ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿನೇಶ್‌ಗೆ ನಾಡಾ ನೋಟಿಸ್

Published : 25 ಸೆಪ್ಟೆಂಬರ್ 2024, 14:42 IST
Last Updated : 25 ಸೆಪ್ಟೆಂಬರ್ 2024, 14:42 IST
ಫಾಲೋ ಮಾಡಿ
Comments

ನವದೆಹಲಿ (ಪಿಟಿಐ): ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮ್ಮ ಚಲನವಲನ ಮಾಹಿತಿಯನ್ನು ನಿಗದಿಯ ಅವಧಿಯಲ್ಲಿ ನೀಡಿಲ್ಲವೆಂಬ ಕಾರಣನೀಡಿರುವ  ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ)  ನೋಟಿಸ್ ಜಾರಿಗೊಳಿಸಿದೆ.

ಮುಂದಿನ 14 ದಿನಗಳಲ್ಲಿ ಈ ನೋಟಿಸ್‌ಗೆ ಉತ್ತರಿಸಬೇಕು ಎಂದೂ ಸೂಚಿಸಲಾಗಿದೆ. 

ನಾಡಾದಲ್ಲಿ ನೋಂದಾಯಿಸಿಕೊಂಡಿರುವ ಅಥ್ಲೀಟ್‌ಗಳು ತಮ್ಮ ಚಲನವಲನ ಮಾಹಿತಿಯನ್ನು ತಪ್ಪದೇ ನೀಡಬೇಕೆಂಬ ನಿಯಮವಿದೆ. 

ಸೆಪ್ಟೆಂಬರ್ 9ರಂದು ವಿನೇಶ್ ಅವರನ್ನು ಉದ್ದೀಪನ ಮದ್ದು ಸೇವನೆ ಪರೀಕ್ಷೆಗೊಳಪಡಿಸಲು ನಾಡಾ ಆಧಿಕಾರಿಯೊಬ್ಬರು ಸೋನಿಪತ್‌ನ ಖಾರ್ಕೋಡಾಗೆ ತೆರಳಿದ್ದರು. ಅಲ್ಲಿ ವಿನೇಶ್ ಅವರು ತಮ್ಮ ಮನೆಯಲ್ಲಿ ಲಭ್ಯವಿರಲಿಲ್ಲ. ಅವರು ತಮ್ಮ ಅಲಭ್ಯತೆ ಕುರಿತೂ ತಿಳಿಸಿರಲಿಲ್ಲ. 

‘ಚಲನವಲನ ಮಾಹಿತಿಯನ್ನು ನೀಡುವಲ್ಲಿ ವಿನೇಶ್ ಅವರು ವಿಫಲರಾಗಿದ್ದಾರೆ. ಆದ್ದರಿಂದ ತಮಗೆ ಔಪಚಾರಿಕ ನೋಟಿಸ್ ಜಾರಿ ಮಾಡಿದ್ಧೇವೆ. ತಾವು 14 ದಿನಗಳೊಳಗೆ ವಿವರಣೆ ನೀಡಬೇಕು. ನಾವು ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ತಮ್ಮ ಹೇಳಿಕೆಗಳನ್ನು ನೀಡಿ’ ಎಂದು ನಾಡಾ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.

‘ನಾಡಾ ಅಧಿಕಾರಿಯೊಬ್ಬರು ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ತಾವು ಪರೀಕ್ಷೆಗೆ ಲಭ್ಯರಾಗಲಿಲ್ಲ’ ಎಂದೂ ಉಲ್ಲೇಖ ಮಾಡಲಾಗಿದೆ. 

ವಿನೇಶ್ ಅವರು ಈಗ ತಮ್ಮ ಲೋಪವನ್ನು ಒಪ್ಪಿಕೊಳ್ಳಬೇಕು ಅಥವಾ ಅಧಿಕಾರಿ ಭೇಟಿ ನೀಡಿದ ಸ್ಥಳದಲ್ಲಿ ತಾವಿದ್ದ ಕುರಿತು ಸಾಕ್ಷಿ ಒದಗಿಸಬೇಕು. 

ಆದರೆ ನಿಯಮದ ಪ್ರಕಾರ ಚಲನವಲನ ಮಾಹಿತಿ ನೀಡುವಿಕೆಯಲ್ಲಿ ಒಂದು ಬಾರಿ ಲೋಪವಾದರೆ ಅದನ್ನು ಉದ್ದೀಪನ ಮದ್ದು ತಡೆ ನಿಯಮ ಉಲ್ಲಂಘನೆ ಎಂದು ಪರಿಗಣಿಸುವುದಿಲ್ಲ. 12 ತಿಂಗಳುಗಳ ಅವಧಿಯಲ್ಲಿ ಮೂರು ಬಾರಿ ಮಾಹಿತಿ ನೀಡುವಿಕೆಯಲ್ಲಿ ಲೋಪ ಮಾಡಿದ್ದರೆ ನಿಯಮ ಉಲ್ಲಂಘನೆಯಾಗುತ್ತದೆ.

ವಿನೇಶ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿ ಫೈನಲ್‌  ಪ್ರವೇಶಿಸಿದ್ದರು. ಆದರೆ ಚಿನ್ನದ ಪದಕದ ಬೌಟ್‌ಗೂ ಮುನ್ನ ತೂಕ ಪರೀಕ್ಷೆಯಲ್ಲಿ ಅವರು ಅನರ್ಹಗೊಂಡಿದ್ದರು. ಅದರ ಬೆನ್ನಲ್ಲಿಯೇ ಕುಸ್ತಿ ಕ್ರೀಡೆಗೆ ವಿದಾಯ ಘೋಷಿಸಿದ್ದರು. ಈಚೆಗಷ್ಟೇ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT