ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಲೀಗ್‌: ಮಂಡ್ಯ ಬುಲ್ಸ್‌ ಗೆಲುವಿನ ಓಟ

ಜಿಪಿಬಿಎಲ್‌: ಕೆಜಿಎಫ್‌ ವೂಲ್ವ್ಸ್‌ ತಂಡಕ್ಕೆ ನಿರಾಸೆ
Last Updated 19 ಆಗಸ್ಟ್ 2022, 14:12 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಬುಲ್ಸ್‌ ತಂಡದವರು ಇಲ್ಲಿ ನಡೆಯುತ್ತಿರುವ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಲೀಗ್‌ನ ‘ಸೂಪರ್‌ ಲೀಗ್‌’ ಹಂತದಲ್ಲಿ ಜಯ ಸಾಧಿಸಿದರು.

ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬುಲ್ಸ್‌ 6–3 ರಲ್ಲಿ ಕೆಜಿಎಫ್‌ ವೂಲ್ವ್ಸ್‌ ವಿರುದ್ಧ ಗೆದ್ದಿತು.

ಅನನ್ಯ ಪ್ರವೀಣ್‌ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ 15–14, 15–13 ರಲ್ಲಿ ಗ್ಲೋರಿಯಾ ವಿಜಯಕುಮಾರ್‌ ಅವರನ್ನು ಮಣಿಸಿ ಬುಲ್ಸ್‌ಗೆ ಮುನ್ನಡೆ ತಂದಿತ್ತರು.

ಪುರುಷರ ಡಬಲ್ಸ್‌ನಲ್ಲಿ ಆಶಿತ್‌ ಸೂರ್ಯ– ಸಾಯ್ ಪ್ರತೀಕ್‌ ಜೋಡಿ 15–9, 15–13 ರಲ್ಲಿ ಪ್ರಕಾಶ್‌ ರಾಜ್‌ ಮತ್ತು ವಿ.ಸುಹಾಸ್‌ ಅವರನ್ನು ಸೋಲಿಸಿತು. ಇದು ‘ಟ್ರಂ‍ಪ್‌’ ಪಂದ್ಯ ಆಗಿದ್ದರಿಂದ ಎರಡು ಪಾಯಿಂಟ್‌ ಗಿಟ್ಟಿಸಿಕೊಂಡ ಮಂಡ್ಯ, 3–0 ರಲ್ಲಿ ಮೇಲುಗೈ ಸಾಧಿಸಿತು.

ಆದರೆ ‍ಪುರುಷರ ಸಿಂಗಲ್ಸ್‌ನಲ್ಲಿ ನರೇನ್‌ ಅಯ್ಯರ್‌ 15–14, 15–14 ರಲ್ಲಿ ಅನಿರುದ್ಧ ದೇಶಪಾಂಡೆ ಅವರನ್ನು ಮಣಿಸಿ ಕೆಜಿಎಫ್‌ ತಂಡದ ಹಿನ್ನಡೆ ತಗ್ಗಿಸಿದರು. ಮಿಶ್ರ ಡಬಲ್ಸ್‌ನಲ್ಲಿ ವೂಲ್ವ್ಸ್‌ ತಂಡದ ಹೇಮಂತ್‌ ಎಂ.ಗೌಡ ಮತ್ತು ಪಿ.ಅಮೃತಾ ಅವರು 15–12, 10–15, 15–9 ರಲ್ಲಿ ನಿತಿನ್‌ ಮತ್ತು ರುತ್‌ ಮಿಶಾ ವಿನೋದ್‌ ಅವರನ್ನು ಮಣಿಸಿ 3–3 ರಲ್ಲಿ ಸಮಸ್ಥಿತಿಗೆ ತಂದರು.

ಇದರಿಂದ ಕೊನೆಯಲ್ಲಿ ನಡೆದ ‘ಸೂಪರ್‌ ಮ್ಯಾಚ್‌’ ಉಭಯ ತಂಡಗಳಿಗೂ ನಿರ್ಣಾಯಕ ಎನಿಸಿದವು. ಪ್ರಬಲ ಪೈಪೋಟಿ ನಡೆದ ಸೂಪರ್‌ ಮ್ಯಾಚ್‌ನಲ್ಲಿ ಆಶಿತ್‌ ಸೂರ್ಯ/ ಸಾಯ್‌ ಪ್ರತೀಕ್‌ ಮತ್ತು ಎಂ.ಮಧುಸೂದರ್‌ ಅವರು 22–20 ರಲ್ಲಿ ಹೇಮಂತ್‌ ಗೌಡ/ ಪ್ರಕಾಶ್‌ ರಾಜ್‌/ ಸುಹಾಸ್‌ ವಿರುದ್ಧ ಜಯಿಸಿದರು.

ಸೂಪರ್‌ ಮ್ಯಾಚ್‌ನಲ್ಲಿ ಬುಲ್ಸ್‌ ತಂಡ 7–14 ರಿಂದ ಹಿನ್ನಡೆ ಅನುಭವಿಸಿತ್ತು. ಆದರೆ ಮರುಹೋರಾಟ ನಡೆಸಿ ಗೆಲುವು ಪಡೆದು ಪಂದ್ಯದಲ್ಲಿ ಒಟ್ಟು ಆರು ಪಾಯಿಂಟ್ಸ್‌ ಸಂಗ್ರಹಿಸಿತು.

ಸೋಲಿನ ನಡುವೆಯೂ ಮೂರು ಪಾಯಿಂಟ್ಸ್‌ ಕಲೆಹಾಕಿದ ವೂಲ್ವ್ಸ್‌ ತಂಡ ಎರಡು ಪಂದ್ಯಗಳಿಂದ ಒಟ್ಟು ಏಳು ಪಾಯಿಂಟ್ಸ್ ಗಳಿಸಿದೆ. ಬುಲ್ಸ್‌ ಕೂಡಾ ಇಷ್ಟೇ ಪಾಯಿಂಟ್ಸ್‌ ಹೊಂದಿದೆ.

ಇಂದಿನ ಪಂದ್ಯಗಳು

ಮಲ್ನಾಡ್‌ ಫಾಲ್ಕನ್ಸ್‌– ಕೆಜಿಎಫ್‌ ವೂಲ್ವ್ಸ್‌ (ಮಧ್ಯಾಹ್ನ 12.30)

ಮಂಡ್ಯ ಬುಲ್ಸ್‌– ಮಂಗಳೂರು ಶಾರ್ಕ್ಸ್‌ (ಸಂಜೆ 7)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT