ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣದ ಬಾಲಕಿಯರು ಚಾಂಪಿಯನ್‌

ರಾಷ್ಟ್ರೀಯ ಕಬಡ್ಡಿ: ಕರ್ನಾಟಕಕ್ಕೆ ಉತ್ತಮ ತಂಡ ಗೌರವ
Last Updated 27 ಜನವರಿ 2019, 20:15 IST
ಅಕ್ಷರ ಗಾತ್ರ

ಧಾರವಾಡ: ಪಂದ್ಯದ ಆರಂಭದಿಂದಲೇ ವೇಗವಾಗಿ ಅಂಕಗಳನ್ನು ಕಲೆಹಾಕಿದ ಹರಿಯಾಣ ತಂಡ 14 ವರ್ಷದ ಒಳಗಿನವರ 64ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಪ್ರಶಸ್ತಿ ಜಯಿಸಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ ಸಹಯೋಗದಲ್ಲಿ ಇಲ್ಲಿನಡೆದ ಟೂರ್ನಿಯ ಫೈನಲ್‌ನಲ್ಲಿ ಹರಿಯಾಣ 48–19ರಲ್ಲಿ ಉತ್ತರಪ್ರದೇಶವನ್ನು ಮಣಿಸಿತು.

ಮೊದಲರ್ಧದ ಆಟ ಮುಗಿದಾಗ ಹರಿಯಾಣ 22–12ರಲ್ಲಿ ಮುನ್ನಡೆ ಹೊಂದಿತ್ತು. ಆರಂಭದಲ್ಲಿ ಲಭಿಸಿದ್ದ ಮುನ್ನಡೆಯನ್ನು ಕೊನೆಯವರೆಗೂ ಉಳಿಸಿಕೊಂಡಿದ್ದರಿಂದ ತಂಡಕ್ಕೆ ಪ್ರಶಸ್ತಿ ಜಯಿಸಲು ಸಾಧ್ಯವಾಯಿತು. ದ್ವಿತೀಯಾರ್ಧದಲ್ಲಿಯೂ‌ ಆಕ್ರಮಣಕಾರಿ ಆಟಕ್ಕೆ ಒತ್ತು ಕೊಟ್ಟ ಹರಿಯಾಣದ ಆಟಗಾರ್ತಿಯರು 26 ಅಂಕ ಕಲೆಹಾಕಿದರು. ಈ ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ 7 ಅಂಕ ಗಳಿಸಲಷ್ಟೇ ಸಾಧ್ಯವಾಯಿತು.

ಉತ್ತರಪ್ರದೇಶ ತಂಡದ ಸಿಮ್ರನ್ ತಿವಾರಿ (ಅತ್ಯುತ್ತಮ ರೈಡರ್‌), ದೆಹಲಿ ತಂಡದ ಮನೀಷಾ (ಅತ್ಯುತ್ತಮ ಕ್ಯಾಚರ್‌) ಮತ್ತು ಹರಿಯಾಣದ ಜ್ಯೋತಿ (ಅತ್ಯುತ್ತಮ ಆಲ್‌ರೌಂಡರ್‌) ವೈಯಕ್ತಿಕ ಪ್ರಶಸ್ತಿಗೆ ಭಾಜನರಾದರು. ಕರ್ನಾಟಕಕ್ಕೆ ಅತ್ಯುತ್ತಮ ತಂಡ ಪ್ರಶಸ್ತಿ ಲಭಿಸಿತು.

ಮೂರನೇ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ದೆಹಲಿ 27–26ರಲ್ಲಿ ಚತ್ತೀಸಗಡ ಎದುರು ಜಯ ಪಡೆಯಿತು. ಪ್ರತಿ ಹಂತದಲ್ಲಿ ಉಭಯ ತಂಡಗಳಿಂದಲೂ ಚುರುಕಿನ ಹೋರಾಟ ಕಂಡುಬಂತು. ರಜೆಯ ದಿನವಾಗಿದ್ದ ಕಾರಣ ಭಾನುವಾರದ ಪಂದ್ಯಗಳನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಕಬಡ್ಡಿ ಪ್ರೇಮಿಗಳು ಕ್ರೀಡಾಂಗಣಕ್ಕೆ ಬಂದಿದ್ದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಶಾಸಕ ಅಮೃತ ದೇಸಾಯಿ,ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ವಲಯದ ಹೆಚ್ಚುವರಿ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಉಪನಿರ್ದೇಶಕ ಆರ್‌.ಎಸ್.ಮಳ್ಳೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT