ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಾ ಬ್ಯಾಡ್ಮಿಂಟನ್: ಮಾನಸಿ–ತುಳಸಿಮತಿ ಜೋಡಿಗೆ ಚಿನ್ನ

ಪ್ರಮೋದ್ ಭಗತ್‌ಗೆ ಡಬಲ್‌ ಬೆಳ್ಳಿ
Published : 18 ಡಿಸೆಂಬರ್ 2023, 23:30 IST
Last Updated : 18 ಡಿಸೆಂಬರ್ 2023, 23:30 IST
ಫಾಲೋ ಮಾಡಿ
Comments

ನವದೆಹಲಿ: ಭಾರತದ ಮಾನಸಿ ಜೋಶಿ ಮತ್ತು ತುಳಸಿಮತಿ ಮುರುಗೇಶನ್ ಜೋಡಿಯು ದುಬೈ ಪ್ಯಾರಾ ಬ್ಯಾಡ್ಮಿಂಟನ್ ಅಂತರರಾಷ್ಟ್ರೀಯ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. 2023ರ ಟೋಕಿಯೊ ಪ್ಯಾರಾಲಿಂಪಿಕ್ ಚಾಂಪಿಯನ್ ಪ್ರಮೋದ್ ಭಗತ್ ಅವರು ಎರಡು ಬೆಳ್ಳಿ ಪದಕ ಗೆದ್ದರು.

ಡಿ.11ರಿಂದ 17ರವರೆಗೆ ಯುಎಇಯಲ್ಲಿ ನಡೆದ ಟೂರ್ನಿಯಲ್ಲಿ ಭಾರತದ ಆಟಗಾರರು ಒಂದು ಚಿನ್ನ, ಐದು ಬೆಳ್ಳಿ ಮತ್ತು ಎಂಟು ಕಂಚಿನ ಪದಕಗಳ ಸಾಧನೆ ಮಾಡಿದ್ದಾರೆ.

ವಿಶ್ವ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಎರಡನೇ ಕ್ರಮಾಂಕದ ಮಾನ್ಸಿ ಮತ್ತು ಮುರುಗೇಶನ್ ಜೋಡಿಯು ಎಸ್‌ಎಲ್ 3- ಎಸ್‌ಯು 5 ವಿಭಾಗದ ಫೈನಲ್‌ನಲ್ಲಿ 15-21, 21-14, 21-6ರಿಂದ ಇಂಡೊನೇಷ್ಯಾದ ಲಿಯಾನಿ ರಾತ್ರಿ ಒಕ್ಟಿಲಾ ಮತ್ತು ಖಲಿಮಟಸ್ ಸಾದಿಯಾ ಅವರನ್ನು ಮಣಿಸಿ ಚಿನ್ನ ಗೆದ್ದಿತ್ತು.

ಪುರುಷರ ಸಿಂಗಲ್ಸ್‌ನ (ಎಸ್‌ಎಲ್‌3) ಫೈನಲ್‌ನಲ್ಲಿ ಪ್ಯಾರಾ ಏಷ್ಯನ್ ಚಿನ್ನದ ಪದಕ ವಿಜೇತ ಭಗತ್‌ 17-21, 18-21 ರಿಂದ ಇಂಗ್ಲೆಂಡ್‌ನ ಡೇನಿಯಲ್ ಬೆಥೆಲ್ ವಿರುದ್ಧ ಸೋತು ರನ್ನರ್‌ ಅಪ್‌ ಸ್ಥಾನ ಪಡೆದರು.

ಮಿಶ್ರ ಡಬಲ್ಸ್‌ನ (ಎಸ್‌ಎಲ್‌3– ಎಸ್‌ಯು 5) ಫೈನಲ್‌ನಲ್ಲಿ ಭಗತ್‌ ಮತ್ತು ಮನೀಷಾ ರಾಮದಾಸ್ ಅವರು 14-21, 11-21ರಿಂದ ಇಂಡೊನೇಷ್ಯಾದ ಹಿಕ್ಮತ್ ರಾಮದಾನಿ ಮತ್ತು ಲಿಯಾನಿ ರಾತ್ರಿ ಒಕ್ಟಿಲಾ ಎದುರು ಪರಾಭವಗೊಂಡು, ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.‌ ಇದೇ ವಿಭಾಗದಲ್ಲಿ ಭಾರತದ ಕುಮಾರ್ ನಿತೇಶ್ ಮತ್ತು ತುಳಸಿಮತಿ ಮುರುಗೇಶನ್ ಕಂಚಿನ ಪದಕ ಗೆದ್ದಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ (ಎಸ್‌ಎಲ್ 4) ಸುಹಾಸ್ ಯತಿರಾಜ್ ಬೆಳ್ಳಿ ಗೆದ್ದರೆ, ಸುಕಾಂತ್ ಕದಂ ಮತ್ತು ತರುಣ್ ಕಂಚು ಜಯಿಸಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ (ಎಸ್‌ಎಲ್‌4) ಪಾಲಕ್ ಕೊಹ್ಲಿ ತೃತೀಯ ಸ್ಥಾನ ಪಡೆದರು.

ಪುರುಷರ ಡಬಲ್ಸ್‌ನಲ್ಲಿ (ಎಸ್‌ಐ 3- ಎಸ್‌ಎಲ್‌ 4) ಭಾರತದ ಮನೋಜ್ ಸರ್ಕಾರ್ ಮತ್ತು ಅವರ ಕೊರಿಯಾದ ಜೊತೆಗಾರ ಚೋ ನಾದನ್ ಬೆಳ್ಳಿ ಗೆದ್ದರೆ, ಕುಮಾರ್ ನಿತೇಶ್ ಮತ್ತು ತರುಣ್ ಜೋಡಿ ಕಂಚು ತಮ್ಮದಾಗಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT