ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಂಗ್‌ಜಂಪ್‌: ಶ್ರೀಶಂಕರ್‌ಗೆ ಮೂರನೇ ಸ್ಥಾನ

ಪ್ಯಾರಿಸ್‌ ಡೈಮಂಡ್‌ ಲೀಗ್‌ ಲಾಂಗ್‌ಜಂಪ್‌ ಸ್ಪರ್ಧೆ
Published 10 ಜೂನ್ 2023, 13:38 IST
Last Updated 10 ಜೂನ್ 2023, 13:38 IST
ಅಕ್ಷರ ಗಾತ್ರ

ಪ್ಯಾರಿಸ್‌ (ಪಿಟಿಐ): ಭಾರತದ ಲಾಂಗ್‌ಜಂಪ್‌ ಸ್ಪರ್ಧಿ ಮುರಳಿ ಶ್ರೀಶಂಕರ್‌ ಅವರು ಪ್ಯಾರಿಸ್‌ ಡೈಮಂಡ್‌ ಲೀಗ್‌ ಕೂಟದಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಮೂರನೇ ಸ್ಥಾನ ಪಡೆದುಕೊಂಡರು.

ಶುಕ್ರವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಅವರು 8.09 ಮೀ. ದೂರ ಜಿಗಿಯುವಲ್ಲಿ ಯಶಸ್ವಿಯಾದರು. ಪ್ರತಿಷ್ಠಿತ ಡೈಮಂಡ್‌ ಲೀಗ್‌ನಲ್ಲಿ ಅವರು ಅಗ್ರ ಮೂರರಲ್ಲಿ ಸ್ಥಾನ ಪಡೆದದ್ದು ಇದೇ ಮೊದಲು. ನೀರಜ್‌ ಚೋಪ್ರಾ ಮತ್ತು ವಿಕಾಸ್‌ ಗೌಡ ಬಳಿಕ ಈ ಸಾಧನೆ ಮಾಡಿದ ಭಾರತದ ಮೂರನೇ ಅಥ್ಲೀಟ್‌ ಎನಿಸಿಕೊಂಡರು.

ಜಾವೆಲಿನ್‌ ಥ್ರೋ ಸ್ಪರ್ಧಿ ಚೋಪ್ರಾ, ಹಲವು ಡೈಮಂಡ್‌ ಲೀಗ್‌ ಕೂಟಗಳಲ್ಲಿ ಅಗ್ರಸ್ಥಾನ ಪಡೆದಿದ್ದರೆ, ಷಾಟ್‌ಪಟ್‌ ಸ್ಪರ್ಧಿ ವಿಕಾಸ್‌ ಅವರು ಎರಡು ಸಲ (2012 ರಲ್ಲಿ ನ್ಯೂಯಾರ್ಕ್‌ ಮತ್ತು 2014 ರಲ್ಲಿ ದೋಹಾ) ಎರಡನೇ ಸ್ಥಾನ ಹಾಗೂ ಇನ್ನೆರಡು ಸಲ ಮೂರನೇ ಸ್ಥಾನ (2015ರಲ್ಲಿ ಶಾಂಘೈ ಮತ್ತು ಯೂಜಿನ್) ತಮ್ಮದಾಗಿಸಿಕೊಂಡಿದ್ದರು.

ಒಲಿಂಪಿಕ್‌ ಚಾಂಪಿಯನ್‌ ಮತ್ತು ವಿಶ್ವದ ಅಗ್ರ ರ್‍ಯಾಂಕ್‌ನ ಲಾಂಗ್‌ಜಂಪರ್‌ ಗ್ರೀಸ್‌ನ ಮಿಲ್ತಿಯಾದಿಸ್‌ ತೆಂತೊಗ್ಲು ಅವರು 8.13 ಮೀ. ಸಾಧನೆಯೊಂದಿಗೆ ಅಗ್ರಸ್ಥಾನ ಪಡೆದುಕೊಂಡರೆ, ಸ್ವಿಟ್ಜರ್‌ಲೆಂಡ್‌ನ ಸೈಮನ್ ಹ್ಯಾಮರ್ (8.11 ಮೀ.) ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.

ಶ್ರೀಶಂಕರ್‌ ತಮ್ಮ ಮೂರನೇ ಪ್ರಯತ್ನದಲ್ಲಿ 8.09 ಮೀ. ದೂರ ಕಂಡುಕೊಂಡರು. ಈ ಋತುವಿನ ಅವರ ಉತ್ತಮ ಸಾಧನೆ 8.18 ಮೀ. ಆಗಿದೆ. 24 ವರ್ಷದ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 8.36 ಮೀ. ಆಗಿದ್ದು, ಕಳೆದ ವರ್ಷ ದಾಖಲಾಗಿತ್ತು.

ಶ್ರೀಶಂಕರ್‌ ಅವರ ವೃತ್ತಿಜೀವನದ ಎರಡನೇ ಡೈಮಂಡ್‌ ಲೀಗ್‌ ಕೂಟ ಇದಾಗಿತ್ತು. ಕಳೆದ ವರ್ಷ ಮೊನಾಕೊ ಡೈಮಂಡ್‌ ಲೀಗ್‌ನಲ್ಲಿ ಆರನೇ ಸ್ಥಾನ ಗಳಿಸಿದ್ದರು.

ಕಿಪ್ಯೆಗನ್‌ ಮತ್ತೊಂದು ವಿಶ್ವದಾಖಲೆ ಪ್ಯಾರಿಸ್‌:

ಕೆನ್ಯಾದ ಫೆಯ್ತ್‌ ಕಿಪ್ಯೆಗನ್‌ ಮಹಿಳೆಯರ 5000 ಮೀ. ಓಟದಲ್ಲಿ ಹೊಸ ವಿಶ್ವದಾಖಲೆ ಸ್ಥಾಪಿಸಿದರು. ಒಂದು ವಾರದ ಹಿಂದೆಯಷ್ಟೇ ಅವರು 1500 ಮೀ. ಓಟದಲ್ಲಿ ವಿಶ್ವದಾಖಲೆ ಮಾಡಿದ್ದರು. ಶುಕ್ರವಾರ ನಡೆದ ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಕಿಪ್ಯೆಗನ್ 14 ನಿ. 5.20 ಸೆ.ಗಳಲ್ಲಿ ಗುರಿ ತಲುಪಿದರು. ಇಥಿಯೋಪಿಯದ ಲೆಟೆಸೆನ್‌ಬೆಟ್ ಗಿಡೆ 2020 ರಲ್ಲಿ 14 ನಿ. 6.62 ಸೆ.ಗಳೊಂದಿಗೆ ಸ್ಥಾಪಿಸಿದ್ದ ದಾಖಲೆಯನ್ನು ಮುರಿದರು. ಗಿಡೆ ಅವರು ಶುಕ್ರವಾರ ಎರಡನೇ ಸ್ಥಾನ (14 ನಿ. 7.94 ಸೆ.) ಪಡೆದರು. ಕಿಪ್ಯೆಗನ್‌ ಕಳೆದ ಶುಕ್ರವಾರ ಇಟಲಿಯ ಫ್ಲಾರೆನ್ಸ್‌ನಲ್ಲಿ ನಡೆದಿದ್ದ ಕೂಟದ 1500 ಮೀ. ಓಟವನ್ನು 3 ನಿ. 49.11 ಸೆ.ಗಳಲ್ಲಿ ಪೂರೈಸಿ ವಿಶ್ವದಾಖಲೆ ಸ್ಥಾಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT