ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಕ ಜಯದ ಸಾಮರ್ಥ್ಯ ಭಾರತಕ್ಕಿದೆ: ಅನುಭವಿ ಗೋಲ್‌ಕೀಪರ್ ಶ್ರೀಜೇಶ್ ವಿಶ್ವಾಸ

ಅನುಭವಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ವಿಶ್ವಾಸ
Last Updated 26 ಜುಲೈ 2022, 14:11 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಕಳೆದ ಒಂದು ದಶಕದಲ್ಲಿ ಕೆಲವು ಅವಿಸ್ಮರಣೀಯ ಸಾಧನೆಗಳಿಗೆ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ಒಂದಿಷ್ಟು ಕಹಿನೆನಪುಗಳನ್ನೂ ಉಂಡಿದ್ದಾರೆ.

ಇದೀಗ ತಮ್ಮ ವೃತ್ತಿಜೀವನದ ಪ್ರಮುಖ ಘಟ್ಟದಲ್ಲಿ ಅವರಿದ್ದಾರೆ. ಮೂರನೇ ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡದ ಗೋಲುಪೆಟ್ಟಿಗೆಯ ರಕ್ಷಕನಾಗಿ ಕಣಕ್ಕಿಳಿಯಲಿದ್ದಾರೆ. ಕೇರಳದ 34 ವರ್ಷದ ಶ್ರೀಜೇಶ್‌ಗೆ ಇದು ಬಹುತೇಕ ಕೊನೆಯ ಕಾಮನ್‌ವೆಲ್ತ್ ಕೂಟವಾಗಲಿದೆ.

ಹೋದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಇತಿಹಾಸ ಬರೆದಿದ್ದ ಭಾರತ ತಂಡದ ಶ್ರೀಜೇಶ್ ಮಿಂಚಿದ್ದರು. ಅವರ ಅನುಭವ ಮತ್ತು ಚುರುಕಾದ ಗೋಲ್‌ಕೀಪಿಂಗ್ ಬಲದಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿಯೂ ಭಾರತ ತಂಡವು ಚಿನ್ನದ ಪದಕ ಜಯಿಸುವತ್ತ ಕಣ್ಣಿಟ್ಟಿದೆ.

‘ಜೀವನ ಯಾವಾಗಲೂ ಒಂದೇ ತರಹ ಇರುವುದಿಲ್ಲ. ಏರಿಳಿತಗಳು, ಬದಲಾವಣೆಗಳು ಸಹಜ. ನನ್ನ ಕ್ರೀಡಾಜೀವನದಲ್ಲಿ ಬಹಳಷ್ಟು ಏಳುಬೀಳುಗಳನ್ನು ಕಂಡಿದ್ದೇನೆ. ವೃತ್ತಿಜೀವನದ ಆರಂಭದಲ್ಲ ಸೋಲುಗಳನ್ನು ಎದುರಿಸಿರುವೆ. ನಂತರ ಅನುಭವ ಗಳಿಸುತ್ತ ಈಗ ಭಾರತ ಹಾಕಿ ತಂಡದ ಅಗ್ರಕ್ರಮಾಂಕದ ಗೋಲ್‌ಕೀಪರ್ ಆಗಿದ್ದೇನೆ’ ಎಂದು ಶ್ರೀಜೇಶ್ ಸಂದರ್ಶನದಲ್ಲಿ ಹೇಳಿದ್ದಾರೆ.

‘2012ರ ಲಂಡನ್ ಒಲಿಂಪಿಕ್ ಕೂಟದ ನಿರಾಶೆಯೊಂದಿಗೆ ವೃತ್ತಿಜೀವನ ಆರಂಭವಾಗಿತ್ತು. ಟೋಕಿಯೊದಲ್ಲಿ ಕಂಚಿನ ಪದಕ ಜಯಿಸಿದ ಸಿಹಿಕ್ಷಣವೂ ನನ್ನ ಪಾಲಿನದ್ದಾಯಿತು. ಈ ನಡುವೆ ಭಾರತ ತಂಡದ ನಾಯಕತ್ವ ವಹಿಸಿದ್ದೆ. ಆದರೆ, ಲೆಗ್‌ಮೆಂಟ್‌ ಗಾಯದಿಂದಾಗಿಯೇ ನನ್ನ ಬಹುತೇಕ ಸಮಯವು ಕಳೆದುಹೋಯಿತು. ಕೇರಳದಲ್ಲಿ ಅವಿಯಾಲ ಎಂಬ ಜನಪ್ರಿಯ ಖಾದ್ಯವಿದೆ. ಅದರಲ್ಲಿ 13 ತರಕಾರಿಗಳನ್ನು ಬಳಸಿ ಸಾರು ಮಾಡಲಾಗುತ್ತದೆ. ಅದೇ ತರಹ ನನ್ನ ವೃತ್ತಿಜೀವನ ಕೂಡ. ತರಹೇವಾರಿ ಅನುಭವಗಳು ಮಿಶ್ರಣಗೊಂಡಿವೆ’ಎಂದು ಮಾರ್ಮಿಕವಾಗಿ ಹೇಳಿದರು.

‘ಈ ಬಾರಿಯ ಕಾಮನ್‌ವೆಲ್ತ್ ಕೂಟದಲ್ಲಿ ತಂಡವು ಫೈನಲ್ ತಲುಪಲು ಸಮರ್ಥವಾಗಿದೆ. ಆಸ್ಟ್ರೇಲಿಯಾ ವಿಶ್ವದಲ್ಲಿಯೇ ಉತ್ತಮ ಸಾಮರ್ಥ್ಯ ಹೊಂದಿರುವ ತಂಡವಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೂ ಉತ್ತಮವಾಗಿ ಆಡಿದ್ದರು. ಅವರನ್ನು ಸೋಲಿಸುವುದು ಕಠಿಣ ಸವಾಲು. ಆದರೆ ನಾವು ಯಾವುದೇ ತಂಡವನ್ನೂ ಹಗುರವಾಗಿ ಪರಿಗಣಿಸಿಯೇ ಇಲ್ಲ. ಎಲ್ಲವನ್ನೂ ಗಂಭೀರವಾಗಿಯೇ ಎದುರಿಸಲಿದ್ದೇವೆ’ ಎಂದರು.

ಭಾರತ ತಂಡವು ಕಾಮನ್‌ವೆಲ್ತ್‌ ಕೂಟದಲ್ಲಿ ಎರಡು ಬಾರಿ ಬೆಳ್ಳಿಪದಕ ಜಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT