ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಷೆಫ್-ಡಿ-ಮಿಷನ್ ಸ್ಥಾನದಿಂದ ಕೆಳಗಿಳಿದ ಮೇರಿ ಕೋಮ್

Published 12 ಏಪ್ರಿಲ್ 2024, 16:19 IST
Last Updated 12 ಏಪ್ರಿಲ್ 2024, 16:19 IST
ಅಕ್ಷರ ಗಾತ್ರ

ನವದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಎಂ.ಸಿ.ಮೇರಿ ಕೋಮ್ ಅವರು ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತ ತಂಡದ ಷೆಫ್-ಡಿ-ಮಿಷನ್‌ ಸ್ಥಾನವನ್ನು ಶುಕ್ರವಾರ ತ್ಯಜಿಸಿದ್ದಾರೆ. ಕೆಲವು ವೈಯಕ್ತಿಕ ಕಾರಣಗಳಿಂದಾಗಿ ತಮಗೆ ಅನ್ಯಮಾರ್ಗವಿಲ್ಲದೇ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ.

ಷೆಫ್‌–ಡಿ–ಮಿಷನ್ ಸ್ಥಾನದಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಕೋರಿ ಮೇರಿ ಕೋಮ್ ತಮಗೆ ಪತ್ರ ಬರೆದಿದ್ದಾರೆ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಪ್ರಕಟಿಸಿದ್ದಾರೆ.

‘ದೇಶಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸೇವೆ ಸಲ್ಲಿಸುವುದನ್ನು ಗೌರವವೆಂದು ಪರಿಗಣಿಸುತ್ತೇನೆ. ನಾನು ಅದಕ್ಕೆ ಮಾನಸಿಕವಾಗಿ ಸಿದ್ಧಳಾಗಿದ್ದೆ. ಆದರೆ ಪ್ರತಿಷ್ಠಿತ ಜವಾಬ್ದಾರಿಯನ್ನು ಎತ್ತಿಹಿಡಿಯಲು ನನ್ನಿಂದ  ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸುತ್ತೇನೆ. ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡಲು ಬಯಸಿದ್ದೇನೆ’ ಎಂದು ಉಷಾ ಅವರಿಗೆ ಬರೆದ ಪತ್ರದಲ್ಲಿ 41 ವರ್ಷದ ಬಾಕ್ಸರ್‌ ತಿಳಿಸಿದ್ದಾರೆ.

‘ಬದ್ಧತೆಯಿಂದ ಹಿಂದೆ ಸರಿಯುವುದಕ್ಕೆ ಮುಜುಗರವಾಗುತ್ತಿದೆ. ಆದರೆ ನನ್ನ ಮುಂದೆ ಬೇರೆ ಆಯ್ಕೆಯಿಲ್ಲ. ನನ್ನ ದೇಶ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತಿರುವ ಕ್ರೀಡಾಪಟುಗಳನ್ನು ಹುರಿದುಂಬಿಸಲು ನಾನು ಅಲ್ಲಿರಲಿದ್ದೇನೆ‘ ಎಂದು ಹೇಳಿದ್ದಾರೆ.

ಹಿರಿಯ ಟೇಬಲ್ ಟೆನಿಸ್ ಆಟಗಾರ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಶರತ್ ಕಮಲ್ ಅವರು 2024ರ ಒಲಿಂಪಿಕ್ ಕ್ರೀಡೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿ ಹಾಗೂ ಬಾಕ್ಸಿಂಗ್ ತಾರೆ ಎಂ.ಸಿ ಮೇರಿ ಕೋಮ್ ಅವರನ್ನು ತಂಡದ ಷೆಫ್ ಡಿ ಮಿಷನ್ ಮತ್ತು ಶಿವ ಕೇಶವನ್ ಅವರನ್ನು ಡೆಪ್ಯುಟಿ ಷೆಫ್‌ ಡಿ ಮಿಷನ್ ಆಗಿ ಐಒಎ ಮಾರ್ಚ್ 21ರಂದು ನೇಮಕ ಮಾಡಿತ್ತು.

‘ಒಲಿಂಪಿಕ್ಸ್‌ ಪದಕ ವಿಜೇತೆ ಬಾಕ್ಸರ್ ಮತ್ತು ಐಒಎ ಅಥ್ಲೀಟ್‌ಗಳ ಆಯೋಗದ ಅಧ್ಯಕ್ಷೆ ಮೇರಿ ಕೋಮ್ ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿರುವುದು ನಮಗೆ ಬೇಸರ ತಂದಿದೆ. ಅವರ ನಿರ್ಧಾರ ಮತ್ತು ಖಾಸಗಿತನವನ್ನು ನಾವು ಗೌರವಿಸುತ್ತೇವೆ’ ಎಂದು ಉಷಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನಾನು ಸಂಬಂಧಿಸಿದವರ ಜೊತೆ ಸಮಾಲೋಚನೆ ನಡೆಸುತ್ತೇನೆ ಮತ್ತು ಆ ಸ್ಥಾನಕ್ಕೆ ಮತ್ತೊಬ್ಬರ ಹೆಸರನ್ನು  ಶೀಘ್ರದಲ್ಲೇ ಘೋಷಣೆ ಮಾಡುತ್ತೇನೆ’ ಎಂದು ಅವರು ಹೇಳಿದರು.

ಮೇರಿ ಕೋಮ್ ಅವರ ಪತ್ರವನ್ನು ಸ್ವೀಕರಿಸಿದ ನಂತರ ಅವರೊಂದಿಗೆ ಮಾತನಾಡಿದ್ದೇನೆ ಎಂದು ಉಷಾ ಹೇಳಿದರು.

‘ನಾನು ಅವರ ಕೋರಿಕೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ಅವರ ನಿರ್ಧಾರವನ್ನು ಗೌರವಿಸುತ್ತೇನೆ. ಅವರು ಎಂದಿಗೂ ನನ್ನ ಮತ್ತು ಐಒಎ ಬೆಂಬಲ ಹೊಂದಿರುತ್ತಾರೆ ಎಂದು ಅವರಿಗೆ ತಿಳಿಸಿದ್ದೇನೆ. ಅವರ ಗೌಪ್ಯತೆಯನ್ನು ಗೌರವಿಸುವಂತೆ ಪ್ರತಿಯೊಬ್ಬರಲ್ಲೂ ವಿನಂತಿಸುತ್ತೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT