯಾಗಿದ್ದು, ಅದರ ಆಡಳಿ ಮಂಡಳಿಯಲ್ಲಿ 15 ವರ್ಷ ಕೆಲಸ ಮಾಡಿದ್ದರು.

ದೂರುದಾರರು ಕ್ರೀಡಾ ಸಂಹಿತೆ ಉಲ್ಲಂಘಿಸಿ ಅಧಿಕಾರದಲ್ಲಿರುವ ಇನ್ನೂ ಕೆಲವು ಸದಸ್ಯರ ಅರ್ಹತೆಯ ಬಗ್ಗೆ ಇಂಥದ್ದೇ ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ. ಇವರಲ್ಲಿ ರಾಷ್ಟ್ರೀಯ ರೈಫಲ್‌ ಸಂಸ್ಥೆ ಉಪಾಧ್ಯಕ್ಷ ಅಜಯ್ ಪಟೇಲ್, ವುಸು ಫೆಡರೆಷನ್ ಆಫ್‌ ಇಂಡಿಯಾದ ಭೂಪಿಂದರ್ ಸಿಂಗ್‌ ಬಜ್ವಾ ಮತ್ತು ಭಾರತ ರೋಯಿಂಗ್ ಫೆಡರೇಷನ್‌ನ ಅಧ್ಯಕ್ಷ ರಾಜಕುಮಾರ್ ಸಿಂಗ್ ದೇವ್ ಒಳಗೊಂಡಿದ್ದಾರೆ.

ಐಒಎ ಒಳಗೆ ನಡೆಯುತ್ತಿರುವ ಅಂತಃಕಲಹಕ್ಕೆ ಈ ಬೆಳವಣಿಗೆ ಇನ್ನಷ್ಟು ಕಾವೇರಿಸಿದೆ. ಉಷಾ ಅವರು ಐಒಎ ಅಧ್ಯಕ್ಷೆಯಾದ ನಂತರ ಅವರ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ನಡುವೆ ಶೀತಲಸಮರ ನಡೆಯುತ್ತಿದೆ. ಉಷಾ ನೇಮಕ ಮಾಡಿದ ಐಒಎ ಸಿಇಒ ರಘುರಾಮ ಅಯ್ಯರ್ ವಿರುದ್ಧವೂ ಸಮಿತಿ ಸದಸ್ಯರು ಅಮಾನತು ಆದೇಶಕ್ಕೆ ಸಹಿ ಮಾಡಿದ್ದರು. ಐಒಎ ಅಧ್ಯಕ್ಷರಿಗೆ ಕಾರ್ಯನಿರ್ವಾಹಕ ಸಹಾಯಕರಾಗಿ ನೇಮಕಗೊಂಡ ಅಜಯ್‌ ನಾರಂಗ್ ಅವರನ್ನೂ ತಾವು ವಜಾ ಮಾಡಿರುವುದಾಗಿ ಸದಸ್ಯರು ಹೇಳಿಕೊಂಡಿದ್ದರು.

ಉಷಾ ಅವರು ನಾರಂಗ್ ಅವರನ್ನು ವಜಾಗೊಳಿಸಿದ ಪತ್ರ ಸ್ವೀಕರಿಸಿದ್ದರೂ, ಅದು ಕಾನೂನುಬಾಹಿರವಾಗಿದೆ ಎಂದು ತಿರಸ್ಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT